2.2 ಕೋಟಿ ಮೌಲ್ಯದ ಐಷಾರಾಮಿ ವಜ್ರದ ಬ್ರೇಸ್‌ಲೆಟ್ ಉಡುಗೊರೆಯಾಗಿ ನೀಡಿದ ಅಂಬಾನಿ ಫ್ಯಾಮಿಲಿ
- ಜಾಗತಿಕ ಪಾಪ್ ಸ್ಟಾರ್ ರಿಹಾನ್ನಾಗೆ ಮುಖೇಶ್ ಅಂಬಾನಿ ಕುಟುಂಬದಿಂದ ಉಡುಗೊರೆ
- 2.2 ಕೋಟಿ ಮೌಲ್ಯದ ಐಷಾರಾಮಿ ವಜ್ರದ ಬ್ರೇಸ್‌ಲೆಟ್ ಉಡುಗೊರೆಯಾಗಿ ನೀಡಿದ ಅಂಬಾನಿ ಫ್ಯಾಮಿಲಿ
- ಅಂಬಾನಿ ಆತಿಥ್ಯಕ್ಕೆ ಮನಸೋತ ಸಿಂಗರ್ ರಿಹಾನ್ನಾ
ವೈರಲ್: ಭಾರತದ ಅತ್ಯಂತ ಶ್ರೀಮಂತ್ರ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬದ ಆತಿಥ್ಯ ಮತ್ತು ಅವರು ನೀಡುವ ಉಡುಗೊರೆಗಳ ಬಗ್ಗೆ ಜಗತ್ತಿನಾದ್ಯಂತ ಸದಾ ಚರ್ಚೆಯಾಗುತ್ತಿರುತ್ತದೆ.
ಕೆಲ ತಿಂಗಳುಗಳ ಹಿಂದೆ ಮುಂಬೈಗೆ ಬಂದು ಹೋಗಿದ್ದ ಜಾಗತಿಕ ಪಾಪ್ ತಾರೆ, ಸಿಂಗರ್ ರಿಹಾನ್ನಾಗೆ ಅಂಬಾನಿ ಕುಟುಂಬ ಒಂದು ಭರ್ಜರಿ ಗಿಫ್ಟ್ ನೀಡಿದೆ. ಅಂಬಾನಿ ಫ್ಯಾಮಿಲಿ ರಿಹಾನ್ನಾ (Ambani Family Gift's Rihanna) ಗೆ ಬರೋಬ್ಬರಿ 2.2 ಕೋಟಿ ಮೌಲ್ಯದ ವಜ್ರದ ಬ್ರೇಸ್‌ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆಂದು ಸಿಂಗರ್ ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಬ್ರೇಸ್‌ಲೆಟ್ ತೋರಿಸಿದ ರಿಹಾನ್ನಾ!
ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿರುವ ಇನ್‌ಸ್ಟಾಗ್ರಾಮ್ ವಿಡಿಯೋ ಒಂದರಲ್ಲಿ ರಿಹಾನ್ನಾ ತಮಗೆ ಸಿಕ್ಕ ಈ ದುಬಾರಿ ಉಡುಗೊರೆಯನ್ನು ಜಗತ್ತಿಗೆ ತೋರಿಸಿದ್ದಾರೆ.
ದಿ ಪೀಪಲ್ ಗ್ಯಾಲರಿ ಎಂಬ ಖಾತೆ ಹಂಚಿಕೊಂಡಿರುವ ವಿಡಿಯೋದಲ್ಲಿ, ರಿಹಾನ್ನಾ ತಮ್ಮ ದೈನಂದಿನ ಫ್ಯಾಷನ್ ಮತ್ತು ಉಡುಪಿನ ಬಗ್ಗೆ ಮಾತನಾಡುತ್ತಾ, ಕ್ಯಾಮೆರಾ ಕಡೆಗೆ ಕೈ ಚಾಚಿ ತಮ್ಮ ಕೈಯಲ್ಲಿದ್ದ ವಜ್ರದ ಬ್ರೇಸ್‌ಲೆಟ್ ಅನ್ನು ತೋರಿಸಿದ್ದಾರೆ. ಅಷ್ಟೇ ಅಲ್ಲದೇ, ಇದನ್ನು ನನಗೆ ಭಾರತದಲ್ಲಿ ಅಂಬಾನಿ ಕುಟುಂಬದವರು ಗಿಫ್ಟ್ ಆಗಿ ಕೊಟ್ಟಿದ್ದು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಏನಿದರ ಸ್ಪೆಷಾಲಿಟಿ? ತಜ್ಞರು ಹೇಳಿದ್ದೇನು?
