ಅಭಿಷೇಕ್ ಬ್ಯಾನರ್ಜಿ ಮತ್ತು ಅಮಿತ್ ಶಾ
ಕೋಲ್ಕತ್ತಾ: ಚುನಾವಣಾ ಪ್ರಚಾರದ ಸಮಯದಲ್ಲಿ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಮತ್ತು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ(Abhishek Banerjee) ಅವರಿಗೆ ಗುರುವಾರ(ಮೇ 21) ಕೋಲ್ಕತ್ತಾ ಹೈಕೋರ್ಟ್ ಬಂಧನ ಬೀತಿಯಿಂದ ರಿಲೀಫ್ ನೀಡಿದ್ದು, ನಿರೀಕ್ಷಣಾ ಜಾಮೀನು ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಅಭಿಷೇಕ್ ಬ್ಯಾನರ್ಜಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಜುಲೈ 31 ರವರೆಗೆ ಬಲವಂತದ ಕ್ರಮಕೈಗೊಳ್ಳದಂತೆ ರಕ್ಷಣೆ ನೀಡಿದ್ದು, ಅರ್ಜಿದಾರರು ಪೂರ್ವಾನುಮತಿ ಇಲ್ಲದೆ ಪ್ರಯಾಣಿಸುವಂತಿಲ್ಲ, ತನಿಖೆಗೆ ಸಹಕರಿಸುವಂತೆ ಹಾಗೂ ಪೊಲೀಸರು ಕಳುಹಿಸಿರುವ ನೋಟಿಸ್‌ಗಳಿಗೆ ಉತ್ತರಿಸುವಂತೆ ಸೂಚಿಸಿದೆ.
ಕಳೆದ ವಾರ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಿಧಾನ್‌ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಸಾಮಾಜಿಕ ಕಾರ್ಯಕರ್ತ ರಾಜೀವ್ ಸರ್ಕಾರ್ ದೂರು ನೀಡಿದ್ದರು.
ಅಭಿಷೇಕ್ ಪರ ವಾದಿಸಿದ ಟಿಎಂಸಿ ಸಂಸದ ಮತ್ತು ವಕೀಲ ಕಲ್ಯಾಣ್ ಬ್ಯಾನರ್ಜಿ, ಎಫ್‌ಐಆರ್ ದಾಖಲಿಸಲಾದ ಭಾಷಣವು ರಾಜ್ಯದಲ್ಲಿ 'ಯಾವುದೇ' ಪರಿಣಾಮ ಬೀರಲಿಲ್ಲ ಎಂದು ವಾದಿಸಿದರು. ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ರಾಜ್‌ದೀಪ್ ಮಜುಂದಾರ್, ರಾಜ್ಯವು ಚುನಾವಣೋತ್ತರ ಹಿಂಸಾಚಾರದ 'ಕರಾಳ ಇತಿಹಾಸ' ನೋಡಿದಾಗ ಟಿಎಂಸಿ ಚುನಾವಣೆಯಲ್ಲಿ ಗೆದ್ದಿದ್ದರೆ ಏನಾಗುತ್ತಿತ್ತು ಊಹೆ ಮಾಡಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಜಾಮೀನು ನೀಡದಂತೆ ವಾದಿಸಿದರು. ಕೊನೆಯದಾಗಿ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭಿಷೇಕ್ ಬ್ಯಾನರ್ಜಿ, ಮೇ 4 ರಂದು ಫಲಿತಾಂಶ ಘೋಷಣೆಯಾದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೋಲ್ಕತ್ತಾದಲ್ಲಿಯೇ ಇರಲು ಸವಾಲು ಹಾಕಿದ್ದರು (ಏಜೆನ್ಸೀಸ್).