ದೇಶ

ದೆಹಲಿಯ ಕೆಫೆಯೊಂದರಲ್ಲಿ ಯುವತಿ ಮೇಲೆ ಗ್ಯಾಂಗ್​ರೇಪ್ ಆರೋಪ: ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ | gang-rape

ಪೂರ್ವ ದೆಹಲಿಯ ಪ್ರೀತ್ ವಿಹಾರ್‌ನಲ್ಲಿರುವ ಕೆಫೆಯೊಂದರಲ್ಲಿ, ಸೋಮವಾರ(ನ. 23) ರಾತ್ರಿ 22 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಸಹೋದ್ಯೋಗಿಗಳೇ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ನವದೆಹಲಿ: ಪೂರ್ವ ದೆಹಲಿಯ ಪ್ರೀತ್ ವಿಹಾರ್‌ನಲ್ಲಿರುವ ಕೆಫೆಯೊಂದರಲ್ಲಿ, ಸೋಮವಾರ(ನ. 23) ರಾತ್ರಿ 22 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಸಹೋದ್ಯೋಗಿಗಳೇ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸಂತ್ರಸ್ತ ಯುವತಿ ನೀಡಿದ ದೂರಿನ ಪ್ರಕಾರ, ಯುವತಿ ಮತ್ತು ಆರೋಪಿಗಳು ಒಂದೇ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಮವಾರ ರಾತ್ರಿ ಸಹೋದ್ಯೋಗಿಗಳೊಂದಿಗೆ ಪ್ರೀತ್ ವಿಹಾರ್‌ನಲ್ಲಿರುವ 'ಸಲ್ತಾನತೆ ಕೆಫೆ'ಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ತಾನು ಭಾಗವಹಿಸಿದ್ದಾಗಿ ತಿಳಿಸಿದ್ದಾಳೆ.

ರಾತ್ರಿ 11:30ಕ್ಕೆ ಕೆಫೆ ಮುಚ್ಚಿದ ನಂತರವೂ, ಗುಂಪಿನಲ್ಲಿದ್ದ ಒಬ್ಬರ ಬಳಿ ಕೆಫೆಯ ಕೀಲಿ ಇದ್ದಿದ್ದರಿಂದ, ಅವರು ಅಲ್ಲಿಯೇ ಮದ್ಯಪಾನ ಮತ್ತು ನೃತ್ಯವನ್ನು ಮಾಡುತ್ತಾ ಮಂಗಳವಾರ ನಸುಕಿನ ಜಾವ 3:30ರವರೆಗೆ ಪಾರ್ಟಿ ಮುಂದುವರಿಸಿದ್ದಾರೆ. ಈ ವೇಳೆ ಇಬ್ಬರು ಪುರುಷರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರೆಂದೂ, ಗುಂಪಿನಲ್ಲಿದ್ದ ಇತರರು ಅವರಿಗೆ ಸಹಕರಿಸಿದರೆಂದೂ ಯುವತಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಎನ್​ಎಸ್ ಕಾಯ್ದೆಯ ಸಂಬಂಧಿತ ಸೆಕ್ಷನ್​ಗಳಡಿಯಲ್ಲಿ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈವರೆಗೆ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಉಳಿದ ಮೂವರು ಶಂಕಿತರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯ ಮುಂದುವರಿದಿದೆ (ಏಜೆನ್ಸೀಸ್).