- ತುರ್ತು ವೈದ್ಯಕೀಯ ಸೇವೆಗಳು ಕೇವಲ ಒಂದು ಫೋನ್ ಕರೆಯಷ್ಟು ದೂರದಲ್ಲಿ ಸಿಗಬೇಕು ಎಂಬ ನಿಯಮಗಳಿವೆ
- ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಮಯಕ್ಕೆ ಸರಿಯಾಗಿ ಸಿಗದ ಆಂಬ್ಯುಲೆನ್ಸ್
- ಆಟೋರಿಕ್ಷಾದಲ್ಲೇ ನಾಲ್ಕು ಅಕಾಲಿಕ ಶಿಶುಗಳಿಗೆ ಜನ್ಮ ನೀಡಿದ್ದು, ಆರೈಕೆ ಸಿಗದೆ ಶಿಶುಗಳು ಸಾವು
ಮಧ್ಯಪ್ರದೇಶ: ತುರ್ತು ವೈದ್ಯಕೀಯ ಸೇವೆಗಳು ಕೇವಲ ಒಂದು ಫೋನ್ ಕರೆಯಷ್ಟು ದೂರದಲ್ಲಿ ಸಿಗಬೇಕು ಎಂಬ ನಿಯಮಗಳಿರುವ ಈ ಆಧುನಿಕ ವ್ಯವಸ್ಥೆಯಲ್ಲಿ, ಮಧ್ಯಪ್ರದೇಶದ ಮಾಂಡ್ಲಾ ನಗರದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದ ಕಾರಣ, ಅವರು ಆಟೋರಿಕ್ಷಾದಲ್ಲೇ ನಾಲ್ಕು ಅಕಾಲಿಕ (Premature Birth) ಶಿಶುಗಳಿಗೆ ಜನ್ಮ ನೀಡಿದ್ದು, ಆರೈಕೆ ಸಿಗದೆ ಆ ನಾಲ್ಕು ನವಜಾತ ಶಿಶುಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.
ವರದಿಗಳ ಪ್ರಕಾರ, ಮಂಗಳವಾರ ಈ ಘಟನೆ ನಡೆದಿದ್ದು, ನೈಗನ್ವಾ ಗ್ರಾಮದ ರಜನಿ ಸಿಂದ್ರಮ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಅವರ ಕುಟುಂಬಸ್ಥರು ಇದ್ದಕ್ಕಿಂದ್ದಂತೆಯೇ 108 ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದ್ದಾರೆ. ಆದರೆ, ಅವರು ಸಮಯಕ್ಕೆ ಸರಿಯಾಗಿ ತಲುಪಲಿಲ್ಲ ಎಂದು ಆರೋಪಿಸಿದ್ದಾರೆ.
ಆದಾಗ್ಯೂ, ರಜನಿಯ ಸ್ಥಿತಿ ಹದಗೆಡುತ್ತಿದ್ದಂತೆ, ಕುಟುಂಬಕ್ಕೆ ಬೇರೆ ದಾರಿಯಿಲ್ಲದೇ ಆಟೋರಿಕ್ಷಾದಲ್ಲಿ ಅವರನ್ನು ಕೂರಿಸಿ ಆಶಾ ಕಾರ್ಯಕರ್ತೆಯರ ಸಹಾಯದಿಂದ ಘುಟಾಸ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಘುಟಾಸ್‌ನಲ್ಲಿ ವೈದ್ಯರು ಮಹಿಳೆಗೆ ಆರಂಭಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಆರೈಕೆಗಾಗಿ ಬಿಚಿಯಾ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದರು.
ಆದರೆ, ದುರದೃಷ್ಟವಶಾತ್ ಗರ್ಭದಲ್ಲಿದ್ದ ಆ ಸೂಕ್ಷ್ಮ ಶಿಶುಗಳನ್ನು ರಕ್ಷಿಸಲು ಸಿಗಬೇಕಿದ್ದ ವೈದ್ಯಕೀಯ 'ರೆಫರಲ್' ಸಿಗುವುದು ತಡವಾಯಿತು. ಬಿಚಿಯಾಗೆ ಹೋಗುವ ದಾರಿಯಲ್ಲಿ ಆಟೋರಿಕ್ಷಾ ಆಸ್ಪತ್ರೆಯನ್ನು ತಲುಪುವ ಮೊದಲೇ, ರಜನಿ ಆ ಕಿರಿದಾದ ವಾಹನದೊಳಗೇ ಒಂದರ ನಂತರ ಒಂದರಂತೆ ನಾಲ್ಕು ಶಿಶುಗಳಿಗೆ ಜನ್ಮ ನೀಡಿದರು.
