ಕ್ಯಾಪ್ಟನ್ ಕೈ ಹಿಡಿಯೋದು ಪಕ್ಕಾನಾ?  
ದೇಶ

ಕ್ಯಾಪ್ಟನ್ ಕೈ ಹಿಡಿಯೋದು ಪಕ್ಕಾನಾ? ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾದ ಅಮರಿಂದರ್ ಸಿಂಗ್ ಹೇಳಿದ್ದಿಷ್ಟು! | Amarinder Singh

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮರಳುವ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಊಹಾಪೋಹಗಳು ಹರಿದಾಡುತ್ತಿರುವ ನಡುವೆಯೇ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೋಮವಾರ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (Belonging: A Journey of Love) ಕೃತಿಯ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಮರಿಂದರ್ ಸಿಂಗ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರೊಂದಿಗೆ ಮೊದಲ ಸಾಲಿನಲ್ಲಿ ಆಸೀನರಾಗಿದ್ದರು.

ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಚರಣ್‌ಜಿತ್ ಸಿಂಗ್ ಚನ್ನಿಯನ್ನು ನೇಮಿಸಿದ ಹಿನ್ನೆಲೆಯಲ್ಲಿ ಅಮರಿಂದರ್ ಸಿಂಗ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ತದನಂತರ, 2022ರ ಸೆಪ್ಟೆಂಬರ್ 19ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಬಿಜೆಪಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗೊಂಡಿದ್ದಾರೆ ಮತ್ತು ಮರಳಿ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂಬ ವದಂತಿಗಳು ದಟ್ಟವಾಗಿ ಕೇಳಿಬರುತ್ತಿದ್ದವು. ಆದರೆ, ಈ ಎಲ್ಲಾ ವರದಿಗಳನ್ನು ಕ್ಯಾಪ್ಟನ್​ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಅಮರಿಂದರ್ ಸಿಂಗ್ ನೀಡಿದ ಸ್ಪಷ್ಟನೆ ಹೀಗಿದೆ!

ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಾವು ಹಾಜರಾಗಿರುವುದು ಕೇವಲ ವೈಯಕ್ತಿಕ ಸಂಬಂಧದ ಹಿನ್ನೆಲೆಯಲ್ಲಿ ಮಾತ್ರ ಎಂದು ಅಮರಿಂದರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗಾಂಧಿ ಕುಟುಂಬದೊಂದಿಗೆ ತಮಗೆ ದೀರ್ಘಕಾಲದ ಆತ್ಮೀಯ ಬಾಂಧವ್ಯವಿದೆ ಎಂದಿರುವ ಅವರು, ರಾಜಕೀಯ ಭಿನ್ನಾಭಿಪ್ರಾಯಗಳು ಅಥವಾ ಪಕ್ಷದ ನಿಷ್ಠೆಗಳು ಸಾಮಾಜಿಕ ಒಡನಾಟಕ್ಕೆ ಅಡ್ಡಿಯಾಗಬಾರದು ಎಂದು ಅಭಿಪ್ರಾಯಪಟ್ಟಿದ್ದು, ಈ ಹಿಂದೆ ತಮ್ಮ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭಗಳಿಗೆ ಸೋನಿಯಾ ಅವರು ಆಗಮಿಸಿದ್ದನ್ನು ಕ್ಯಾಪ್ಟನ್​ ಸ್ಮರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ನಾವು ಇಲ್ಲಿಗೆ ಒಂದು ಸಾಮಾಜಿಕ ಕಾರ್ಯಕ್ರಮಕ್ಕಾಗಿ ಬಂದಿದ್ದೇವೆ. ಇದರಲ್ಲಿ ರಾಜಕೀಯ ವಿಷಯಗಳು ಹೇಗೆ ಬರುತ್ತವೆ? ಉದಾಹರಣೆಗೆ, ನಾನು ನನ್ನ ಪುಸ್ತಕಗಳನ್ನು ಬಿಡುಗಡೆ ಮಾಡಿದಾಗ ಸೋನಿಯಾ-ಜಿ ಅವರು ಮೂರು ಸಮಾರಂಭಗಳಿಗೆ ಬಂದಿದ್ದರು. ಬೇರೆ ಅನೇಕ ದೇಶಗಳಲ್ಲಿ, ರಾಜಕೀಯ ನಿಲುವುಗಳನ್ನು ಬದಿಗಿಟ್ಟು ಜನರು ಸಾಮಾಜಿಕವಾಗಿ ಬೆರೆಯುವುದನ್ನು ಮುಂದುವರಿಸುತ್ತಾರೆ ಎಂದು ಅಮರಿಂದರ್​ ಸಿಂಗ್​ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಮರಳುವ ಸಾಧ್ಯತೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ನಾಯಕ, ಒಮ್ಮೆ ನಿರ್ಧಾರ ತೆಗೆದುಕೊಂಡ ನಂತರ ಅದನ್ನು ಬದಲಾಯಿಸುವುದರಲ್ಲಿ ತಮಗೆ ನಂಬಿಕೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗಾಂಧಿ ಕುಟುಂಬದೊಂದಿಗಿನ ತಮ್ಮ ಸಂವಾದವು ಕೇವಲ ಸಾಮಾಜಿಕ ಮಟ್ಟಕ್ಕೆ ಸೀಮಿತವಾಗಿದೆ ಮತ್ತು ಪಕ್ಷಕ್ಕೆ ಮರಳುವಂತೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಮರಿಂದರ್ ಸಿಂಗ್ ಕುರಿತು ರಾಹುಲ್ ಗಾಂಧಿ ಮಾತು

