ದೇಶ

ಜ್ಞಾನೇಶ್ ಕುಮಾರ್ ವಜಾ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಮಹತ್ವದ ಹೇಳಿಕೆ: ನಿಯಮ ಹೇಳೋದೇನು..? | CEC Impeachment

CEC Impeachment: ದೇಶಾದ್ಯಂತ ಚುನಾವಣಾ ಆಯೋಗವು ಕೈಗೊಂಡಿರುವ ಎಸ್‌ಐಆರ್ ಪ್ರಕ್ತಿಯೆಯಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದಿವೆ ಎಂದು ಆರೋಪಿಸಿ ವಿರೋಧ ಪಕ್ಷಗಳು ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.

CEC Impeachment: ದೇಶಾದ್ಯಂತ ಚುನಾವಣಾ ಆಯೋಗವು ಕೈಗೊಂಡಿರುವ ಎಸ್‌ಐಆರ್ ಪ್ರಕ್ತಿಯೆಯಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದಿವೆ ಎಂದು ಆರೋಪಿಸಿ ವಿರೋಧ ಪಕ್ಷಗಳು ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.

ಈ ಬೆಳವಣಿಗೆಗಳ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರನ್ನು ತಮ್ಮ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಕೋರಿ ವಿರೋಧ ಪಕ್ಷಗಳು ಸಿದ್ಧಪಡಿಸುತ್ತಿರುವ ಹೊಸ ಪ್ರಸ್ತಾವನೆಯನ್ನು ಕಾನೂನು ಹಾಗೂ ಸಂಸದೀಯ ನಿಯಮಾವಳಿಗಳ ಚೌಕಟ್ಟಿನಲ್ಲಿ ಸಂಪೂರ್ಣವಾಗಿ ಪರಿಶೀಲಿಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್​, ಸಂಸತ್ತಿಗೆ ಯಾವುದೇ ಹೊಸ ನೋಟಿಸ್ ಅಥವಾ ಮನವಿ ಬಂದರೆ ಅದನ್ನು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಸಂಸದೀಯ ಕಾರ್ಯವಿಧಾನಗಳ ಪ್ರಕಾರವೇ ಕೂಲಂಕಷವಾಗಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಸಂಪೂರ್ಣ ಹಕ್ಕಿದೆ ಎಂದು ಓಂ ಬಿರ್ಲಾ ಹೇಳಿದ್ದರೆ.

ಇದನ್ನೂ ಓದಿ:ನೀವು ಜೆನ್-ಜೀ ಅಲ್ಲ, ನಿಮ್ಮ ಉದ್ದೇಶವೇನು..? ಹೈಕೋರ್ಟ್ ಚಾಟಿ ಬೆನ್ನಲ್ಲೇ ಅರ್ಜಿ ವಾಪಸ್ ಪಡೆದ ರಾಂಕಾ-ದಾಸ್​! | Delhi High Court

ನ್ಯಾಯಾಧೀಶರ ಮಹಾಭಿಯೋಗ ಪ್ರಕ್ರಿಯೆಗೆ ಯಾವ ರೀತಿಯಲ್ಲಿ ಕಟ್ಟುನಿಟ್ಟಾದ ಕಾನೂನು ಮತ್ತು ಕಾರ್ಯವಿಧಾನಗಳು ಇವೆಯೋ, ಅದೇ ರೀತಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕುವುದಕ್ಕೂ ಸಂವಿಧಾನ ಹಾಗೂ ಕಾನೂನಿನಲ್ಲಿ ನಿರ್ದಿಷ್ಟವಾದ ನಿಯಮಗಳನ್ನು ರೂಪಿಸಲಾಗಿದೆ. ವಿಪಕ್ಷಗಳು ಈ ವಿಷಯವನ್ನು ಅಧಿಕೃತವಾಗಿ ಸಂಸತ್ತಿನ ವೇದಿಕೆಗೆ ತಂದಾಗ, ಕಾನೂನಿನ ಅನುಸಾರ ಸೂಕ್ತವಾದ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪೀಕರ್ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ರೂಪುಗೊಂಡಿರುವ ಇಂಡಿಯಾ ಒಕ್ಕೂಟವು ಚುನಾವಣಾ ಆಯೋಗದ ವಿರುದ್ಧ ಮತ ಕಳ್ಳತನ ಸೇರಿದಂತೆ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಸಜ್ಜಾಗುತ್ತಿದೆ. ಇದರ ಭಾಗವಾಗಿಯೇ ಲೋಕಸಭೆಯ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವು ಪ್ರಮುಖ ಮುಖಂಡರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಕೂಡಲೇ ತಡೆಹಿಡಿಯಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಕಾನೂನು ಹೇಳೋದೇನು..?

