ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳ 
ದೇಶ

ಪ್ರಧಾನಿ ಕಿವಿಮಾತಿನ ಬೆನ್ನಲ್ಲೇ ರಾಕೆಟ್​ನಂತೆ ಮೇಲೇರಿದ ಚಿನ್ನದ ಬೆಲೆ! ಸಂಖ್ಯೆ ಕೇಳಿದ್ರೆ ಈ ವರ್ಷ ಖರೀದಿಯೇ ಬೇಡ ಅಂತೀರಾ

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗಷ್ಟೇ ಒಂದು ವರ್ಷ ಚಿನ್ನದ ಖರೀದಿ ಮರೆತುಬಿಡಿ ಎಂದಿದ್ದ ಪ್ರಧಾನಿ ಮೋದಿ
  • ದೇಶದ ಜನತೆಗೆ ಪ್ರಧಾನಿ ಕಿವಿಮಾತಿನ ಬೆನ್ನಲ್ಲೇ ಚಿನ್ನದ ಬೆಲೆ ತ್ರಿಬಲ್​ ಏರಿಕೆ
  • ಇಂದು ಒಂದೇ ದಿನ 13 ಸಾವಿರ ರೂ. ಹೆಚ್ಚಳ
Gold Rate: ಯುಎಸ್​-ಇಸ್ರೇಲ್​ ಮತ್ತು ಇರಾನ್​ ನಡುವಿನ ಭೀಕರ ಯುದ್ಧದಿಂದ ಸದ್ಯ ಮಧ್ಯಪ್ರಾಚ್ಯ ಭಾರೀ ಉದ್ವಿಗ್ನಗೊಂಡಿದೆ. ಇದು ಜಗತ್ತಿಗೆ ದೊಡ್ಡ ಸಂಕಷ್ಟ ತಂದೊಡ್ಡಿದ್ದು, ಹಲವು ದೇಶಗಳ ಮೇಲೆ ಭಾರೀ ಹೊಡೆತ ನೀಡಿದೆ. ಇಂಧನ, ಅನಿಲ ಸೇರಿದಂತೆ ಹಲವು ಬಿಕ್ಕಟ್ಟುಗಳು ದೊಡ್ಡ ಸಮಸ್ಯೆಯಾಗಿ ಕಾಡುತ್ತಿವೆ. ಈಗಾಗಲೇ ಕೆಲವು ರಾಷ್ಟ್ರಗಳು ಸ್ಮಾರ್ಟ್​ ಲಾಕ್​ಡೌನ್​ ಮೂಲಕ ಜಾಗತಿಕ ಸಂಕಷ್ಟವನ್ನು ಎದುರಿಸಲು ತೀರ ಹೆಣಗಾಡುತ್ತಿವೆ. ಈ ಬೆಳವಣಿಗೆಗಳ ನಡುವೆಯೇ, ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಒಂದು ವರ್ಷದ ಮಟ್ಟಿಗೆ ಚಿನ್ನವನ್ನು ಖರೀದಿ ಮಾಡಲೇಬೇಡಿ ಎಂದಿದ್ದರು. ಆ ಮಾತು ಇದೀಗ ಅಕ್ಷರಶಃ ಒಪ್ಪಿಕೊಳ್ಳುವಂತಾಗಿದೆ. ಕಾರಣ, ಇಂದಿನ ಮೂರು ಪಟ್ಟು ಚಿನ್ನದ ಬೆಲೆ ಏರಿಕೆ.
ಜಾಗತಿಕ ಪೂರೈಕೆ ಸರಪಳಿಯ ಮೇಲಿನ ಹೆಚ್ಚುತ್ತಿರುವ ಒತ್ತಡವು ಆರ್ಥಿಕತೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈಗಾಗಲೇ ತೈಲ, ಇಂಧನ ಮತ್ತು ಅನಿಲ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನ, ಯುಎಇ ಸೇರಿ ನೆರೆಯ ದೇಶಗಳು ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟದಿಂದ ನಲುಗಿವೆ. ಮತ್ತೊಂದೆಡೆ, ಜನರಿಗೆ ಇಂಧನವನ್ನು ಮಿತವಾಗಿ ಬಳಸಿ, ಒಂದು ವರ್ಷ ಚಿನ್ನವನ್ನು ಖರೀದಿ ಮಾಡಬೇಡಿ, ಆದಷ್ಟು ಮನೆಯಿಂದಲೇ ಕೆಲಸ ಮಾಡಿ ಮತ್ತು ವಿದೇಶಿ ಪ್ರಯಾಣವನ್ನು ಮಿತಿಗೊಳಿಸಿ ಎಂದು ಸಲಹೆ ನೀಡಿದರು. ಇದರಲ್ಲಿ ಚಿನ್ನವನ್ನು ಖರೀದಿ ಮಾಡಬೇಡಿ ಎಂದಿದ್ದ ಪ್ರಧಾನಿ ಮಾತು ಈಗ ದಿಢೀರ್​ ಭಾರೀ ಹೆಚ್ಚಳದ ಬೆನ್ನಲ್ಲೇ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಒಂದೇ ದಿನ 13,910 ರೂ. ಏರಿಕೆ

