Amit Shah | ಗೃಹ ಸಚಿವ ಅಮಿತ್ ಷಾ
ಅಹಮದಾಬಾದ್: ದೇಶಾದ್ಯಂತ ಜನರು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳನ್ನು ತಿರಸ್ಕರಿಸಿರುವುದರಿಂದ ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎನ್‌ಡಿಎ ದೊಡ್ಡ ಗೆಲುವು ಸಾಧಿಸಲಿದೆ ಎಂದು ಗೃಹ ಸಚಿವ ಅಮಿತ್ ಷಾ(Amit Shah) ಹೇಳಿದ್ದಾರೆ.
ಈ ಬಗ್ಗೆ ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷಾ, 2014ರ ಲೋಕಸಭಾ ಚುನಾವಣೆಯಿಂದ 2025 ರವರೆಗೆ ಬಿಜೆಪಿಯ ಗೆಲುವಿನ ಓಟ ಮುಂದುವರೆದಿದೆ. ಅಲ್ಲದೆ, ನರೇಂದ್ರ ಮೋದಿ 2024 ರ ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಪ್ರಧಾನಿಯಾದರು ಎಂದಿದ್ದಾರೆ.
ರಾಷ್ಟ್ರದಲ್ಲಿ ದಶಕಗಳ ನಂತರ ಈ ದಾಖಲೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿಯಿಂದ ಕಾಂಗ್ರೆಸ್ ಕಣ್ಮರೆಯಾಗಿದೆ. ಅಲ್ಲದೆ, ಈಗ ಬಿಹಾರದಿಂದ ಹೊರಬಿದ್ದಿದೆ. ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಎನ್‌ಡಿಎ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರವನ್ನು ರಚಿಸಿತು. ಮುಂಬರುವ ಎಲೆಕ್ಷನ್ಳಾದ ಬಂಗಾಳ ಮತ್ತು ತಮಿಳುನಾಡಿನಲ್ಲಿ ಈ ಸರಣಿ ಮುಂದುವರಿಯುತ್ತದೆ ಎಂದು ಗೃಹ ಸಚಿವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಅಮಿತ್ ಷಾ ವಾಗ್ದಾಳಿ
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣೆಯಲ್ಲಿ ಸೋತರೆ, ಇವಿಎಂ ಯಂತ್ರಗಳು ಮತ್ತು ಮತದಾರರ ಪಟ್ಟಿಯನ್ನು ದೂಷಿಸುತ್ತಾರೆ. ಆದರೆ ದೇಶದ ಜನರು ಕಾಂಗ್ರೆಸ್ ಅನ್ನು ಸ್ವೀಕರಿಸುವುದಿಲ್ಲ ಎಂದು ಅಮಿತ್ ಷಾ ಹೇಳಿದ್ದಾರೆ.
ಬಿಹಾರದಲ್ಲಿ ಎನ್‌ಡಿಎ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಆದರೂ ರಾಹುಲ್ ಇವಿಎಂಗಳು ಮತ್ತು ಮತದಾರರ ಪಟ್ಟಿಗಳನ್ನು ದೂಷಿಸುತ್ತಿದ್ದಾರೆ. ಅಲ್ಲದೆ, ಇವಿಎಂಗಳು ಮತ್ತು ಮತದಾರರ ಪಟ್ಟಿಗಳು ದೋಷಪೂರಿತವಾಗಿಲ್ಲ. ದೇಶದ ಜನರು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳನ್ನು ಸ್ವೀಕರಿಸುವುದಿಲ್ಲ. ಇದು ಅದರ ಫಲಿತಾಂಶವಾಗಿದೆ ಎಂದು ತಿಳಿಸಿದ್ದಾರೆ.
ಇಂದು ಈ ವೇದಿಕೆಯಲ್ಲಿ ಮಮತಾ ಮತ್ತು ಸ್ಟಾಲಿನ್ಗೆ ನಾನು ಹೇಳಲು ಬಯಸುವುದೇನೆಂದರೆ, ಬಿಹಾರದ ನಂತರ, ಈಗ ಬಂಗಾಳ ಮತ್ತು ತಮಿಳುನಾಡಿನಲ್ಲಿ ಎನ್‌ಡಿಎ-ಬಿಜೆಪಿಯ ಸರದಿ ಎಂದು ಷಾ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಮ ಮಂದಿರ ಮತ್ತು ಸೀತಾ ಮಂದಿರ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿದ್ದು, 2025 ರಲ್ಲಿ ದೇವಾಲಯದ ಮೇಲೆ ಕೇಸರಿ ಧ್ವಜ ಹಾರಿಸಲಾಗಿದೆ. ಬಿಹಾರದ ಸೀತಾಮರ್ಹಿಯಲ್ಲಿರುವ ಸೀತಾ ದೇವಿಯ ದೇವಾಲಯವನ್ನು 2026 ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಅಮಿತ್ ಷಾ ಘೋಷಿಸಿದ್ದಾರೆ.
ಪ್ರಧಾನಿ ಮೋದಿಯ ನಾಯಕತ್ವದಲ್ಲಿ ಭಾರತ ಜಾಗತಿಕ ಖ್ಯಾತಿಯನ್ನು ಗಳಿಸಿದೆ ಮತ್ತು ಜನರು ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲೂ ಮುಂದಕ್ಕೆ ಕೊಂಡೊಯ್ಯಲು ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೆ, ವಿರೋಧ ಪಕ್ಷಕ್ಕೆ ನಾಯಕ ಅಥವಾ ನೀತಿ ಇಲ್ಲದ ಕಾರಣ ಅದು ಜನರ ವಿಶ್ವಾಸವನ್ನು ಗಳಿಸುತ್ತಿಲ್ಲ ಎಂದು ಗೃಹ ಸಚಿವರು ತೀವ್ರ ವಾಗ್ದಾಳಿ ನಡೆಸಿದ್ದಾರೆ,(ಏಜೆನ್ಸೀಸ್).