ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಹಣದ ದುರುಪಯೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೌನ ಮುರಿದು ಸ್ಪಷ್ಟನೆ ನೀಡಬೇಕು ಎಂದು ಶನಿವಾರ(ಜೂ. 27) ಗೃಹಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಆಗ್ರಹಿಸಿದ್ದಾರೆ.
ಬೆಂಗಳೂರಿನ ತಮ್ಮ ಗೃಹಕಚೇರಿಯಲ್ಲಿ ಮಾತನಾಡಿರುವ ಅವರು, ಮಂದಿರ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ಸಂಗ್ರಹಿಸಲಾದ ದೇಣಿಗೆ ಮತ್ತು ದೇವಸ್ಥಾನದಲ್ಲಿ ಸಂಗ್ರಹವಾದ ದೇಣಿಗೆ ಹಣದ ಬಳಕೆಯ ಕುರಿತು ಸಂಪೂರ್ಣ ಪಾರದರ್ಶಕತೆ ಇರಬೇಕಿದ್ದು, ಸಂಬಂಧಿತ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ದೇಶದ ಜನರ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಷಯದಲ್ಲಿ ಜವಾಬ್ದಾರಿಯುತ ಪ್ರತಿಕ್ರಿಯೆ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದ್ದು, ಜನರ ವಿಶ್ವಾಸ ಉಳಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಬಿಡದಿ ಟೌನ್‌ಶಿಪ್ ಬಹಿರಂಗ ಚರ್ಚೆ ವಿಚಾರ
ಇದೇ ವೇಳೆ ಬಿಡದಿ ಟೌನ್‌ಶಿಪ್ ಬಹಿರಂಗ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ನೀತಿ ಸಂಬಂಧಿತ ವಿಚಾರಗಳನ್ನ ಬೀದಿಯಲ್ಲಿ ಚರ್ಚೆ ಮಾಡುವ ಸಂಸ್ಕೃತಿ ಸರಿಯಲ್ಲ. ಸರ್ಕಾರ ಚರ್ಚೆಗೆ ಆಹ್ವಾನಿಸಿದಾಗ ದಿನಾಂಕ ಸರಿಹೊಂದುವುದಿಲ್ಲ ಎನ್ನುವವರು, ಬಳಿಕ ಬೀದಿಯಲ್ಲಿ ಚರ್ಚೆ ನಡೆಸೋಣ ಎನ್ನುವುದು ಎಷ್ಟು ಸರಿ ಎಂದು ಟೀಕಿಸಿದ್ದಾರೆ.
ಯಾರದ್ದೇ ಸಮಸ್ಯೆಯಾದರೂ ಅದನ್ನು ಅಧಿಕೃತ ವೇದಿಕೆಯಲ್ಲಿ ಚರ್ಚಿಸುವುದು ಸೂಕ್ತ. ಬೀದಿಯಲ್ಲಿ ಚರ್ಚೆ ನಡೆಸುವ ಪ್ರವೃತ್ತಿ ಪ್ರಜಾಪ್ರಭುತ್ವದ ಸಂಪ್ರದಾಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.