ವಿದ್ಯಾರ್ಥಿ ಆತ್ಮಹತ್ಯೆ ಹಿನ್ನೆಲೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ನವದೆಹಲಿ: ದೆಹಲಿಯಲ್ಲಿ ಹಾರಿ ಸೇಂಟ್ ಕೊಲಂಬಾ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಶಿಕ್ಷಕರು ತನಗೆ ಕಿರುಕುಳ ನೀಡಿದ್ದಾರೆ ಎಂದು ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ನಗರದ ಮೆಟ್ರೋ ನಿಲ್ದಾಣವೊಂದರ ಮೇಲಿಂದ ಬಿದ್ದು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ. ಈ ಸಂಬಂಧ ಶಾಲೆಯ ಹೆಡ್ ಮಾಸ್ಟರ್ ಸೇರಿ ಮೂವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು (ನ. 21) ವರದಿಯಾಗಿದೆ.
ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ವಿದ್ಯಾರ್ಥಿ ಶೌರ್ಯ ಪಾಟೀಲ್ ರಾಜೇಂದ್ರ ನಗರ ಮೆಟ್ರೋ ನಿಲ್ದಾಣದಿಂದ ಮುಖ್ಯ ರಸ್ತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೃತ ಶೌರ್ಯ ಬರೆದ ಪತ್ರವೊಂದು ಮನೆಯಲ್ಲಿ ಸಿಕ್ಕಿದ್ದು, ಅದರಲ್ಲಿ ಕೆಲವು ಶಿಕ್ಷಕರು ತನಗೆ ಬಹಳ ದಿನಗಳಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ಬಾಲಕನ ತಂದೆ ಪ್ರದೀಪ್ ಪಾಟೀಲ್ ದೂರಿನ ಮೇರೆಗೆ ಬುಧವಾರ ಎಫ್ಐಆರ್ ದಾಖಲಾಗಿದೆ.
ಈ ಕುರಿತು ಮಾತನಾಡಿರುವ ತಂದೆ ಪ್ರದೀಪ್ ಪಾಟೀಲ್, ಅವನು ಕಳೆದ 8 ವರ್ಷಗಳಿಂದ ಅದೇ ಶಾಲೆಯಲ್ಲಿ ಓದುತ್ತಿದ್ದನು. ಅವನ ಶಿಕ್ಷಕರು ಸಣ್ಣ ವಿಷಯಗಳಿಗೂ ಅವನನ್ನು ಬೈಯುತ್ತಿದ್ದರು ಎಂದು ನಮ್ಮ ಬಳಿ ದೂರುತ್ತಿದ್ದ. ನಾವು ಅವನಿಗೆ ಹತ್ತನೇ ತರಗತಿಯ ನಂತರ ಶಾಲೆಯನ್ನು ಬದಲಾಯಿಸುತ್ತೇವೆ ಎಂದು ಹೇಳಿದ್ದೆವು. ಮಂಗಳವಾರ ಶಿಕ್ಷಕರೊಬ್ಬರು ನಿನ್ನ ಹೆತ್ತವರನ್ನು ಕರೆದು ವರ್ಗಾವಣೆ ಪ್ರಮಾಣಪತ್ರ (ಟಿಸಿ) ನೀಡುವುದಾಗಿ ಬೆದರಿಸಿದ್ದಾರೆ. ಹೀಗಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಆತ್ಮಹತ್ಯೆ ಪತ್ರದಲ್ಲಿ, ಕ್ಷಮಿಸಿ ಮಮ್ಮಿ, ನಾನು ನಿಮ್ಮ ಹೃದಯವನ್ನು ಹಲವು ಬಾರಿ ಮುರಿದಿದ್ದೇನೆ ಮತ್ತು ನಾನು ಕೊನೆಯ ಬಾರಿಗೆ ಅದನ್ನು ಮಾಡುತ್ತಿದ್ದೇನೆ. ಶಾಲೆಯಲ್ಲಿರುವ ಶಿಕ್ಷಕರು ಹೀಗೇ ಇದ್ದಾರೆ, ನಾನು ಏನು ಹೇಳಲಿ? ಎಂದು ಪ್ರಾಂಶುಪಾಲರು ಸೇರಿದಂತೆ ನಾಲ್ವರು ಶಿಕ್ಷಕರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ ಎಂದು ತಿಳಿಸಿದ್ದಾರೆ.
ಇನ್ನೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹೆಡ್ ಮಾಸ್ಟರ್ ಅಪರಾಜಿತಾ ಪಾಲ್ ಮತ್ತು ಶಿಕ್ಷಕಿಯರಾದ ಜೂಲಿ ವರ್ಗೀಸ್, ಮನು ಕಲ್ರಾ ಮತ್ತು ಯುಕ್ತಿ ಅಗರ್ವಾಲ್ ಮಹಾಜನ್ ವಿರುದ್ಧ ತಂದೆ ಪ್ರದೀಪ್ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಇನ್ನೂ ಶಾಲಾ ಆಡಳಿತ ಮಂಡಳಿ ಹೆಡ್ ಮಾಸ್ಟರ್ ಸೇರಿ ಮೂವರು ಶಿಕ್ಷಕರನ್ನು ತಕ್ಷದಿಂದ ಜಾರಿ ಬರುವಂತೆ ಅಮಾನತುಗೊಳಿಸಿದೆ (ಏಜೆನ್ಸೀಸ್).