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಗಾಂಧಿ ಕುಟುಂಬದೊಂದಿಗೆ ಅಮರಿಂದರ್ ಸಿಂಗ್ ಅವರಿಗಿರುವ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡರು.

ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರ ನಡುವೆ ನಡೆದ ಏಕೈಕ ಜಗಳದ ಪ್ರಸಂಗವನ್ನು ರಾಹುಲ್ ಗಾಂಧಿ ಈ ವೇದಿಕೆಯಲ್ಲಿ ಹಂಚಿಕೊಂಡರು. ನಾನು ಇಲ್ಲಿ ಅಮರಿಂದರ್ ಸಿಂಗ್ ಜಿ ಅವರನ್ನು ನೋಡುತ್ತಿದ್ದೇನೆ. ನಾನು ಇದನ್ನು ಹೇಳಿದರೆ ನೀವು ನಂಬುವುದಿಲ್ಲ. ನಾವು ನಮ್ಮ ತಂದೆ-ತಾಯಿ ವಾದ ಮಾಡುವುದನ್ನು ನೋಡಿದ್ದೇವೆ, ಆದರೆ ಅವರು ಜಗಳವಾಡಿದ್ದನ್ನು ನೋಡಿದ್ದು ಒಂದೇ ಬಾರಿ. ಕಾಕತಾಳೀಯವೆಂದರೆ, ಆ ಘಟನೆ ನಡೆದಾಗ ನಮ್ಮ ತಂದೆ ಫೋನ್‌ನಲ್ಲಿ ಅಮರಿಂದರ್ ಸಿಂಗ್ ಜಿ ಅವರೊಂದಿಗೆ ಮಾತನಾಡುತ್ತಿದ್ದರು.

ತಂದೆ ಅಮರಿಂದರ್ ಸಿಂಗ್ ಅವರೊಂದಿಗೆ ಮಾತನಾಡುತ್ತಿದ್ದಾಗ, ತಾಯಿ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದರು. ಅವರು ಮೂರು-ನಾಲ್ಕು ಬಾರಿ ಅದನ್ನೇ ಪುನರಾವರ್ತಿಸಿದಾಗ ತಂದೆಗೆ ಕೋಪ ಬಂತು. ನಾವು ಅವರನ್ನು ಜಗಳವಾಡುತ್ತಾ ನೋಡಿದ್ದು ಅದೇ ಮೊದಲ ಮತ್ತು ಕೊನೆಯ ಬಾರಿ ಎಂದು ರಾಹುಲ್ ಗಾಂಧಿ ಹಳೆಯ ನೆನಪನ್ನು ಮೆಲುಕು ಹಾಕಿದರು(ಏಜೆನ್ಸೀಸ್​).