ರಿಹಾನ್ನಾ ಧರಿಸಿರುವ ಈ ಆಭರಣದ ವಿಡಿಯೋ ಹೊರಬೀಳುತ್ತಿದ್ದಂತೆ, ಪ್ರಸಿದ್ಧ ಆಭರಣ ತಜ್ಞ ಪ್ರಿಯಾಂಶು ಗೋಯಲ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದರ ಜಾತಕವನ್ನೇ ಬಿಚ್ಚಿಟ್ಟಿದ್ದಾರೆ.
ಅವರ ಪ್ರಕಾರ, ಈ ವಜ್ರದ ಬ್ರೇಸ್‌ಲೆಟ್‌ನ ಬೆಲೆ ಸುಮಾರು 2.2 ಕೋಟಿ ರೂಪಾಯಿ ಆಗಿದ್ದು, ನೋಡುವುದಕ್ಕೆ ತುಂಬ ಸಿಂಪಲ್ ಆಗಿ, ಆದರೆ ಅತ್ಯಂತ ಕ್ಲಾಸಿಕ್ ಆಗಿ ಕಾಣುವ ಟೆನಿಸ್ ಬ್ರೇಸ್‌ಲೆಟ್ (Tennis Bracelet) ವಿನ್ಯಾಸಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ. ಸರಳತೆ ಮತ್ತು ಅಪ್ರತಿಮ ಸೌಂದರ್ಯದ ಸಮ್ಮಿಶ್ರಣವೇ ಈ ಡೈಮಂಡ್ ಬ್ರೇಸ್‌ಲೆಟ್ ಆಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
ಅನಂತ್ ಮದುವೆ ಮತ್ತು ಆಂಟಿಲಿಯಾ ಭೇಟಿ
ಕೆಲ ದಿನಗಳ ಹಿಂದೆ ರಿಹಾನ್ನಾ ತಮ್ಮ ಬ್ಯೂಟಿ ಬ್ರಾಂಡ್‌ನ ಪ್ರಚಾರ ಕಾರ್ಯಕ್ರಮಕ್ಕಾಗಿ ಮುಂಬೈಗೆ ಬಂದಿದ್ದರು. ಈ ವೇಳೆ ಅವರು ಮುಖೇಶ್ ಅಂಬಾನಿ ಅವರ ಐಷಾರಾಮಿ ಮನೆ ಆಂಟಿಲಿಯಾಗೆ ಭೇಟಿ ನೀಡಿದ್ದರು.
ಅಂಬಾನಿ ಕುಟುಂಬವು ರಿಹಾನ್ನಾ ಅವರನ್ನು ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ಪ್ರೀತಿಯಿಂದ ಸ್ವಾಗತಿಸಿ, ರಾಯಲ್ ಊಟದ ವ್ಯವಸ್ಥೆ ಮಾಡಿತ್ತು. ಅಲ್ಲಿ ಅವರು ಕುಟುಂಬದ ಸದಸ್ಯರೊಂದಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದರು. ಇದಕ್ಕೂ ಮೊದಲು, 2024ರ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರಿ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ರಿಹಾನ್ನಾ ಭಾರತಕ್ಕೆ ಬಂದು ಪ್ರದರ್ಶನ ನೀಡಿದ್ದರು.
ಅವರ ವರ್ಕ್, ವೈಲ್ಡ್ ಥಾಟ್ಸ್ ಹಾಡುಗಳಿಗೆ ಇಡೀ ಅಂಬಾನಿ ಕುಟುಂಬವೇ ಸ್ಟೆಪ್ ಹಾಕಿತ್ತು. ಅಂದಿನಿಂದ ರಿಹಾನ್ನಾ ಮತ್ತು ಅಂಬಾನಿ ಕುಟುಂಬದ ನಡುವೆ ಒಂದು ಆತ್ಮೀಯ ಒಡನಾಟ ಬೆಳೆದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈಗ ಈ 2.2 ಕೋಟಿಯ ಡೈಮಂಡ್ ಗಿಫ್ಟ್ ರಿಹಾನ್ನಾಳ ಕೈ ಸೇರಿದೆ ಎನ್ನಬಹುದಾಗಿದೆ, (ಏಜನ್ಸೀಸ್).