ಮುಂಬೈ: ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದಿರುವ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಸದ್ಯ ತಾರರಕ್ಕೇರಿದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ.
ಸೋಮವಾರದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ (BSE Sensex) ಬರೋಬ್ಬರಿ 959 ಅಂಕಗಳ ಕುಸಿತ ಕಂಡು 72,936ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ-50 (Nifty50) 307 ಅಂಕಗಳನ್ನು ಕಳೆದುಕೊಂಡು 22,833ರ ಮಟ್ಟಕ್ಕೆ ಕುಸಿದಿದೆ. ಈ ಭಾರಿ ಷೇರುಪೇಟೆಗೆ ಬಿದ್ದಿರುವ ಹೊಡೆತಕ್ಕೆ ಹೂಡಿಕೆದಾರರ ಸುಮಾರು 6 ಲಕ್ಷ ಕೋಟಿ ರೂ. ಕ್ಷಣಮಾತ್ರದಲ್ಲಿ ಕರಗಿ ಹೋಗಿದೆ.
ಇರಾನ್-ಅಮೆರಿಕ ಸಂಘರ್ಷ: ಕದನ ವಿರಾಮ ಪ್ರಸ್ತಾವನೆಯನ್ನು ಅಮೆರಿಕ ತಿರಸ್ಕರಿಸಿದ ನಂತರ ಭೀಕರ ಯುದ್ಧದ ಆತಂಕ ತೀವ್ರಗೊಂಡಿದೆ.
ಕಚ್ಚಾ ತೈಲ ದರ ಏರಿಕೆ: ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿಯಿಂದ ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 107 ಡಾಲರ್ ತಲುಪಿದೆ.
ಅಮೆರಿಕನ್ ಬಾಂಡ್ ಇಳುವರಿ ಏರಿಕೆ: ಅಮೆರಿಕದ 10 ವರ್ಷಗಳ ಟ್ರೆಷರಿ ಬಾಂಡ್ ಇಳುವರಿ ಶೇ. 5.2ಕ್ಕೆ ಏರಿಕೆಯಾಗಿದ್ದು, ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಹಣ ಹಿಂಪಡೆಯುತ್ತಿದ್ದಾರೆ.
ರೂಪಾಯಿ ಮೌಲ್ಯ ಕುಸಿತ: ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 14 ಪೈಸೆ ಕುಸಿದು 95.89ಕ್ಕೆ ತಲುಪಿದೆ.
ವಿದೇಶಿ ಹೂಡಿಕೆದಾರರ ಮಾರಾಟ (FII): ಸತತವಾಗಿ ವಿದೇಶಿ ಇನ್ವೆಸ್ಟರ್ಸ್ ತಮ್ಮ ಷೇರುಗಳನ್ನು ಮಾರಿ ಹೊರನಡೆಯುತ್ತಿರುವುದು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬಂದಾಗ ಹೂಡಿಕೆದಾರರು ಗಾಬರಿಗೊಂಡು ತಕ್ಷಣವೇ ತಮ್ಮ ಷೇರುಗಳನ್ನು ಮಾರಿ ಹೊರಬರುವುದು ದೊಡ್ಡ ಎಡವಟ್ಟು. ಕಾರಣ, ಮಾರುವುದಕ್ಕಿಂತ ಮಾರುಕಟ್ಟೆ ಚೇತರಿಸಿಕೊಂಡಾಗ ಅದೇ ನಿಮ್ಮ ಹೂಡಿಕೆಯ ಮೌಲ್ಯವೂ ಮರಳಿ ಏರುತ್ತದೆ ಎಂಬುದು ನೆನಪಿಡಿ. ಇಂತಹ ಸಮಯದಲ್ಲಿ ಮ್ಯೂಚುವಲ್ ಫಂಡ್‌ಗಳ ಎಸ್‌ಐಪಿ (SIP) ಹೂಡಿಕೆಯನ್ನು ರದ್ದುಗೊಳಿಸದೆ ಮುಂದುವರಿಸುವುದರಿಂದ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಯೂನಿಟ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಇನ್ನು, ಒಂದೇ ಬಾರಿಗೆ ಬೃಹತ್ ಮೊತ್ತದ (Lumpsum) ಹೂಡಿಕೆ ಮಾಡುವ ಸಾಹಸಕ್ಕೆ ಕೈಹಾಕದೆ ಹಂತ-ಹಂತವಾಗಿ ಹಣ ಹೂಡುವುದು ಜಾಣತನ. ಹಾಗೆಯೇ, ಕೇವಲ ಷೇರು ಮಾರುಕಟ್ಟೆಯನ್ನೇ ನೆಚ್ಚಿಕೊಳ್ಳದೆ ಚಿನ್ನ, ಡೆಬ್ಟ್ ಫಂಡ್‌ಗಳು ಅಥವಾ ಸ್ಥಿರ ಠೇವಣಿಗಳಲ್ಲಿಯೂ (FD) ಹೂಡಿಕೆಯನ್ನು ಹಂಚಿಕೆ ಮಾಡುವುದರಿಂದ ಏರಿಳಿತಗಳ ಆಘಾತವನ್ನು ಕಡಿಮೆ ಮಾಡಿಕೊಳ್ಳಬಹುದು,(ಏಜೆನ್ಸೀಸ್).