ಮುಂಬೈ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) 1,816.22 ಕೋಟಿ ರೂ.ಗಳಷ್ಟು ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಮತ್ತು ಅದರ ಮಾಜಿ ಅಧ್ಯಕ್ಷ ಅನಿಲ್ ಅಂಬಾನಿ ಸೇರಿದಂತೆ ಇತರ ಹಲವರ ವಿರುದ್ಧ ಕೇಂದ್ರ ತನಿಖಾ ದಳ ಮತ್ತೊಂದು ಎಫ್ಐಆರ್ ದಾಖಲಿಸಿದೆ ಎಂದು ವರದಿಯಾಗಿದೆ.
ಶುಕ್ರವಾರ(ಜು. 31) ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಇಪಿಎಫ್ಓ ಸಲ್ಲಿಸಿದ ದೂರಿನ ಮೇರೆಗೆ ಸಿಬಿಐ ಎಫ್ಐಆರ್ ದಾಖಲಿಸಿದೆ. ದೂರಿನ ಪ್ರಕಾರ, ಆರೋಪಿಗಳು ಕ್ರಿಮಿನಲ್ ಪಿತೂರಿ, ವಂಚನೆ, ನಂಬಿಕೆ ಉಲ್ಲಂಘನೆ ಹಾಗೂ ದುಷ್ಕೃತ್ಯ ಸೇರಿದಂತೆ ಅಪರಾಧಗಳ ಮೂಲಕ ಇಪಿಎಫ್‌ಒಗೆ 1,007.55 ಕೋಟಿ ರೂ.ಗಳ ನಷ್ಟವನ್ನುಂಟು ಮಾಡಿದ್ದು, ಮತ್ತು 808.67 ಕೋಟಿ ರೂ.ಗಳ ಬಡ್ಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇಪಿಎಫ್‌ಒ ಹಣ ವರ್ಗಾವಣೆ ಆರೋಪ
ದೂರಿನಲ್ಲಿ ಆರೋಪಿಸಿರುವಂತೆ, 2013 ಮತ್ತು 2014ರ ಅವಧಿಯಲ್ಲಿ ಆರ್‌ಸಿಎಲ್ (RCL) ಕ್ಯೂರ್ಡ್ ನಾನ್-ಕನ್ವರ್ಟಿಬಲ್ ಡಿಬೆಂಚರ್‌ಗಳನ್ನು ಹೊರಡಿಸಿತು. ಇದರಲ್ಲಿ ಇಪಿಎಫ್‌ಒ, ರಿಲಯನ್ಸ್ ಕ್ಯಾಪಿಟಲ್ ಅಸೆಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಸೇರಿದಂತೆ ನಾಲ್ಕು ಪೋರ್ಟ್‌ಫೋಲಿಯೋ ಮ್ಯಾನೇಜರ್‌ಗಳ ಮೂಲಕ 2,500 ಕೋಟಿ ರೂ. ಹೂಡಿಕೆ ಮಾಡಿತು. ಈ ಡಿಬೆಂಚರ್‌ಗಳು 2023 ಮತ್ತು 2024ರಲ್ಲಿ ಮ್ಯಾಚುರಿಟಿಗೆ ನಿಗದಿಯಾಗಿದ್ದವು.
ಆದರೆ, ಆರೋಪಿಗಳು ಹೂಡಿಕೆ ಮಾಡಿದ ಹಣವನ್ನು ವಂಚನೆಯ ವ್ಯವಹಾರಗಳ ಮೂಲಕ ಬೇರೆಡೆಗೆ ತಿರುಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ರಿಲಯನ್ಸ್ ಕ್ಯಾಪಿಟಲ್ ನಿಗದಿತ ಅವಧಿಗೆ NCDಗಳನ್ನು ಮರುಪಾವತಿಸಲು ವಿಫಲಗೊಂಡಿದ್ದು, ಇಪಿಎಫ್‌ಒಗೆ 1,816.22 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇನ್ನೂ ಈ ಎಫ್ಐಆರ್ ರಿಲಯನ್ಸ್ ಗ್ರೂಪ್‌ನ ಕಂಪನಿಗಳನ್ನು ಒಳಗೊಂಡ ಸಿಬಿಐ ತನಿಖೆಗಳ ಸರಣಿಗೆ ಹೊಸ ಸೇರ್ಪಡೆಯಾಗಿದೆ. ಈ ಹಿಂದೆ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಎಲ್‌ಐಸಿ ದೂರು ಆಧಾರಿಸಿ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್, ರಿಲಯನ್ಸ್ ಹೋಂ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಟೆಲಿಕಾಂ ಲಿಮಿಟೆಡ್ ವಿರುದ್ಧ ಸಿಬಿಐ ಒಟ್ಟು 7 ಎಫ್ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದೆ (ಏಜೆನ್ಸೀಸ್).