ಡಿಸಿಎಂ ಸುನೇತ್ರಾ ಪವಾರ್, ಅಮಿತ್ ಶಾ ಭೇಟಿಯಾಗಿರುವುದು.
ನವದೆಹಲಿ: ಎನ್ಸಿಪಿ ನಾಯಕ ಅಜಿತ್ ಪವಾರ್ ನಿಧನದ ಬಳಿಕ ಎರಡೂ ಎನ್ಸಿಪಿ ಬಣಗಳು ವಿಲೀನದ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಎನ್ಸಿಪಿ ನಾಯಕಿ ಮತ್ತು ಮಹಾರಾಷ್ಟ್ರ ಡಿಸಿಎಂ ಸುನೇತ್ರಾ ಪವಾರ್(Sunetra Pawar) ಬುಧವಾರ(ಫೆ. 11) ಅಮಿತ್ ಶಾ ಮತ್ತು ನರೇಂದ್ರ ಮೋದಿಯವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮುಂಬೈನಲ್ಲಿ ಸಚಿವಾಲಯದಲ್ಲಿ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಪುತ್ರ ಪಾರ್ಥ ಪವಾರ್ ಮತ್ತು ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಜೊತೆ ದೆಹಲಿಗೆ ಆಗಮಿಸಿರುವ ಸುನೇತ್ರಾ ಪವಾರ್, ಆಡಳಿತ ವಹಿಸಿಕೊಂಡ ಬಳಿಕ ಧನ್ಯವಾದ ಅರ್ಪಿಸಿದ್ದು, ಬಳಿಕ ಪಕ್ಷ ಸಂಘಟನೆ ಹಾಗೂ ವಿಲೀನ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ದೆಹಲಿ ಮೂಲಗಳ ಪ್ರಕಾರ, ಎನ್ಸಿಪಿ ಬಣಗಳ ವಿಲೀನ ನಡೆದರೆ, ಕೇಂದ್ರ ಸರ್ಕಾರದ ಸಂಪುಟದಲ್ಲಿ ಎನ್ಸಿಪಿ ಎರಡು ಕ್ಯಾಬಿನೆಟ್ ದರ್ಜೆಯ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ಎನ್ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತೊಂದು ಶರದ್ ಪವಾರ್ ಪುತ್ರಿ ಮತ್ತು ಎನ್ಸಿಪಿ(ಎಸ್ಪಿ) ಮುಖ್ಯಸ್ಥೆ ಸುಪ್ರಿಯಾ ಸುಳೆಗೆ ಸಿಗಬಹುದು. ಮಹಾರಾಷ್ಟ್ರದಲ್ಲೂ ಎನ್ಸಿಪಿ(ಎಸ್ಪಿ) ಬಣವು ಜಂಟಿ ಭಾಗವಾಗಿ ಒಂದು ರಾಜ್ಯ ಸಚಿವರೊಂದಿಗೆ 2 ಕ್ಯಾಬಿನೆಟ್ ಸಚಿವ ಸ್ಥಾನ ಪಡೆಯಬಹುದು ಎನ್ನಲಾಗಿದೆ.
ಇನ್ನೂ ಈ ಕುರಿತು ವರಿಷ್ಠರ ಜೊತೆ ಮಾತನಾಡಲು ಸಿಎಂ ದೇವೇಂದ್ರ ಫಡ್ನವೀಸ್ ಸಹ ದೆಹಲಿ ತೆರಳಿದ್ದಾರೆ ಎನ್ನಲಾಗಿದೆ. ಎನ್ಸಿಪಿ ವಿಲೀನ, ಸಂಭವನೀಯ ಸಂಪುಟ ಬದಲಾವಣೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಪಡೆಯಲು ಸಾಧ್ಯವಾಗದ ಜಾತ್ಯತೀತ, ಪ್ರಗತಿಪರ ಹಾಗೂ ಅಲ್ಪಸಂಖ್ಯಾತ ಮತಗಳನ್ನು ಎನ್ಸಿಪಿ ಒಗ್ಗಟ್ಟಿನ ಕಾರಣಕ್ಕೆ ತಮ್ಮ ಮೈತ್ರಿಕೂಟಕ್ಕೆ ತರುತ್ತದೆ ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ಉನ್ನತ ನಾಯಕತ್ವವೂ ಈ ಕ್ರಮದ ಬಗ್ಗೆ ಉತ್ಸುಕವಾಗಿದೆ ಎನ್ನಲಾಗಿದೆ. ಪ್ರಧಾನಿ ಮೋದಿ, ಶರದ್ ಪವಾರ್ ಅವರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. ಎನ್ಸಿಪಿ(ಎಸ್ಪಿ) ಎಂಟು ಲೋಕಸಭೆ ಸ್ಥಾನಗಳನ್ನು ಹೊಂದಿದ್ದು, ಅದು ಬಿಜೆಪಿ ನೇತೃತ್ವದ ಎನ್ಡಿಗೆ ಸೇರಿದ್ರೆ, ಮೈತ್ರಿಕೂಟಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ನಂಬಿದ್ದಾರೆ ಎನ್ನಲಾಗಿದೆ. ವಿಲೀನ ಪ್ರಕ್ರಿಯೆ ಅಧಿಕೃತವಾಗಿ ಘೋಷಣೆಯಾದ ಬಳಿಕವೇ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ (ಏಜೆನ್ಸೀಸ್).