ದೆಹಲಿ ಪೊಲೀಸ್ ಅಧಿಕಾರಿ ವಿವೇಕ್ ಭಗತ್ ಹೆಚ್ಚುವರಿ ಡಿಸಿಪಿ ಬಡ್ತಿ ವಿವಾದ 
ದೇಶ

ಪತ್ರಕರ್ತೆ ಮೇಲೆ ಲೈಂಗಿಕ ಕಿರುಕುಳ ಆರೋಪ; ತನಿಖೆ ನಡೆಯುತ್ತಿರುವಾಗಲೇ ACP ವಿವೇಕ್ ಭಗತ್‌ಗೆ ಬಡ್ತಿ! ACP Vivek Bhagat

ಮಹಿಳಾ ಪತ್ರಕರ್ತೆಯ ಮೇಲೆ ಲೈಂಗಿಕ ಕಿರುಕುಳ ಆರೋಪ; ಕ್ರೈಮ್ ಬ್ರಾಂಚ್ ತನಿಖೆಯ ನಡುವೆಯೇ ದೆಹಲಿ ಎಸಿಪಿ ವಿವೇಕ್ ಭಗತ್‌ಗೆ ಹೆಚ್ಚುವರಿ ಡಿಸಿಪಿಯಾಗಿ ಬಡ್ತಿ! ವಿವಾದದ ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಎಸಿಪಿ ವಿವೇಕ್ ಭಗತ್ ಅವರಿಗೆ ಹೆಚ್ಚುವರಿ ಡಿಸಿಪಿ (Additional DCP) ಹುದ್ದೆಗೆ ಬಡ್ತಿ ನೀಡಲಾಗಿದ್ದು, ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಜಂತರ್ ಮಂತರ್‌ನಲ್ಲಿ ನಡೆದಿದ್ದೇನು?

ಅಕ್ಟೋಬರ್ 3 ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿಯ ಜಂತರ್ ಮಂತರ್ ಬಳಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾಳನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದರು.

ಈ ಘಟನೆಯನ್ನು ಸ್ಥಳದಲ್ಲಿದ್ದ ಮಹಿಳಾ ಪತ್ರಕರ್ತೆಯೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದರು. ಆ ಸಂದರ್ಭದಲ್ಲಿ, ಮಹಿಳಾ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವಾಗ ಸ್ಥಳದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಏಕೆ ಇಲ್ಲ? ಎಂದು ಪತ್ರಕರ್ತೆ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಿಂದ ಆಕ್ರೋಶಗೊಂಡ ಎಸಿಪಿ ವಿವೇಕ್ ಭಗತ್, ತಮ್ಮ ಮೇಲೆ ಲೈಂಗಿಕ ಕಿರಿಕುಳ (Molestation) ನೀಡಿ, ಹಿಂದಕ್ಕೆ ತಳ್ಳಿದ್ದಾರೆ ಎಂದು ಸಂತ್ರಸ್ತ ಪತ್ರಕರ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಮೂವರು ಪತ್ರಕರ್ತೆಯರಿಂದ ದೂರು

ಕೇವಲ ಒಬ್ಬರಲ್ಲ, ಈ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಇತರ ಇಬ್ಬರು ಮಹಿಳಾ ಪತ್ರಕರ್ತೆಯರೂ ಪೊಲೀಸ್ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ಸೂಕ್ಷ್ಮತೆ ಪರಿಗಣಿಸಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಈ ಪ್ರಕರಣವನ್ನು ದೆಹಲಿ ಪೊಲೀಸ್ ಕ್ರೈಮ್ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ.

ತನಿಖೆ ನಡೆಯುತ್ತಿರುವಾಗಲೇ ಪ್ರಮೋಷನ್!

ಗಂಭೀರ ಸ್ವರೂಪದ ಆರೋಪಗಳು ದಾಖಲಾಗಿ, ಕ್ರೈಮ್ ಬ್ರಾಂಚ್ ಅಧಿಕಾರಿಗಳು ಸಾಕ್ಷ್ಯ ಸಂಗ್ರಹ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿರುವ ಹಂತದಲ್ಲೇ ವಿವೇಕ್ ಭಗತ್ ಅವರಿಗೆ ಅಡಿಷನಲ್ ಡಿಸಿಪಿಯಾಗಿ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.

ಈ ಅಧಿಕೃತ ಅಧಿಸೂಚನೆ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಿಜೆಪಿ (CJP) ಸ್ಥಾಪಕ ಅಭಿಜೀತ್ ದಿಪ್ಕೆ ಪ್ರಮೋಷನ್ ಆದೇಶದ ಪ್ರತಿಯನ್ನು ಹಂಚಿಕೊಂಡು, ಲೈಂಗಿಕ ಕಿರುಕುಳದ ಆರೋಪ ಹೊತ್ತ ಅಧಿಕಾರಿಗೆ ತನಿಖೆ ಮುಗಿಯುವ ಮುನ್ನವೇ ಬಹುಮಾನ ನೀಡಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರು ಕೂಡ ಪೊಲೀಸರ ಈ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ದೆಹಲಿ ಪೊಲೀಸರ ಸ್ಪಷ್ಟನೆ ಏನು?

ಪ್ರತಿಭಟನಾಕಾರರು ಮತ್ತು ಪತ್ರಕರ್ತೆಯರ ಮೇಲಿನ ದೌರ್ಜನ್ಯದ ಆರೋಪಗಳನ್ನು ದೆಹಲಿ ಪೊಲೀಸರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳು ಸಂಪೂರ್ಣ ಆಧಾರರಹಿತ ಮತ್ತು ದಾರಿ ತಪ್ಪಿಸುವಂತಿವೆ.

ಮಹಿಳಾ ಪ್ರತಿಭಟನಾಕಾರರನ್ನು ಮಹಿಳಾ ಸಿಬ್ಬಂದಿಗಳೇ ನಿಯಮಾನುಸಾರ ನಿರ್ವಹಿಸಿದ್ದಾರೆ. ವಶಕ್ಕೆ ಪಡೆಯುವ ಮತ್ತು ಬಿಡುಗಡೆ ಮಾಡುವ ಎಲ್ಲಾ ಪ್ರಕ್ರಿಯೆಗಳು ಕಾನೂನಿನ ಚೌಕಟ್ಟಿನಲ್ಲೇ ನಡೆದಿವೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ, (ಏಜೆನ್ಸೀಸ್​).