Amit Shah | ಗೃಹ ಸಚಿವ ಅಮಿತ್ ಷಾ 
ದೇಶ

ಪಶ್ಚಿಮ ಬಂಗಾಳಕ್ಕೆ ಗೃಹ ಸಚಿವ ಅಮಿತ್ ಷಾ ಭೇಟಿ!...ಹೇಗಿದೆ ಗೊತ್ತಾ 3 ದಿನದ ಮೆಗಾ ಪ್ಲಾನ್...? | Amit Shah

ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಷಾ ಜುಲೈ 17 ರಿಂದ 19 ರವರೆಗೆ ಪಶ್ಚಿಮ ಬಂಗಾಳಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದು, ಗಡಿ ಭದ್ರತೆ, ಆಡಳಿತ, ಕಾನೂನು ಸುವ್ಯವಸ್ಥೆ ಹಾಗೂ ಅಭಿವೃದ್ಧಿ ಯೋಜನೆಗಳ ಮೇಲೆ ವಿಶೇಷ ಗಮನ ಹರಿಸಲಿದ್ದಾರೆ. ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯಗಳಿಸಿ ರಾಜ್ಯದಲ್ಲಿ ತನ್ನ ಸರ್ಕಾರವನ್ನು ರಚಿಸಿದ ಬಳಿಕ ಗೃಹ ಸಚಿವರು ಕೈಗೊಳ್ಳುತ್ತಿರುವ ಮೊದಲ ಪ್ರವಾಸ ಇದಾಗಿದೆ.
ಮೂರು ದಿನಗಳ ಈ ಭೇಟಿಯಲ್ಲಿ ಜುಲೈ 18 ರಂದು ಸಿಲಿಗುರಿಯ ಜುಮಾಗಾಚ್ ಗಡಿ ಹೊರಠಾಣೆಗೆ ಭೇಟಿ ನೀಡಲಿರುವ ಅಮಿತ್​ ಷಾ, ಗಡಿ ಭದ್ರತಾ ಪಡೆಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ಇದರೊಂದಿಗೆ BSF ನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದಾದ ನಂತರ ಪಶ್ಚಿಮ ಬಂಗಾಳದ ಗಡಿ ಸಂಬಂಧಿತ ವಿಷಯಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಲಿರುವ ಅವರು, ರಾಜ್ಯದಲ್ಲಿ ಮೂರು ಹೊಸ ಕ್ರಿಮಿನಲ್ ಕಾಯಿದೆಗಳ ಅನುಷ್ಠಾನವನ್ನು ಪರಿಶೀಲಿಸಲಿದ್ದಾರೆ. ಜುಲೈ 18 ರ ಶನಿವಾರ ಸಂಜೆ ರಾಜ್ಯದಲ್ಲಿ ಜನನ ಮತ್ತು ಮರಣ ನೋಂದಣಿ ಕುರಿತಾದ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮರುದಿನ ಕೋಲ್ಕತ್ತಾಗೆ ತೆರಳಲಿರುವ ಗೃಹ ಸಚಿವರು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಲಿದ್ದಾರೆ. ನಂತರ ಆಲಿಪೋರ್‌ನ ರಾಷ್ಟ್ರೀಯ ಗ್ರಂಥಾಲಯದಲ್ಲಿ ಮ್ಯೂಸಿಯಂ ಆಫ್ ವರ್ಡ್ಸ್ ನ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ. ತದನಂತರ ಕೋಲ್ಕತ್ತಾದ ಬಿಸ್ವಾ ಬಾಂಗ್ಲಾ ಕನ್ವೆನ್ಷನ್ ಸೆಂಟರ್‌ನಲ್ಲಿ ಅಮುಲ್ ಡೈರಿಯ ಮೊಸರು ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಬಂಗಾಳ ಸರ್ಕಾರದಿಂದ ಏಕರೂಪದ ವರ್ಗಾವಣೆ ನೀತಿ ಜಾರಿ

ಪಶ್ಚಿಮ ಬಂಗಾಳ ಸರ್ಕಾರವು ಆಡಳಿತ ಸುಧಾರಣೆಯ ಭಾಗವಾಗಿ ವಿವಿಧ ಇಲಾಖೆಗಳ ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಏಕರೂಪದ ವರ್ಗಾವಣೆ ನೀತಿಯನ್ನು ಜಾರಿಗೆ ತಂದಿದ್ದು, ನಿರ್ದಿಷ್ಟ ಅವಧಿಯ ನಂತರ ಕಡ್ಡಾಯ ಸ್ಥಳಾಂತರ ಮತ್ತು ಸ್ವಂತ ಜಿಲ್ಲೆಗಳಲ್ಲಿ ಪೋಸ್ಟಿಂಗ್ ತಡೆಯುವುದನ್ನು ಕಡ್ಡಾಯಗೊಳಿಸಿದೆ. ಈ ನೂತನ ನೀತಿಯು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವ, ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವ ಹಾಗೂ ಸಾರ್ವಜನಿಕ ಸೇವಾ ವಿತರಣೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ತಿಳಿಸಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ನಿವೃತ್ತಿಗೆ ಮುಂಚಿನ ಕೊನೆಯ ಎರಡು ವರ್ಷಗಳನ್ನು ಹೊರತುಪಡಿಸಿ (ಅದೂ ಆಡಳಿತಾತ್ಮಕ ಅನುಕೂಲಕ್ಕೆ ಒಳಪಟ್ಟು), ಯಾವುದೇ ಅಧಿಕಾರಿಯನ್ನು ಅವರ ಸ್ವಂತ ಜಿಲ್ಲೆಯಲ್ಲಿ ಪೋಸ್ಟ್ ಮಾಡುವಂತಿಲ್ಲ. ಸೋಮವಾರ ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ಅಧಿಕಾರಿಗಳು ಒಂದೇ ಹುದ್ದೆಯಲ್ಲಿ ಮೂರು ವರ್ಷಗಳ ನಿರಂತರ ಸೇವೆ ಪೂರ್ಣಗೊಳಿಸಿದ ನಂತರ ಸಾಮಾನ್ಯ ನಿಯಮದಂತೆ ವರ್ಗಾವಣೆಯಾಗಬೇಕು ಮತ್ತು ಯಾವುದೇ ಕಾರಣಕ್ಕೂ ನಾಲ್ಕು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ.
ಕಂದಾಯ ಸಂಗ್ರಹಣೆ, ತೆರಿಗೆ ವಸೂಲಿ ಮತ್ತು ಇತರ ಸೂಕ್ಷ್ಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಇನ್ನೂ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿದ್ದು, ಅವರು ಎರಡು ವರ್ಷಗಳ ನಂತರ ವರ್ಗಾವಣೆಯಾಗಲಿದ್ದಾರೆ. ಯಾವುದೇ ಕಾರಣಕ್ಕೂ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿ ಇರಲು ಅವಕಾಶವಿಲ್ಲ. ಇಲಾಖೆಗಳಾದ್ಯಂತ ಅನ್ವಯವಾಗುವ ರಚನಾತ್ಮಕ ವರ್ಗಾವಣೆ ನೀತಿಯ ಮೂಲಕ ಆಡಳಿತಾತ್ಮಕ ದಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಸಾರ್ವಜನಿಕ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ(ಏಜೆನ್ಸೀಸ್​).