ಬುಧವಾರ (ಮೇ.13) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 13,910 ರೂ. ಏರಿಕೆಯಾಗಿದೆ. ಇನ್ನು 22 ಕ್ಯಾರೆಟ್ ಗೋಲ್ಡ್​ 12,750 ರೂ. ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿತ ಕಂಡಿದೆ. ಒಂದು ಔನ್ಸ್ ಬೆಲೆ 16 ಡಾಲರ್​ನಷ್ಟು ಇಳಿದಿದೆ. ಪ್ರಸ್ತುತ, ಒಂದು ಔನ್ಸ್ ಗೋಲ್ಡ್​ ಬೆಲೆ 4,699 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ರಾಷ್ಟ್ರ ರಾಜಧಾನಿ ಮತ್ತು ದೇಶದ ಪ್ರಮುಖ ನಗರಗಳಲ್ಲಿ ದರಗಳು ಏರಿಕೆಯಿಂದ ಬದಲಾಗಿವೆ.

ಎಲ್ಲೆಲ್ಲಿ ಎಷ್ಟೆಷ್ಟು?

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳನ್ನು ನೋಡುವುದಾದರೆ, ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,68,040 ರೂ.ಗಳಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 1,54,050 ರೂ. ಆಗಿದೆ. ಮುಂಬೈ, ಕೋಲ್ಕತ, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,67,890 ರೂ.ಗೆ ತಲುಪಿದ್ದರೆ, 22 ಕ್ಯಾರೆಟ್ ಚಿನ್ನ 1,53,900 ರೂ. ಆಗಿದೆ. ಇನ್ನು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ 10 ಗ್ರಾಂ ಬೆಲೆ 1,67,890 ರೂ.ಗೆ ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 1,53,900 ರೂ.ನಲ್ಲಿ ಮುಂದುವರಿದಿದೆ.

ಬೆಳ್ಳಿ ಎಷ್ಟು?

ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆಯಲ್ಲಿ 20,000 ರೂ. ಏರಿಕೆಯಾಗಿದೆ. ಅಲ್ಲಿಗೆ ಒಂದು ಕೆಜಿ ಬೆಳ್ಳಿಯ ಪ್ರಸ್ತುತ ದರ 3,10,000 ರೂ.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ಮೀರಿದೆ. ಚೆನ್ನೈನಲ್ಲಿ 30,000 ರೂ. ಹೆಚ್ಚಾಗಿದ್ದು, ಕೆಜಿ ಬೆಳ್ಳಿಯು 3,30,000 ರೂ.ಗೆ ತಲುಪಿದೆ. ಇನ್ನು ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ 3,00,000 ರೂ.ಗೆ ತಲುಪಿದೆ,(ಏಜೆನ್ಸೀಸ್).