ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​  
ದೇಶ

ಇಸ್ರೇಲ್​, ಚೀನಾಗೆ 12.5%! ಭಾರತಕ್ಕೆ ಮಾತ್ರ ಶೇ.10ರಷ್ಟು ಏಕೆ? 60 ದೇಶಗಳಿಗೆ ತಟ್ಟಲಿದೆ ಟ್ರಂಪ್​ ಹೆಚ್ಚುವರಿ ಸುಂಕ ಬಿಸಿ

ಪ್ರಮುಖ ಮುಖ್ಯಾಂಶಗಳು

  • 60 ರಾಷ್ಟ್ರಗಳಿಗೆ ಹೆಚ್ಚುವರಿ ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ
  • ಭಾರತದ ಆಮದುಗಳ ಮೇಲೆ ಶೇ.10ರಷ್ಟು ಸುಂಕ
  • ಟ್ರಂಪ್​ ನಡೆಯಿಂದ ಭಾರತಕ್ಕೆ ಏನು ಪರಿಣಾಮ?
Trump Tariff: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಕುರಿತು ಮಾತುಕತೆಗಳು ಮುಂದುವರಿದಂತೆ, ಟ್ರಂಪ್​ ಸರ್ಕಾರವು ಶೇ.10ರಷ್ಟು ಸುಂಕ ವಿಧಿಸುವ ಮೂಲಕ ಪ್ರಮುಖ ನಿರ್ಧಾರವನ್ನೇ ಕೈಗೊಂಡಿದೆ.
ಭಾರತ ಸೇರಿದಂತೆ ಇತರ 16 ದೇಶಗಳಿಂದ ಆಮದು ಮಾಡಿಕೊಳ್ಳುವ ಕೆಲವು ಉತ್ಪನ್ನಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸುವುದಾಗಿ ಯುಎಸ್ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಘೋಷಿಸಿದೆ. ಅಮೆರಿಕ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ನಡೆಸಲಾದ ತನಿಖೆಯು, ಕಾರ್ಮಿಕರಿಂದ ಬಲವಂತವಾಗಿ ತಯಾರಿಸಿದ ಸರಕುಗಳ ಆಮದನ್ನು ನಿಷೇಧಿಸುವ ಕಾನೂನುಗಳನ್ನು ದೇಶಗಳು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿವೆಯೇ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಈ ತನಿಖೆಯ ಆಧಾರದ ಮೇಲೆ ಹೊಸ ತೆರಿಗೆಯನ್ನು ಘೋಷಿಸಲಾಗಿದೆ.
ತನಿಖೆಯ ಬೆನ್ನಲ್ಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ ದೇಶಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಲು ಮತ್ತು ಅಂತಹ ಕ್ರಮಗಳನ್ನು ತೆಗೆದುಕೊಳ್ಳದ ದೇಶಗಳ ಮೇಲೆ ಶೇ.12.5ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ. ಈ ವರ್ಷ ಜೂನ್ 14ರಂದು, ಭಾರತವು ತನ್ನ ವಿದೇಶಿ ವ್ಯಾಪಾರ ನೀತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿತು. ಕಾರ್ಮಿಕರಿಂದ ಮಾಡಿದ ಸರಕುಗಳ ಆಮದನ್ನು ನಿಷೇಧಿಸುವ ನಿಬಂಧನೆಗಳನ್ನು ಇದು ಒಳಗೊಂಡಿತ್ತು.
ಈ ಕ್ರಮಗಳನ್ನು ಗಣನೆಗೆ ತೆಗೆದುಕೊಂಡ ಅಮೆರಿಕವು ಆರಂಭದಲ್ಲಿ ಪ್ರಸ್ತಾಪಿಸಲಾದ ಶೇ.12.5ರಷ್ಟು ಸುಂಕವನ್ನು ಶೇ.10ಕ್ಕೆ ಇಳಿಸಿತು. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಕಾಂಬೋಡಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿ ಒಟ್ಟು 17 ದೇಶಗಳ ಮೇಲೆ 10ರಷ್ಟು ಹೆಚ್ಚುವರಿ ಸುಂಕವನ್ನು ಜಾರಿಗೆ ತರುವುದಾಗಿ ಘೋಷಿಸಿದೆ.