ನಮ್ಮ ಸಂವಿಧಾನದ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರಂತಹ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಸಾಮಾನ್ಯ ಸರ್ಕಾರಿ ಅಧಿಕಾರಿಯಂತೆ ತಕ್ಷಣವೇ ಅಥವಾ ನೇರವಾಗಿ ವಜಾಗೊಳಿಸಲು ಯಾವುದೇ ಅವಕಾಶವಿಲ್ಲ. ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರನ್ನು ಯಾವ ರೀತಿಯಲ್ಲಿ ಮಹಾಭಿಯೋಗದ ಮೂಲಕ ಪದಚ್ಯುತಗೊಳಿಸಲಾಗುತ್ತದೆಯೋ, ಅದೇ ರೀತಿಯ ಅತ್ಯಂತ ಕಠಿಣವಾದ ಪ್ರಕ್ರಿಯೆಯನ್ನು ಸಂಸತ್ತು ಅನುಸರಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಸಿಇಸಿ ಸ್ವತಃ ತಾವಾಗಿಯೇ ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು ಅಥವಾ ಸಂಸತ್ತಿನಲ್ಲಿ ಸಾಂವಿಧಾನಿಕ ಮಹಾಭಿಯೋಗ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ.

ಸಂವಿಧಾನದ 124ನೇ ವಿಧಿಯಡಿ, ಸಿಇಸಿಯನ್ನು ಸಾಬೀತಾಗಿರುವ ಅವರ ವರ್ತನೆ ಅಥವಾ ಅಸಮರ್ಥತೆ ಎಂಬ ಎರಡು ನಿರ್ದಿಷ್ಟ ಕಾರಣಗಳ ಮೇಲಷ್ಟೇ ಹುದ್ದೆಯಿಂದ ತೆಗೆದುಹಾಕಲು ಸಾಧ್ಯವಿದೆ. ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತ್ಯೇಕವಾಗಿ ಪ್ರಸ್ತಾವನೆಯು ಮಂಡಿಸಲ್ಪಟ್ಟು, ಪ್ರತಿ ಸದನದ ಒಟ್ಟು ಸದಸ್ಯರ ಸಂಖ್ಯೆಯ ಸಂಪೂರ್ಣ ಬಹುಮತ ಹಾಗೂ ಹಾಜರಿದ್ದು ಮತ ಚಲಾಯಿಸುವ ಸದಸ್ಯರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಮತಗಳ ಬೆಂಬಲದೊಂದಿಗೆ ಅಂಗೀಕಾರಗೊಳ್ಳುವುದು ಕಡ್ಡಾಯವಾಗಿರುತ್ತದೆ.

