ಮಾಜಿ ಸಚಿವ ಸತ್ಯೇಂದ್ರ ಕುಮಾರ್ ಜೈನ್ 
ದೇಶ

ದೆಹಲಿ ಜಲ ಮಂಡಳಿಯ ಟೆಂಡರ್​​ನಲ್ಲಿ ಹಗರಣ ಆರೋಪ; ಆಪ್ ಮಾಜಿ ಸಚಿವ ಸತ್ಯೇಂದರ್ ಜೈನ್ ಸೇರಿ ಆರು ಮಂದಿ ಬಂಧನ | Satyendar Jain

ನವದೆಹಲಿ: ದೆಹಲಿ ಜಲ ಮಂಡಳಿಯ ಒಳಚರಂಡಿ ಸಂಸ್ಕರಣಾ ಘಟಕದ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ  ಆಪ್​ ನಾಯಕ ಮತ್ತು ಮಾಜಿ ಸಚಿವ ಸತ್ಯೇಂದ್ರ ಕುಮಾರ್ ಜೈನ್(Satyendar Jain) ಸೇರಿ ಆರು ಮಂದಿಯನ್ನು ದೆಹಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳ ಮಂಗಳವಾರ(ಆ. 18) ಬಂಧಿಸಿದೆ ಎಂದು ವರದಿಯಾಗಿದೆ.
2024 ಮೇ 11ರಂದು ಜಲ ಮಂಡಳಿಯ ಅಡಿಯಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳ ವೃದ್ಧಿ ಮತ್ತು ಮೇಲ್ದರ್ಜೆಗೇರಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು, ಟೆಂಡರ್ ಷರತ್ತುಗಳ ಕುಶಲತೆ ಮತ್ತು ಕ್ರಿಮಿನಲ್ ಪಿತೂರಿಯ ಆರೋಪದ ಮೇಲೆ ವಿಜಿಲೆನ್ಸ್ ನಿರ್ದೇಶನಾಲಯ ದಾಖಲಿಸಿದ್ದ ಎಫ್​ಐಆರ್ ಮೇಲೆ ಈ ಬಂಧನ ನಡೆದಿದೆ. 
ಪ್ರಕರಣದಲ್ಲಿ ದೆಹಲಿ ಜಲ ಮಂಡಳಿಯ ಮಾಜಿ ಸಿಇಒ ಮತ್ತು ಐಎಎಸ್ ಅಧಿಕಾರಿ ಉದಿತ್ ಪ್ರಕಾಶ್ ರೈ, ಮಾಜಿ ಗುತ್ತಿಗೆ ಸಲಹೆಗಾರ ಅಂಕಿತ್ ಶ್ರೀವಾಸ್ತವ, ಎಎನ್ ಎಂಟರ್‌ಪ್ರೈಸಸ್ ಮಾಲೀಕ ನಾಗೇಂದ್ರ ಯಾದವ್, ಯುರೋಟೆಕ್ ಎನ್ವಿರಾನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮಾಲೀಕ ರಾಜ ಕುಮಾರ್ ಕುರ್ರಾ ಮತ್ತು ಶ್ರೀಜನ್‌ಹಾರ್ ಮಾಲೀಕ ಪಂಕಜ್ ವರ್ಮಾ ಇತರೆ ಬಂಧಿತ ಆರೋಪಿಗಳಾಗಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದ ಪ್ರಕಾರ, ಟೆಂಡರ್ ನಿರ್ದಿಷ್ಟ ತಂತ್ರಜ್ಞಾನ ಪೂರೈಕೆದಾರ ಯುರೋಟೆಕ್ ಎನ್ವಿರಾನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ನಿರ್ಬಂಧಿತ ತಾಂತ್ರಿಕ ವಿಶೇಷಣಗಳು ಮತ್ತು ಷರತ್ತುಗಳನ್ನು ಒಳಗೊಂಡಿದೆ. ಇದರಿಂದ ಆಯ್ದ ಖಾಸಗಿ ಕಂಪನಿಗೆ ಅನಗತ್ಯ ಪ್ರಯೋಜನವನ್ನು ನೀಡಿರುವುದು ಎಂದು ತನಿಖೆಯಲ್ಲಿ ಕಂಡುಬಂದಿದೆ.

