ನವದಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಇನ್ಸ್ಟಾಗ್ರಾಂನಲ್ಲಿ ಜಾಹೀರಾತುಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ಅದರ ಮಾತೃ ಸಂಸ್ಥೆ ಮೆಟಾಗೆ(Meta) ಕೇಂದ್ರ ಸರ್ಕಾರ ಸಮನ್ಸ್ ನೀಡಲು ಮುಂದಾಗಿದೆ ಎಂದು ಶುಕ್ರವಾರ(ಜು. 03) ವರದಿಯಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ವಿಷಯದ ಕುರಿತು ಮೆಟಾದಿಂದ ವಿವರಣೆಯನ್ನು ಕೇಳಲಿದ್ದು, ಈ ಬಗ್ಗೆ ಮೆಟಾಗೆ ಸಮನ್ಸ್ ಜಾರಿ ಮಾಡುವಂತೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ವಾರದಲ್ಲಿ ಕೇಂದ್ರ ಸರ್ಕಾರ ಮೆಟಾಗೆ ನೀಡಿದ ಎರಡನೇ ಸಮನ್ಸ್ ಇದಾಗಿದೆ. ಬುಧವಾರ ವಾಟ್ಸಾಪ್‌ನ ಹೊಸ ಫೀಚರ್ ಯೂಸರ್ನೇಮ್ ಬಳಸಿ ಚಾಟ್ಗೆ ಸಂಬಂಧಿಸಿದಂತೆ ಬಳಕೆದಾರ ಹೆಸರು ವೈಶಿಷ್ಟ್ಯದ ಕುರಿತು ನೋಟಿಸ್ ನೀಡಿತ್ತು.
ಇದು ಆನ್‌ಲೈನ್ ವಂಚನೆ, ಫಿಶಿಂಗ್, ಡಿಜಿಟಲ್ ಅರೆಸ್ಟ್ ಮುಂತಾದ ಕ್ರೈಮ್ಗಳನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿತ್ತು. ಮತ್ತು ಈ ವಿಷಯದ ಕುರಿತು ಸಮಾಲೋಚನೆಗಳು ಪೂರ್ಣಗೊಳ್ಳುವವರೆಗೆ ಅದನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ವಾಟ್ಸಾಪ್ಗೆ ನಿರ್ದೇಶನ ನೀಡಿತ್ತು (ಏಜೆನ್ಸೀಸ್).