- ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಮತದಾನ
- ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಮಾತಿನ ಸಮರ
- ದೆಹಲಿಯೇ ನನ್ನ ಮುಂದಿನ ಟಾರ್ಗೆಟ್ ಎಂದ ದೀದಿ
ಕೋಲ್ಕತ: ನಿನ್ನೆ (ಏ.23) ನಡೆದ ಪಂಚರಾಜ್ಯ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಮತದಾನವಾಯಿತು. ಎರಡು ಹಂತಗಳ ಪೈಕಿ ಮೊದಲ ಹಂತದಲ್ಲಿ ಶೇ.92.7ರಷ್ಟು ವೋಟಿಂಗ್ ಆಗಿರುವುದು ಇಡೀ ದೇಶದ ಜನತೆಯ ಹುಬ್ಬೇರಿಸಿದೆ. ತಮಿಳುನಾಡಿನಲ್ಲಿಯೂ ಇದೇ ರೀತಿ ಆಗಿರುವುದು, ಖಚಿತವಾಗಿ ಈ ಬಾರಿ ಆಯಾ ರಾಜ್ಯಗಳಲ್ಲಿ ಸರ್ಕಾರ ಬದಲಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಜನರು ಅಂದಾಜಿಸಿದ್ದಾರೆ.
ಮತ್ತೊಂದೆಡೆ, ದಾಖಲೆಯ ಮತದಾನವನ್ನು ಬಿಜೆಪಿಯ ಗೆಲುವಿನ ಮುನ್ಸೂಚನೆ ಎಂದು ಪರಿಗಣಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಟಕ್ಕರ್ ಮೇಲೆ ಟಕ್ಕರ್ ಕೊಡುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡುತ್ತಿರುವ ದೀದಿ, ದೆಹಲಿಯೇ ನನ್ನ ಮುಂದಿನ ಟಾರ್ಗೆಟ್ ಎಂದು ಹೇಳುತ್ತಿರುವುದು ಟಿಎಂಸಿ-ಬಿಜೆಪಿ ನಡುವಿನ ಜಟಾಪಟಿಯನ್ನು ತಾರಕಕ್ಕೇರಿಸಿದೆ.
ಕೋಲ್ಕತ್ತಾದ ಚೌರಿಂಗೀ ಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಇಲ್ಲಿ ಗೆದ್ದ ಬಳಿಕ ನಾನು ವಿರೋಧ ಪಕ್ಷಗಳನ್ನು ಒಗ್ಗೂಡಿಸಿ, ದೆಹಲಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಇಲ್ಲದಂತೆ ಮಾಡುತ್ತೇನೆ. ಅಲ್ಲಿ, ಅವರ ಸರ್ಕಾರವನ್ನು ಕೆಡವುತ್ತೇನೆ. ನೆನಪಿರಲಿ ನಿಮಗೆ, ನೀವೆಂದು (ಬಿಜೆಪಿ) ನಮ್ಮನ್ನು ಮಣಿಸಲು ಸಾಧ್ಯವಿಲ್ಲ. ನಾವು ಸದಾ ಅನ್ಯಾಯದ ವಿರುದ್ಧ ಹೋರಾಡುವವರು ಎಂದು ಗುಡುಗಿದರು.
ನಾನು ಹುಟ್ಟಿದ್ದು ಬಂಗಾಳದಲ್ಲೇ. ಕೊನೆಯುಸಿರು ಬಿಡೋದು ಈ ಮಣ್ಣಿನಲ್ಲೇ. ಇಲ್ಲಿ ಗೆಲುವು ಪಡೆದ ತಕ್ಷಣವೇ ದೆಹಲಿಯನ್ನು ವಶಪಡಿಸಿಕೊಳ್ಳುವೆ. ಎಲ್ಲ ರಾಜಕೀಯ ಪಕ್ಷವನ್ನು ಒಟ್ಟುಗೂಡಿಸಿ, ದೆಹಲಿಯಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡುತ್ತೇನೆ. ನನಗೆ ಅಲ್ಲಿನ ಅಧಿಕಾರ ಬೇಕಿಲ್ಲ. ಆದರೆ, ಬಿಜೆಪಿ ಅಸ್ತಿತ್ವದಲ್ಲಿ ಇರೋದು ಬೇಡವಷ್ಟೇ ಎಂದು ಕಮಲದ ವಿರುದ್ಧ ಸಿಡಿದರು. ಇದಕ್ಕೆ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲೇ ಅವರಿಗೆ ಏನೂ ಉಳಿದಿಲ್ಲ. ಹೀಗಿರುವಾಗ, ದೆಹಲಿಗೆ ಬಂದು ಮಮತಾ ಏನು ತಾನೇ ಮಾಡಲು ಸಾಧ್ಯ? ಎಂದು ನಗುತ್ತಲೇ ಹೇಳಿದರು. ಇನ್ನು ಬಂಗಾಳದಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೇ ಇದೇ ಏ.29ರಂದು ನಡೆಯಲಿದ್ದು, ಇಲ್ಲಿಯೂ ದಾಖಲೆಯ ವೋಟಿಂಗ್ ಆಗಲಿದೆಯೇ? ಎಂಬುದನ್ನು ಕಾದು ತಿಳಿಯಬೇಕಿದೆ,(ಏಜೆನ್ಸೀಸ್).