Amit Shah | ಗೃಹ ಸಚಿವ ಅಮಿತ್ ಷಾ 
ದೇಶ

ಕಾಂಗ್ರೆಸ್ ಆಡಳಿತದಲ್ಲಿ ಬಾಂಬ್ ಸ್ಫೋಟಗಳದ್ದೇ ಸದ್ದು.. ಅಕ್ರಮ ವಲಸಿಗರ ರಕ್ಷಣೆಯೇ 'ಕೈ' ಅಜೆಂಡಾ ಎಂದ ಅಮಿತ್ ಷಾ! | Amit Shah

ದಿಸ್ಪೂರ್​​​: ಅಸ್ಸಾಂನಲ್ಲಿ ಕಳೆದ ಒಂದು ದಶಕದಲ್ಲಿ ಒಳನುಸುಳುವಿಕೆಯನ್ನು ಗಣನೀಯವಾಗಿ ತಡೆಯಲಾಗಿದ್ದರೂ, ರಾಜ್ಯವನ್ನು ಸಂಪೂರ್ಣವಾಗಿ ಅಕ್ರಮ ವಲಸಿಗರಿಂದ ಮುಕ್ತಗೊಳಿಸಲು ಇನ್ನೂ ಬಲವಾದ ಕ್ರಮಗಳ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ತಿಳಿಸಿದರು.
ಸೋನಿತ್‌ಪುರ ಜಿಲ್ಲೆಯ ಧೇಕಿಯಾಜುಲಿಯಲ್ಲಿ ನಡೆದ ಬೃಹತ್ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಷಾ, ಎಲ್ಲಾ ಅಕ್ರಮ ವಲಸಿಗರನ್ನು ಗುರುತಿಸಿ ಅವರ ದೇಶಗಳಿಗೆ ವಾಪಸ್ ಕಳುಹಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಇದು ಸಿಎಂ ಮಾಡುವ ಚುನಾವಣೆಯಲ್ಲ..

ಏಪ್ರಿಲ್ 9 ರಂದು ನಡೆಯಲಿರುವ ಚುನಾವಣೆ ಕೇವಲ ಹಿಮಂತ ಬಿಸ್ವಾ ಶರ್ಮಾರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುವ ಉದ್ದೇಶ ಹೊಂದಿಲ್ಲ, ಬದಲಾಗಿ ಅಸ್ಸಾಂ ಅನ್ನು ನುಸುಳುಕೋರರಿಂದ ಮುಕ್ತಗೊಳಿಸಲು ಮತ್ತು ಶಾಂತಿಯುತ ಹಾಗೂ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ರೂಪಿಸಲು ನೀವು ಮತ ಚಲಾಯಿಸಬೇಕು, ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ರಾಜ್ಯವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಿದೆ ಎಂದರು.

ಕಾಂಗ್ರೆಸ್ ಆಡಳಿತದಲ್ಲಿ ಬಾಂಬ್ ಸ್ಫೋಟಗಳದ್ದೇ ಸದ್ದು

ಕಾಂಗ್ರೆಸ್ ಪಕ್ಷದ ಆಳ್ವಿಕೆಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು, ಅಸ್ಸಾಂನಲ್ಲಿ ನಿರಂತರ ಗುಂಡಿನ ದಾಳಿ, ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು ಮತ್ತು ನೂರಾರು ಯುವಕರು ಪ್ರಾಣ ಕಳೆದುಕೊಂಡಿದ್ದರು. ಆದರೆ ಮೋದಿ ನೇತೃತ್ವದಲ್ಲಿ ಅನೇಕ ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, ಸುಮಾರು 10 ಸಾವಿರ ಯುವಕರು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಮರಳುವಂತೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಕಿಡಿಕಾರಿದ ಷಾ, ವಿರೋಧ ಪಕ್ಷವು ಅಕ್ರಮ ವಲಸಿಗರನ್ನು ರಕ್ಷಿಸುತ್ತಿದೆ ಮತ್ತು ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ವಿರೋಧಿಸುತ್ತಿದೆ ಎಂದು ಆರೋಪಿಸಿದರು. ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಈ ವಿಷಯದಲ್ಲಿ ತಮ್ಮ ಪಕ್ಷದ ನಿಲುವೇನು ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಲು ಕಾಂಗ್ರೆಸ್ ವಿಫಲವಾಗಿ ಗಡಿಯಾಚೆಗಿನ ಬೆದರಿಕೆಗಳಿಗೆ ಅವಕಾಶ ಮಾಡಿಕೊಟ್ಟಿತ್ತು, ಆದರೆ ಮೋದಿ ಸರ್ಕಾರ ಭಯೋತ್ಪಾದನೆಯ ವಿರುದ್ಧ ದೃಢವಾದ ನಿಲುವು ತಳೆದಿದೆ ಎಂದು ತಿಳಿಸಿದರು. ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ(ಏಜೆನ್ಸೀಸ್​​).