ಆ ಭೀಕರ ಬಿಕ್ಕಟ್ಟಿನ ಸಮಯದಲ್ಲಿ ಕುಟುಂಬದ ಜೊತೆಯಲ್ಲೇ ಇದ್ದ 'ಆಶಾ' ಕಾರ್ಯಕರ್ತೆ ಧೃತಿಗೆಡದೆ ಪರಿಸ್ಥಿತಿಯನ್ನು ನಿಭಾಯಿಸಲು ನೆರವಾದರು. ತಕ್ಷಣವೇ ರಜನಿಯನ್ನು ಬಿಚ್ಚಿಯಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯದರು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಆ ನಾಲ್ಕೂ ಮಕ್ಕಳು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.
ಈ ಬಗ್ಗೆ ವೈದ್ಯರು ಹೇಳಿದ್ದೇನು?
ಡಾ. ಅನೂಪ್ ಕುಮಾರ್ ಮಾತನಾಡಿ, ಮಹಿಳೆ ಆಸ್ಪತ್ರೆಗೆ ತಲುಪುವ ಮೊದಲೇ ಆಟೋರಿಕ್ಷಾದಲ್ಲೇ ನಾಲ್ಕು ಶಿಶುಗಳಿಗೆ ಜನ್ಮ ನೀಡಿದ್ದರು. ರಜನಿ ಅವರು ಕೇವಲ ಏಳು ತಿಂಗಳ ಗರ್ಭಿಣಿಯಾಗಿದ್ದರಿಂದ, ಆಕೆಯ ಗರ್ಭದಲ್ಲಿದ್ದ ಶಿಶುಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರಲಿಲ್ಲ (Premature Birth). ಅಕಾಲಿಕ ಜನನ ಹಾಗೂ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದ ಕಾರಣ ಶಿಶುಗಳು ಮೃತಪಟ್ಟಿವೆ. ಸದ್ಯ ತಾಯಿಗೆ ತುರ್ತು ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಂಡಿದೆ ಮತ್ತು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಉಚಿತ 108 ಆಂಬ್ಯುಲೆನ್ಸ್ ಸೇವೆಯಲ್ಲಿನ ವಿಳಂಬವೇ ಈ ಇಡೀ ದುರಂತಕ್ಕೆ ಕಾರಣ ಎಂದು ರಜನಿ ಅವರ ಪತಿ ಧನೇಶ್ ಸಿಂದ್ರಮ್ ಗಂಭೀರವಾಗಿ ಆರೋಪಿಸಿದ್ದಾರೆ. ನನ್ನ ಹೆಂಡತಿ 6-7 ತಿಂಗಳ ಗರ್ಭಿಣಿಯಾಗಿದ್ದಳು. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ನಾವು ಅವಳನ್ನು ಆಟೋರಿಕ್ಷಾದಲ್ಲಿ ಕರೆತರಬೇಕಾಯಿತು. ಆದರೆ ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ದಾರಿಯಲ್ಲೇ ಆಕೆಗೆ ಹೆರಿಗೆಯಾಯಿತು. ಹುಟ್ಟಿದ ನಾಲ್ಕೂ ಶಿಶುಗಳು ಮೃತಪಟ್ಟಿರುವುದು ಕಂಡುಬಂದಿದೆ. ಸದ್ಯಕ್ಕೆ ನನ್ನ ಹೆಂಡತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚೆನ್ನಾಗಿದ್ದಾಳೆ, ಎಂದು ಕಣ್ಣೀರು ಹಾಕಿದ್ದಾರೆ (ಏಜೆನ್ಸೀಸ್).