Amit Shah | ಗೃಹ ಸಚಿವ ಅಮಿತ್ ಷಾ 
ದೇಶ

ಡಾರ್ಜಿಲಿಂಗ್ ಗುಡ್ಡಗಾಡು ಸಮಸ್ಯೆಗೆ ಶೀಘ್ರವೇ ಶಾಶ್ವತ ಪರಿಹಾರ!...ಬಂಗಾಳ ನಾಯಕರ ಜೊತೆ ಸಭೆ ನಡೆಸಿ ಅಮಿತ್ ಷಾ ಮಹತ್ವದ ಘೋಷಣೆ | Amit Shah

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಗುಡ್ಡಗಾಡು ಪ್ರದೇಶದ ದೀರ್ಘಕಾಲದ ಸಮಸ್ಯೆಗಳಿಗೆ ಭಾರತದ ಸಂವಿಧಾನದ ಚೌಕಟ್ಟಿನಡಿಯಲ್ಲಿ ಶಾಶ್ವತ ರಾಜಕೀಯ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ತಿಳಿಸಿದ್ದಾರೆ. ಒಪ್ಪಂದದ ಅಂತಿಮ ವಿವರಗಳನ್ನು ರೂಪಿಸಲು ವಿಶೇಷ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಈ ವೇಳೆ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳದ ಗುಡ್ಡಗಾಡು ಜಿಲ್ಲೆಗಳ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಿಲಿಗುರಿಯಲ್ಲಿ ನಡೆಸಿದ ಉನ್ನತ ಮಟ್ಟದ ಸಂವಾದ ಸಭೆಯಲ್ಲಿ ಅಮಿತ್​ ಷಾ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಈ ಸಭೆಯಲ್ಲಿ ಗುಡ್ಡಗಾಡು ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಅವರ ಪ್ರತ್ಯೇಕ ಗುರುತಿನ ಬೇಡಿಕೆ, ಸಂವಿಧಾನಾತ್ಮಕ ಸ್ಥಾನಮಾನ ಹಾಗೂ ರಾಜಕೀಯ ಪರಿಹಾರದ ಕುರಿತು ಆಳವಾಗಿ ಮತ್ತು ವಿವರವಾಗಿ ಚರ್ಚಿಸಲಾಯಿತು.

ಆರ್ಥಿಕ ನೆರವಿನ ಭರವಸೆ ನೀಡಿದ ಅಮಿತ್​ ಷಾ!...

ಒಪ್ಪಂದದ ಅಂತಿಮ ವಿವರಗಳನ್ನು ಸಿದ್ಧಪಡಿಸಲು ಕೇಂದ್ರ ಸರ್ಕಾರದ ಮಾಜಿ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಪ್ರಸ್ತುತ ಗುಡ್ಡಗಾಡು ಪ್ರದೇಶದ ಆಡಳಿತಾತ್ಮಕ ಮಧ್ಯಸ್ಥಿಕೆದಾರರಾಗಿರುವ ಪಂಕಜ್​ ಕುಮಾರ್ ಸಿಂಗ್​ ಅವರ ನೇತೃತ್ವದಲ್ಲಿ ಈ ವಿಶೇಷ ಸಮಿತಿಯನ್ನು ರಚಿಸಲಾಗುತ್ತಿದೆ. ಈ ಸಮಿತಿಯು ಅಂತಿಮ ಒಪ್ಪಂದದ ರೂಪುರೇಷೆಗಳನ್ನು ಸಿದ್ಧಪಡಿಸಲಿದ್ದು, ಪ್ರಸ್ತಾವಿತ ಪರಿಹಾರದ ರೋಡ್​ಮ್ಯಾಪ್​ ರೂಪಿಸಲಿದೆ. ಪ್ರಸ್ತಾವಿತ ಒಪ್ಪಂದದ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳ ಇತರ ಬೇಡಿಕೆಗಳನ್ನು ಸಹ ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಭರವಸೆ ನೀಡಿದ ಗೃಹ ಸಚಿವರು, ಈ ಪ್ರದೇಶದ ಅಗತ್ಯಗಳಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವನ್ನು ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸುದೀರ್ಘ ಚರ್ಚೆಯಲ್ಲಿ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಗುಡ್ಡಗಾಡು ಪ್ರದೇಶದ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಸಂಸದರಾದ ರಾಜು ಬಿಸ್ತಾ, ಹರ್ಷವರ್ಧನ್ ಸಿಂಗ್ಲಾ, ಜಿಎನ್‌ಎಲ್‌ಎಫ್ ಅಧ್ಯಕ್ಷ ಮನ್ ಘಿಸಿಂಗ್, ಜಿಜೆಎಂ ಮಾಜಿ ಅಧ್ಯಕ್ಷ ಬಿಮಲ್ ಗುರುಂಗ್, ರಾಜ್ಯ ಸಚಿವ ಬಿಶಾಲ್ ಲಾಮ ಸೇರಿದಂತೆ ಹಲವು ಶಾಸಕರು ಮತ್ತು ಪ್ರಾದೇಶಿಕ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು
ಪಶ್ಚಿಮ ಬಂಗಾಳದ ಗುಡ್ಡಗಾಡು ಪ್ರದೇಶದ ಜನರು ಹೆಚ್ಚಿನ ಸ್ವಾಯತ್ತತೆ ಮತ್ತು ಸಂವಿಧಾನಾತ್ಮಕ ರಕ್ಷಣೆಗಾಗಿ ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳ ಜೊತೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಸಹ, ಈವರೆಗೂ ಸಮಸ್ಯೆಗೆ ಯಾವುದೇ ಅಂತಿಮ ಪರಿಹಾರ ಸಿಕ್ಕಿರಲಿಲ್ಲ. ಇದೀಗ ರಚನೆಯಾಗುತ್ತಿರುವ ಈ ಸಮಿತಿಯ ಮೂಲಕ ಶಾಶ್ವತ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ಮೂಡಿದೆ(ಏಜೆನ್ಸೀಸ್).