ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಪಹಲ್ಗಾಮ್ ಮತ್ತು ಬಾಲ್ಟಾಲ್ ಎರಡೂ ಮಾರ್ಗಗಳಿಂದ ಅಮರನಾಥ ಗುಹೆಯತ್ತ ಯಾತ್ರಿಕರು ಹೋಗುವುದನ್ನು ಆಗಸ್ಟ್ 9ರಿಂದ ತಡೆಯಲಾಗಿದೆ.
ಇನ್ನು, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಕೆಲವು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತೆ ಎಂದು ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಯಾತ್ರಿಕರ ಸುರಕ್ಷತೆ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಅಮರನಾಥ ಯಾತ್ರೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಶ್ರಾವಣ ಮಾಸದಲ್ಲಿ ಮಹದೇವನ ದರ್ಶನ ಮಾಡಲು ಬರುವ ಭಕ್ತರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಗಿದೆ.
ಮಳೆ ಹೆಚ್ಚಾದರೆ ಭೂಕುಸಿತದ ಭೀತಿ
ಇತ್ತೀಚಿಗೆ ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ನಿರಂತರ ಮಳೆಯಿಂದ ಭೂಕುಸಿತ, ಹಠಾತ್ ಪ್ರವಾಹದ ಉರುಳುವ ಅಪಾಯವಿದೆ. ಇದರಿಂದ ಯಾತ್ರೆಯ ಮಾರ್ಗಗಳಲ್ಲಿ ಹೈ ಅಲರ್ಟ್ ಇದ್ದು, ಭಕ್ತರು ಸಾಗುವ ಕೆಲ ರಸ್ತೆಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಗಡಿ ರಸ್ತೆ ಸಂಸ್ಥೆ (BRO) ಕೂಡ ಅಗತ್ಯ ಕಾಮಗಾರಿಗಳನ್ನು ನಡೆಸುತ್ತಿದೆ.
ಅಮರನಾಥ ಯಾತ್ರಿಕರಿಗೆ ಸೂಚನೆ
ಹವಾಮಾನ ಪರಿಸ್ಥಿತಿ ಸುಧಾರಿಸುವವರೆಗೆ ಯಾತ್ರಿಕರು ತಾವು ಇರುವ ಗೊತ್ತುಪಡಿಸಿದ ಶಿಬಿರಗಳಲ್ಲೇ ಉಳಿಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ರೋಡ್ಗಳು ಸುರಕ್ಷಿತವಾಗಿವೆ ಎಂದು ಅಧಿಕಾರಿಗಳು ಖಚಿತಪಡಿಸಿದ ಬಳಿಕವಷ್ಟೇ ಮುಂದಿನ ಯಾತ್ರೆಗೆ ಅವಕಾಶ ನೀಡಲಾಗುತ್ತೆ. ಪಹಲ್ಗಾಮ್‌ನ ಚಂದನ್ವಾರಿ ಮಾರ್ಗ ಹಾಗೂ ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್ ಮಾರ್ಗದಿಂದ ಈ ಬಾರಿ ಅಮರನಾಥ ಯಾತ್ರೆ ಜುಲೈ 3ರಂದು ಆರಂಭವಾಗಿತ್ತು.
ಅಲ್ಲದೆ ಈ ಯಾತ್ರೆ ದೇಶದ ಪ್ರಮುಖ ಹಿಂದೂ ತೀರ್ಥಯಾತ್ರೆಗಳಲ್ಲಿ ಒಂದಾಗಿದ್ದು, ಅಮರನಾಥ ಗುಹೆ 3,880 ಮೀಟರ್ ಎತ್ತರದಲ್ಲಿದೆ. ಗುಹೆಯಲ್ಲಿರುವ ನೈಸರ್ಗಿಕವಾಗಿ ರೂಪುಗೊಳ್ಳುವ ಮಂಜುಗಡ್ಡೆಯ ಲಿಂಗವನ್ನು ಶಿವನ ಸ್ವರೂಪವೆಂದು ಭಕ್ತರು ನಂಬುತ್ತಾರೆ. ಭಕ್ತರು ಚಳಿ-ಮಳೆ ಎನ್ನದೆ, ಬೆಟ್ಟ-ಗುಡ್ಡದ ಕಲ್ಲು ಹಾದಿಯನ್ನು ತುಳಿದು ಕಿಲೋಮೀಟರ್‌ಗಳಷ್ಟು ದೂರ ಕಾಲ್ನಡಿಗೆಯಲ್ಲಿ ಸಾಗುತ್ತಾರೆ.
ಯಾತ್ರಿಕರ ಸುರಕ್ಷತೆಯೇ ಮುಖ್ಯ
ಪರ್ವತ ಪ್ರದೇಶಗಳಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ ಮತ್ತು ಭೂಕುಸಿತದ ಸಾಧ್ಯತೆ ಇರುವುದರಿಂದ ಯಾತ್ರಿಕರ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿ, ಯಾತ್ರಾ ಮಾರ್ಗಗಳನ್ನು ಸುರಕ್ಷಿತ ಎಂದು ಘೋಷಿಸಿದ ನಂತರ ಯಾತ್ರೆ ಪುನರಾರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ,(ಏಜೆನ್ಸೀಸ್).