ಭಾರತಕ್ಕೆ ಏಕೆ ಶೇ.10ರಷ್ಟು ಸುಂಕ?

ಆರಂಭದಲ್ಲಿ ಭಾರತಕ್ಕೆ ಬಲವಂತವಾಗಿ ಕೂಲಿಕಾರರಿಂದ ದುಡಿಸಿಕೊಳ್ಳುವ ಕಳವಳದಿಂದಾಗಿ ಅಮೆರಿಕ ಭಾರತದ ಮೇಲೆ ಶೇ.12.5ರಷ್ಟು ಹೆಚ್ಚುವರಿ ದಂಡ ಸುಂಕ ವಿಧಿಸುವುದಾಗಿ ತಿಳಿಸಿತ್ತು. ಆದರೆ, ನಂತರದ ಮಾತುಕತೆಯ ಬಳಿಕ ಭಾರತ ಸೇರಿದಂತೆ ಕಾಂಬೋಡಿಯಾ, ಶ್ರೀಲಂಕಾ ಮುಂತಾದ ದೇಶಗಳು ಬಲವಂತದ ಶ್ರಮದಿಂದ ತಯಾರಾಗುವ ಉತ್ಪನ್ನಗಳ ಆಮದನ್ನು ತಡೆಯಲು ನಿಯಮ ರೂಪಿಸಲು ಒಪ್ಪಿಕೊಂಡಿವೆ ಎಂದು ಉಲ್ಲೇಖಿಸಿ, ಶೇ.10ರಷ್ಟು ಸುಂಕ ವಿಧಿಸಲು ನಿರ್ಧರಿಸಿತು.

ಯಾವ ವಲಯಗಳಿಗೆ ಪರಿಣಾಮ ಬೀರುವ ಸಾಧ್ಯತೆ?

ಹೊಸದಾಗಿ ಜಾರಿಗೆ ತರಲಾದ ಹೆಚ್ಚುವರಿ ಸುಂಕಗಳು ಅಮೆರಿಕಕ್ಕೆ ರಫ್ತು ಮಾಡುವ ಕೆಲವು ಭಾರತೀಯ ಕೈಗಾರಿಕೆಗಳ ಮೇಲೆ ಹೆಚ್ಚುವರಿ ಹೊರೆಯನ್ನು ಹಾಕುವ ಸಾಧ್ಯತೆಯಿದೆ. ಉತ್ಪಾದನೆ, ಜವಳಿ ಮತ್ತು ಇಂಜಿನಿಯರಿಂಗ್ ಉತ್ಪನ್ನಗಳಂತಹ ವಲಯಗಳು ವಿಶೇಷವಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಆದಾಗ್ಯೂ, ಅಮೆರಿಕ-ಮೆಕ್ಸಿಕೋ-ಕೆನಡಾ ಒಪ್ಪಂದದ ಅಡಿಯಲ್ಲಿ ಕೆಲವು ಉತ್ಪನ್ನಗಳು ಹಾಗೂ ತೈಲ ಮತ್ತು ನೈಸರ್ಗಿಕ ಅನಿಲದಂತಹ ಕೆಲವು ಸರಕುಗಳನ್ನು ಈ ಸುಂಕಗಳಿಂದ ವಿನಾಯಿತಿ ನೀಡಲಾಗಿದೆ.

ವ್ಯಾಪಾರ ಒಪ್ಪಂದದ ಮೇಲೆ ಹೇಗೆ ಪರಿಣಾಮ?

ಪ್ರಸ್ತುತ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮೊದಲ ಹಂತದ ಮಾತುಕತೆಗಳು ನಡೆಯುತ್ತಿವೆ. ಇತ್ತೀಚೆಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮ್ಸನ್ ಗ್ರೀರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಒಪ್ಪಂದದ ಮೂಲ ರೂಪರೇಷೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಡೀಲ್​ಗೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ,(ಏಜೆನ್ಸೀಸ್).