ವಿ ಮಾರ್ಕಂಡೇಯನ್ ಮತ್ತು ಸಿಎಂ ವಿಜಯ್ 
ದೇಶ

ಸದನದಲ್ಲೇ ಮೂಳೆ ಮುರಿಯುತ್ತೇವೆ ಎಂದು ಸಿಎಂ ವಿಜಯ್​​ಗೆ ಬಹಿರಂಗ ಬೆದರಿಕೆ ಹಾಕಿದ ಆರೋಪ: ಮತ್ತೊಬ್ಬ ಡಿಎಂಕೆ ಶಾಸಕ ಬಂಧನ | DMK MLA

ಚೆನ್ನೈ: ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಮೇಲೆ ಡಿಎಂಕೆ ಶಾಸಕ ಅನಿತಾ ರಾಧಕೃಷ್ಣನ್ ಬಂಧನ ಬಳಿಕ, ತಮಿಳುನಾಡು ಸಿಎಂ ವಿಜಯ್​ಗೆ ಬಹಿರಂಗ ಬೆದರಿಕೆ ಹಾಕಿದ ಆರೋಪದ ಮೇಲೆ ವಿಲಾತಿಕುಲಂ ಡಿಎಂಕೆ ಶಾಸಕ((DMK MLA) ವಿ ಮಾರ್ಕಂಡೇಯನ್ ಅವರನ್ನು ತೂತುಕೂಡಿ ಪೊಲೀಸರು ಬಂಧಿಸಿದ್ದಾರೆ ಎಂದು ಸೋಮವಾರ(ಜು. 20) ವರದಿಯಾಗಿದೆ.
ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಕೋವಿಲ್ಪಟ್ಟಿಯಲ್ಲಿ ಶನಿವಾರ ತಡರಾತ್ರಿ ನಡೆದ ಕೃತಜ್ಞತಾ ಸಭೆಯಲ್ಲಿ, ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರ ಮೂಳೆಗಳು ಮುರಿಯುತ್ತವೆ ಎಂದು ಸಿಎಂ ವಿಜಯ್ ಅವರಿಗೆ ಮಾರ್ಕಂಡೇಯನ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. 
ಡಿಎಂಕೆ ಶಾಸಕರ ಹೇಳಿಕೆ ಬಗ್ಗೆ ಟಿವಿಕೆ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ನೆಚ್ಚಿನ ನಾಯಕನನ್ನು ಅವಮಾನಿಸಲಾಗಿದೆ ಆರೋಪಿಸಿದ್ದಾರೆ. ಟಿವಿಕೆ ಈಶಾನ್ಯ ಜಿಲ್ಲಾ ಜಂಟಿ ಕಾರ್ಯದರ್ಶಿ ಪಿ ಕಾಸಿರಾಮನ್ ತೂತುಕೂಡಿ ಎಸ್​ಪಿ ಭೇಟಿಯಾಗಿ ದೂರು ನೀಡಿದ್ದಾರೆ. ಅವರು ನೀಡಿದ ದೂರಿನನ್ವಯ ಮಾರ್ಕಂಡೇಯನ್ ಅವರನ್ನು ಇನ್ಸ್‌ಪೆಕ್ಟರ್ ಪಿ ಜಾನಕಿ ನೇತೃತ್ವದ ಪೊಲೀಸ್ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ. 
ಇನ್ನೂ ತೂತುಕೂಡಿ ಜಿಲ್ಲಾ ಅಪರಾಧ ವಿಭಾಗವು ಮಾರ್ಕಂಡೇಯನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 351(3),352,353(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ. ಶಾಸಕರ ಬಂಧನದ ಸಮಯದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅದಾಗ್ಯೂ ಡಿಎಂಕೆ ಕಾರ್ಯಕರ್ತರು ಪೊಲೀಸರ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು (ಏಜೆನ್ಸೀಸ್).