ನ್ಯಾಯಾಧೀಶರ (ತನಿಖಾ) ಕಾಯ್ದೆ 1968 ಮತ್ತು ತನಿಖಾ ಸಮಿತಿ

ಇದಲ್ಲದೆ, 1968ರ ನ್ಯಾಯಾಧೀಶರ ತನಿಖಾ ಕಾಯ್ದೆಯು ಈ ಪ್ರಕ್ರಿಯೆಗೆ ಮತ್ತಷ್ಟು ನಿಖರವಾದ ಹಂತಗಳನ್ನು ಒದಗಿಸಿಕೊಟ್ಟಿದೆ. ಸಂಸತ್ತಿನಲ್ಲಿ ಮಹಾಭಿಯೋಗದ ನೋಟಿಸ್ ಅಧಿಕೃತವಾಗಿ ಅಂಗೀಕಾರಗೊಂಡ ತಕ್ಷಣವೇ ಹುದ್ದೆಯಿಂದ ತೆರವುಗೊಳಿಸಲು ಬರುವುದಿಲ್ಲ, ಲೋಕಸಭೆಯ ಸ್ಪೀಕರ್ ಅಥವಾ ರಾಜ್ಯಸಭೆಯ ಸಭಾಪತಿಗಳು ಮೂರು ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸುತ್ತಾರೆ.

ಈ ತನಿಖಾ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಸುಪ್ರೀಂ ಕೋರ್ಟ್‌ನ ಯಾವುದೇ ಪ್ರಸ್ತುತ ನ್ಯಾಯಾಧೀಶರು, ದೇಶದ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಲ್ಲಿ ಒಬ್ಬರು ಮತ್ತು ಹಿರಿಯ ಕಾನೂನು ತಜ್ಞರೊಬ್ಬರು ಸದಸ್ಯರಾಗಿರುತ್ತಾರೆ. ಈ ಸಮಿತಿಯು ಸಿಇಸಿ ಮೇಲಿನ ಎಲ್ಲಾ ಆರೋಪಗಳ ಕುರಿತು ಆಳವಾದ ತನಿಖೆ ನಡೆಸಿ, ತನ್ನ ಅಂತಿಮ ವರದಿಯನ್ನು ಸಂಸತ್ತಿನ ಉಭಯ ಸದನಗಳ ಮುಂದೆ ಮಂಡಿಸಬೇಕಾಗುತ್ತದೆ. ವರದಿಯಲ್ಲಿ ಆರೋಪಗಳು ಸುಳ್ಳು ಅಥವಾ ಸಾಬೀತಾಗಿಲ್ಲ ಎಂದಾದರೆ ಮುಂದಿನ ಯಾವುದೇ ಕ್ರಮ ಜರುಗಿಸಲಾಗುವುದಿಲ್ಲ. ಒಂದು ವೇಳೆ ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಿದರೆ, ಸಂಸತ್ತು ಅದನ್ನು ಅನುಮೋದಿಸಿ ರಾಷ್ಟ್ರಪತಿಗಳಿಗೆ ವಜಾಗೊಳಿಸುವ ನಿರ್ಣಯ ಕಳುಹಿಸಬೇಕಾಗುತ್ತದೆ.

ಚುನಾವಣಾ ಆಯೋಗದ ತಟಸ್ಥತೆ ಮತ್ತು ಸಾಂವಿಧಾನಿಕ ಸ್ವಾಯತ್ತತೆಯನ್ನು ಕಾಪಾಡಲು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಗೆ ಸಂವಿಧಾನವು ವಿಶೇಷ ಭದ್ರತೆ ನೀಡಿದೆ. ವಿಪಕ್ಷಗಳ ರಾಜಕೀಯ ಆರೋಪಗಳ ಏನೇ ಇದ್ದರೂ, ಸಂಸತ್ತಿನಲ್ಲಿ ಕಠಿಣ ಮಹಾಭಿಯೋಗ ಪ್ರಕ್ರಿಯೆ ಮತ್ತು ಸುಪ್ರೀಂ ಕೋರ್ಟ್ ಮಟ್ಟದ ತನಿಖೆ ಪೂರ್ಣಗೊಳ್ಳದೆ ಸಿಇಸಿ ಅವರನ್ನು ವಜಾಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ಓಂ ಬಿರ್ಲಾ ಅವರ ಹೇಳಿಕೆ ಸ್ಪಷ್ಟಪಡಿಸಿದೆ(ಏಜೆನ್ಸೀಸ್​).