ದೇಶ

E20 ಪೆಟ್ರೋಲ್‌ನಲ್ಲಿ ಹೆಚ್ಚುವರಿ ಎಥೆನಾಲ್ ಮಿಶ್ರಣ?; ಕರ್ನಾಟಕ ಸರ್ಕಾರದ ಆರೋಪ ತಿರಸ್ಕರಿಸಿದ ಕೇಂದ್ರ | E20 petrol

ಕರ್ನಾಟಕದ ಪೆಟ್ರೋಲ್ ಬಂಕ್​ಗಳಿಗೆ ಸರಬರಾಜು ಮಾಡಲಾದ E20 ಪೆಟ್ರೋಲ್‌ನಲ್ಲಿ ಹೆಚ್ಚುವರಿ ಎಥೆನಾಲ್ ಮಿಶ್ರಣವಿದೆ ಎಂಬ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆರೋಪಗಳನ್ನು ಶನಿವಾರ(ನ. 07) ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಮತ್ತು ರಾಜ್ಯಾದ್ಯಂತ ಪರೀಕ್ಷಿಸಲಾದ ಮಾದರಿಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಿವೆ ಎಂದು ಹೇಳಿದೆ.

ನವದೆಹಲಿ: ಕರ್ನಾಟಕದ ಪೆಟ್ರೋಲ್ ಬಂಕ್​ಗಳಿಗೆ ಸರಬರಾಜು ಮಾಡಲಾದ E20 ಪೆಟ್ರೋಲ್‌ನಲ್ಲಿ ಹೆಚ್ಚುವರಿ ಎಥೆನಾಲ್ ಮಿಶ್ರಣವಿದೆ ಎಂಬ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆರೋಪಗಳನ್ನು ಶನಿವಾರ(ನ. 07) ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಮತ್ತು ರಾಜ್ಯಾದ್ಯಂತ ಪರೀಕ್ಷಿಸಲಾದ ಮಾದರಿಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಿವೆ ಎಂದು ಹೇಳಿದೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಆಹಾರ ಸಚಿವ ರಿಜ್ವಾನ್ ಅರ್ಷದ್, ಸುಮಾರು ಏಳು ಜಿಲ್ಲೆಗಳ ಪೆಟ್ರೋಲ್ ಬಂಕ್​ಗಳಿಂದ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣನ್ನು, ಕೆಲವು ಮಾದರಿಗಳು ಶೇ. 30ಕ್ಕಿಂತ ಹೆಚ್ಚಿನ ಮಿಶ್ರಣವನ್ನು ಒಳಗೊಂಡಿವೆ ಎಂದು ಆರೋಪಿಸಿದ್ದರು.

ರಿಜ್ವಾನ್ ಅರ್ಷದ್ ಅವರ ಬಿಡುಗಡೆ ಮಾಡಿದ ಪ್ರಯೋಗಾಲಯದ ವರದಿ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ನಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಎಥೆನಾಲ್ ಪ್ರಮಾಣವು ಕ್ರಮವಾಗಿ ಶೇಕಡಾ 31.2 ಮತ್ತು ಶೇಕಡಾ 30.5 ರಷ್ಟಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಆರೋಪಗಳನ್ನು ತಿರಸ್ಕರಿಸಿದ ಕೇಂದ್ರ

ಆದರೆ ಎಲ್ಲಾ ಆರೋಪಗಳನ್ನು ತಿರಸ್ಕರಿಸಿ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಕರ್ನಾಟಕದಲ್ಲಿ ಸಂಗ್ರಹಿಸಲಾದ ಎಲ್ಲಾ 56 ಮಾದರಿಗಳು 19% ರಿಂದ 20% ರವರೆಗಿನ ನಿರ್ದಿಷ್ಟ ವ್ಯಾಪ್ತಿಯ ಎಥೆನಾಲ್ ಅನ್ನು ಒಳಗೊಂಡಿವೆ ಎಂದು ಹೇಳಿದೆ.

ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು IOCL, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು HPCL, ನಿಗದಿತ ಶಾಸನಬದ್ಧ ಮತ್ತು ತಾಂತ್ರಿಕ ಕಾರ್ಯವಿಧಾನಗಳ ಅಡಿಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಯಾವುದೇ ಉಲ್ಲಂಘನೆ ಕಂಡು ಬಂದಿಲ್ಲಎಂದು ಹೇಳಿದೆ.

OMCs ಮತ್ತು ಸೆಂಟರ್ ಫಾರ್ ಹೈ ಟೆಕ್ನಾಲಜಿ (CHT) ನಡೆಸಿದ ರಾಷ್ಟ್ರವ್ಯಾಪಿ ಗುಣಮಟ್ಟದ ಮೇಲ್ವಿಚಾರಣಾ ವ್ಯಾಯಾಮವನ್ನು ಉಲ್ಲೇಖಿಸಿರುವ ಸಚಿವಾಲಯವು, ಈ ಪರೀಕ್ಷೆಯ ಅಡಿಯಲ್ಲಿ, 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಡಿಪೋಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಿಂದ ಸಂಗ್ರಹಿಸಲಾದ 893 E20 ಮಾದರಿಗಳನ್ನು ಪರೀಕ್ಷಿಸಲಾಯಿತು. ಎಲ್ಲಾ ಮಾದರಿಗಳು 19% ರಿಂದ 21% ರಷ್ಟು ನಿಗದಿತ ಎಥೆನಾಲ್ ಅಂಶವನ್ನು ಹೊಂದಿವೆ ಎಂದು ತಿಳಿಸಿದೆ.

ಮಾದರಿ ಸಂಗ್ರಹ ಪ್ರಶ್ನಿಸಿದ ತೈಲ ಕಂಪನಿಗಳು

ಇನ್ನೂ 2026 ಅಕ್ಟೋಬರ್​​ನಲ್ಲಿ ಕರ್ನಾಟಕ ಸರ್ಕಾರ ಅನುಸರಿಸಿದ ಮಾದರಿ ಸಂಗ್ರಹಣೆ ಮತ್ತು ಪರೀಕ್ಷಾ ಪ್ರಕ್ರಿಯೆಯ ಬಗ್ಗೆ ತೈಲ ಕಂಪನಿಗಳು ಕಳವಳ ವ್ಯಕ್ತಪಡಿಸಿವೆ. ಮಾದರಿ ಸಂಗ್ರಹಣಾ ಪ್ರಕ್ರಿಯೆಯ ಸಮಯದಲ್ಲಿ ಒಎಂಸಿ ಪ್ರತಿನಿಧಿಗಳು ಹಾಜರಿಲ್ಲದಿರುವುದನ್ನು ಪ್ರಶ್ನಿಸಿವೆ.

ಅಲ್ಲದೆ, ಪರೀಕ್ಷೆಗಳನ್ನು ನಡೆಸುವಾಗ 'ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್' (BIS) ನ IS 17021 ಮಾನದಂಡದ ಅಡಿಯಲ್ಲಿ ನಿಗದಿಪಡಿಸಿದ ವಿಧಾನವನ್ನು ಅನುಸರಿಸಲಾಗಿದೆಯೇ ಎಂಬ ತಾಂತ್ರಿಕ ವಿವರಗಳು ಸೇರಿದಂತೆ, ಮೂರನೇ ವ್ಯಕ್ತಿಯ ಪ್ರಯೋಗಾಲಯದ ಪ್ರಮಾಣಪತ್ರಗಳ ಕುರಿತಾದ ಮಾಹಿತಿಯನ್ನು ಕೋರಿವೆ (ಏಜೆನ್ಸೀಸ್).