ಪ್ರಸ್ತಾವಿತ ಪ್ರಾಯೋಗಿಕ ಅಧ್ಯಯನವನ್ನು ನಡೆಸಲಾಗಿಲ್ಲ ಮತ್ತು ಟೆಂಡರ್‌ನಲ್ಲಿ ಬಳಸಬೇಕಾದ ತಂತ್ರಜ್ಞಾನ ಹಾಗೂ ಸಾಮಗ್ರಿಗಳ ಕುರಿತು ನಿರ್ಬಂಧಿತ ಷರತ್ತುಗಳನ್ನು ವಿಧಿಸಲಾಗಿತ್ತು ಎಂದು ಏಜೆನ್ಸಿ ಆರೋಪಿಸಿದೆ. ಸಂಸ್ಕರಿಸಿದ ತ್ಯಾಜ್ಯನೀರಿಗೆ ಸಂಬಂಧಿಸಿದ ಪ್ರಮುಖ ಮಾನದಂಡಗಳನ್ನು ಕೈಬಿಡಲಾಗಿದೆ. ಮತ್ತು ತಾಂತ್ರಿಕ ವಿವರಣಾತ್ಮಕ ಅಂಶಗಳನ್ನು ಬದಲಾಯಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ. 

ಆಮ್ ಆದ್ಮಿ ಪಕ್ಷ ಆಕ್ರೋಶ 

ಇನ್ನೂ ಟೆಂಡರ್ ಅಕ್ರಮಕ್ಕೆ ಸಂಬಂಧಿಸಿದಂತೆ ಸತ್ಯೇಂದರ್ ಜೈನ್ ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷ, ಈ ಕ್ರಮವನ್ನು ರಾಜಕೀಯ ಪ್ರೇರಿತ ಎಂದು ಕರೆದಿದೆ. 2024ರಲ್ಲಿ ಜಾಮೀನು ಪಡೆಯುವ ಮೊದಲು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಿಂಗಳುಗಟ್ಟಲೆ ಜೈಲಿನಲ್ಲಿ ಕಳೆದ ಜೈನ್ ಅವರನ್ನು ಮತ್ತೊಮ್ಮೆ ಬಿಜೆಪಿಯ ಆದೇಶದ ಮೇರೆಗೆ ಬಂಧಿಸಲಾಗಿದೆ ಎಂದು ಆರೋಪಿಸಿದೆ.


ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಬಿಜೆಪಿಯ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅವರು ಎಷ್ಟೇ ಸರ್ವಾಧಿಕಾರವನ್ನು ಆಶ್ರಯಿಸಿದರೂ, ಮೋದಿ ಸರ್ಕಾರದ ಅಂತ್ಯ ಈಗ ಖಚಿತ. ಇಡೀ ಆಮ್ ಆದ್ಮಿ ಪಕ್ಷ ಮತ್ತು ದೇಶದ ಜನರು ಸತೇಂದ್ರ ಜೈನ್ ಜಿ ಅವರೊಂದಿಗೆ ದೃಢವಾಗಿ ನಿಂತಿದೆ. 

ಬಿಜೆಪಿಗೆ ಎಎಪಿ ಬಗ್ಗೆ ಭಯವಿದೆ ಎಂಬುದಕ್ಕೆ ಇನ್ನೂ ಎಷ್ಟು ಪುರಾವೆಗಳು ಬೇಕು? ಆ ಜಲ ಮಂಡಳಿಯ ಟೆಂಡರ್ ಸಮಯದಲ್ಲಿ ಸತ್ಯೇಂದ್ರ ಜಿ ಜೈಲಿನಲ್ಲಿದ್ದರು. ಅವರು ಜೈಲಿನಿಂದ ಹೇಗೆ ಜವಾಬ್ದಾರಿಯುತರಾದರು? ನಿಜವಾದ ಕಾರಣವೆಂದರೆ ಸತ್ಯೇಂದ್ರ ಜೈನ್ ಪಂಜಾಬ್‌ನ ಎಎಪಿ ಸಹ-ಉಸ್ತುವಾರಿಯಾಗಿದ್ದು, ಅಲ್ಲಿ ಚುನಾವಣೆಗಳು ಬರಲಿವೆ. ಅದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ (ಏಜೆನ್ಸೀಸ್).