Amit Shah | ಗೃಹ ಸಚಿವ ಅಮಿತ್ ಷಾ
ಚಂಡಿಗಢ: ಪಂಜಾಬ್ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ಕಿರಿಯ ಪಾಲುದಾರನಾಗಿ ಉಳಿದಿದ್ದ ಬಿಜೆಪಿ ಈಗ ದೊಡ್ಡಣ್ಣನ ಪಾತ್ರ ವಹಿಸಲು ಸಜ್ಜಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಘೋಷಿಸಿದರು.
ಮೋಗಾದ ಕಿಲ್ಲಿ ಚಾಹ್ಲಾನ್‌ನಲ್ಲಿ ಶನಿವಾರ ನಡೆದ ಬದ್ಲಾವ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಷಾ, ಈ ಮೂಲಕ ಶಿರೋಮಣಿ ಅಕಾಲಿ ದಳ ಜೊತೆಗಿನ ಮೈತ್ರಿಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಷಾ, ಪಂಜಾಬ್‌ನಲ್ಲಿ ಬಿಜೆಪಿ ಛೋಟಾ ಭಾಯ್ (ತಮ್ಮ) ಆಗಿ ಎರಡನೇ ಪಿಟೀಲು ನುಡಿಸುವ ಯುಗ ಮುಗಿದಿದ್ದು, ಹಿಂದೆ ನಾವು ಮೈತ್ರಿಕೂಟದ ಕಿರಿಯ ಪಾಲುದಾರರಾಗಿದ್ದೆವು, ಆದರೆ ಇಂದಿನಿಂದ ಬಿಜೆಪಿ ಪಂಜಾಬ್‌ನಲ್ಲಿ ತನ್ನದೇ ಆದ ಸ್ವತಂತ್ರ ಸರ್ಕಾರವನ್ನು ರಚಿಸುವ ಅಭಿಯಾನಕ್ಕೆ ಚಾಲನೆ ನೀಡುತ್ತಿದೆ ಎಂದರು. ರಾಜಕೀಯವಾಗಿ ಅತಿ ಹೆಚ್ಚು ಪ್ರಭಾವ ಹೊಂದಿರುವ ಮಾಲ್ವಾ ಬೆಲ್ಟ್‌ನಿಂದಲೇ ಈ ಹೇಳಿಕೆ ನೀಡಿರುವುದು ಇಡೀ ದೇಶದ ಗಮನಸೆಳೆದಿದೆ.
ಡ್ರಗ್ಸ್ ಮತ್ತು ಸಾಲಮುಕ್ತ ಪಂಜಾಬ್‌ಗೆ ಡಬಲ್ ಇಂಜಿನ್ ಭರವಸೆ
ರಾಜ್ಯವನ್ನು ಕಾಡುತ್ತಿರುವ ಮಾದಕವಸ್ತು ಜಾಲ ಮತ್ತು ಆರ್ಥಿಕ ಸಂಕಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮಿತ್ ಷಾ, ಪಂಜಾಬ್ನ್ನು ಉಳಿಸಲು ಡಬಲ್ ಇಂಜಿನ್ ಸರ್ಕಾರವೇ ಏಕೈಕ ಪರಿಹಾರ ಎಂದು ಹೇಳಿದರು.
ದೇಶದ ಶೇ. 45ರಷ್ಟು ಹೆರಾಯಿನ್ ಕಳ್ಳಸಾಗಣೆ ಪಂಜಾಬ್‌ಗೆ ಸಂಬಂಧಿಸಿದೆ ಎಂಬ ವರದಿಗಳನ್ನು ಉಲ್ಲೇಖಿಸಿದ ಷಾ, ಬಿಜೆಪಿ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಮಾದಕವಸ್ತು ವ್ಯವಹಾರವನ್ನು ಬುಡ ಸಮೇತ ಕಿತ್ತೆಸೆಯುತ್ತೇವೆ. ನಕ್ಸಲಿಸಂ ದಮನ ಮತ್ತು 370ನೇ ವಿಧಿ ರದ್ದುಗೊಳಿಸಿದ ಮಾದರಿಯಲ್ಲೇ ಈ ಸಮಸ್ಯೆಯನ್ನೂ ನಿವಾರಿಸುತ್ತೇವೆ ಎಂಬ ಭರವಸೆ ನೀಡಿದರು.
ಮತಾಂತರ ವಿರೋಧಿ ಕಾನೂನಿನ ದಾಳ
ಹಿಂದೂ ಮತ್ತು ನಗರ ಪ್ರದೇಶದ ಮತದಾರರನ್ನು ಸೆಳೆಯಲು ಅಮಿತ್ ಷಾ, ಮತಾಂತರ ವಿರೋಧಿ ಮಸೂದೆಯ ಅಸ್ತ್ರ ಪ್ರಯೋಗಿಸಿದರು. ನಮ್ಮ ಸಿಖ್ ಗುರುಗಳು ಬಲವಂತದ ಮತಾಂತರದ ವಿರುದ್ಧ ಸಾಕಷ್ಟು ತ್ಯಾಗ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಎಎಪಿ ಮತಾಂತರ ಮಾಡುವವರನ್ನು ತಮ್ಮ ಮತಬ್ಯಾಂಕ್ ಎಂದು ಪರಿಗಣಿಸಿವೆ ಎಂದರು. 2027ರಲ್ಲಿ ನಮಗೆ ಜನಾದೇಶ ನೀಡಿ, ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಕಠಿಣ ಮತಾಂತರ ವಿರೋಧಿ ಕಾನೂನು ಜಾರಿಗೆ ತರುತ್ತೇವೆ ಎಂದು ಷಾ ಘೋಷಿಸಿದರು.
ಭಗವಂತ್ ಮಾನ್, ಕೇಜ್ರಿವಾಲ್ ಸೇವೆಗೆ ಸೀಮಿತ
ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಷಾ, ಮುಖ್ಯಮಂತ್ರಿ ಮಾನ್ ಕೇಜ್ರಿವಾಲ್ ಅವರ ಸೇವೆಗೆ ಸೀಮಿತವಾಗಿದ್ದಾರೆ ಎಂದು ಲೇವಡಿ ಮಾಡಿದರು.
ಪಂಜಾಬ್ ಮುಖ್ಯಮಂತ್ರಿ ಒಬ್ಬ ಪೈಲಟ್ ಆಗಿ ಕೆಲಸ ಮಾಡುತ್ತಿದ್ದಾರೆ, ಅರವಿಂದ್ ಕೇಜ್ರಿವಾಲ್ ಅವರನ್ನು ಸರ್ಕಾರಿ ವೆಚ್ಚದ ವಿಮಾನದಲ್ಲಿ ದೇಶಾದ್ಯಂತ ಸುತ್ತಿಸುವುದೇ ಮಾನ್ ಕೆಲಸವಾಗಿದೆ. ಪಂಜಾಬ್‌ನ ಖಜಾನೆಯು ಎಎಪಿಯ ರಾಷ್ಟ್ರೀಯ ವಿಸ್ತರಣೆಗೆ ಎಟಿಎಂ ಆಗಿ ಬಳಕೆಯಾಗುತ್ತಿದೆ ಎಂದು ಅಮಿತ್ ಷಾ ಆರೋಪಿಸಿದ್ದಾರೆ(ಏಜೆನ್ಸೀಸ್).