- ಮೇ.03ರಂದು ದೇಶಾದ್ಯಂತ ನಡೆದಿದ್ದ ನೀಟ್ ಪರೀಕ್ಷೆ ರದ್ದು
- ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐಗೆ ತನಿಖೆ ನಡೆಸುವಂತೆ ಆದೇಶಿಸಿದೆ
- ಈ ಮಧ್ಯೆ ತಮಿಳುನಾಡು ಸಿಎಂ ವಿಜಯ್ರಿಂದ ಕೇಂದ್ರ ಸರ್ಕಾರಕ್ಕೆ ಬೇಡಿಕೆ
ಚೆನ್ನೈ: ಪ್ರಸ್ತುತ, ದೇಶದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ನಲ್ಲಿ ನಡೆದ ದೊಡ್ಡ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸದ್ಯ ದೇಶವ್ಯಾಪಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಪರೀಕ್ಷೆ ರದ್ದಾಗಿದ್ದು, ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐಗೆ ತನಿಖೆ ನಡೆಸುವಂತೆ ಆದೇಶಿಸಿದೆ. ಮತ್ತೊಂದೆಡೆ, ತಮಿಳುನಾಡಿನ ನೂತನ ಸಿಎಂ ವಿಜಯ್ ಅವರ ಪ್ರತಿಕ್ರಿಯೆ ಸದ್ಯ ಹಲವರ ಹುಬ್ಬೇರಿಸಿದೆ.
ಅಖಿಲ ಭಾರತ ಪರೀಕ್ಷೆಯನ್ನು ಟೀಕಿಸಿದ ವಿಜಯ್, ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಆಧಾರಿತ ಪ್ರವೇಶವನ್ನು ರದ್ದುಗೊಳಿಸಿ, ಅದನ್ನು ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಿ. ಈ ಮೂಲಕ ರಾಜ್ಯಗಳಿಗೆ ಅವಕಾಶ ಕೊಡುವುದು ಸರಿ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ನೀಟ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಇದೇನೂ ಮೊದಲಲ್ಲ. ಇಲ್ಲಿ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ನೀಟ್ ಯುಜಿಯನ್ನು ರದ್ದುಗೊಳಿಸಿ, ಅದನ್ನು ದ್ವಿತೀಯ ಪಿಯು ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶದೊಂದಿಗೆ ಬದಲಾಯಿಸಲು ಅನುಮತಿ ನೀಡಬೇಕು. ಈ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರವು ದೇಶಾದ್ಯಂತ ಲಕ್ಷಾಂತರ ವೈದ್ಯಕೀಯ ವಿದ್ಯಾರ್ಥಿಗಳ ಭರವಸೆಯನ್ನು ಹಾನಿಗೊಳಿಸಿದೆ ಎಂದು ಹೇಳಿದರು.
ಬಡ ವಿದ್ಯಾರ್ಥಿಗಳು ಮೂಲೆ ಗುಂಪು
ತಮಿಳುನಾಡು ರಾಜ್ಯವು ರಾಜಕೀಯವನ್ನು ಮೀರಿ, ನೀಟ್ ಅನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಈ ಪರೀಕ್ಷೆಯು ಶ್ರೀಮಂತ ನಗರ, ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಈ ವ್ಯವಸ್ಥೆಯು ಗ್ರಾಮೀಣ ಹಿನ್ನೆಲೆಯ ಮತ್ತು ತಮ್ಮ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳನ್ನು ಮೂಲೆ ಗುಂಪು ಮಾಡಿದಂತಾಗುತ್ತಿದೆ ಎಂಬ ವಾದಗಳು ಕೇಳಿಬಂದಿವೆ.
“2024ರಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಸಿಬಿಐಗೆ ವರ್ಗಾಯಿಸಲ್ಪಟ್ಟ ನಂತರ ಆರು ರಾಜ್ಯಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಯಿತು. ಮಾಜಿ ಇಸ್ರೋ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿಯು ಸುಧಾರಣೆಗಳಿಗಾಗಿ 95 ಸಮಗ್ರ ಶಿಫಾರಸುಗಳನ್ನು ಸಲ್ಲಿಸಿತು. ಇದೆಲ್ಲದರ ಹೊರತಾಗಿಯೂ, ಎರಡು ವರ್ಷಗಳಲ್ಲಿ ಅಂತರದಲ್ಲಿ ಮತ್ತೊಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದು ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿನ ನ್ಯೂನತೆ ಮತ್ತು ರಚನಾತ್ಮಕ ದೋಷಗಳಿಗೆ ಹಿಡಿದ ಕನ್ನಡಿ” ಎಂದು ವಿಜಯ್ ಹೇಳಿದ್ದಾರೆ.
ಆರಂಭದಿಂದಲೂ ನೀಟ್ಗೆ ವಿರೋಧ
“ತಮಿಳುನಾಡು ಸರ್ಕಾರ ನೀಟ್ ಅನ್ನು ಆರಂಭದಿಂದಲೂ ಸರ್ವಾನುಮತದಿಂದ ವಿರೋಧಿಸುತ್ತಿದೆ. ನೀಟ್ ಪರಿಚಯವು ಗ್ರಾಮೀಣ ಪ್ರದೇಶಗಳು, ಸರ್ಕಾರಿ ಶಾಲೆಗಳು, ತಮಿಳು ಮಾಧ್ಯಮ ಹಿನ್ನೆಲೆಗಳು ಮತ್ತು ಸಾಮಾಜಿಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ನೀಟ್ ಅನ್ನು ರದ್ದುಗೊಳಿಸಿ ದ್ವಿತೀಯ ಪಿಯು ಅಂಕಗಳ ಆಧಾರದ ಮೇಲೆ ಎಂಬಿಬಿಎಸ್, ಬಿಡಿಎಸ್ ಮತ್ತು ಆಯುಷ್ ಕೋರ್ಸ್‌ಗಳಲ್ಲಿ ಎಲ್ಲಾ ಸೀಟುಗಳನ್ನು ರಾಜ್ಯ ಕೋಟಾದಡಿಯಲ್ಲಿ ಭರ್ತಿಗೊಳಿಸಲು ಅವಕಾಶ ನೀಡಬೇಕು ಎಂಬ ರಾಜ್ಯದ ದೀರ್ಘಕಾಲದ ಬೇಡಿಕೆಯನ್ನು ತಮಿಳುನಾಡು ಸರ್ಕಾರ ಈ ಸಂದರ್ಭದಲ್ಲಿ ಪುನರುಚ್ಚರಿಸುತ್ತದೆ” ಎಂದರು,(ಏಜೆನ್ಸೀಸ್).