- ತನ್ನಿಬ್ಬರು ಹೆಣ್ಣುಮಕ್ಕಳನ್ನು 5 ವರ್ಷ ಕೂಡಿ ಹಾಕಿದ್ದ ತಂದೆ
- ಕೋಣೆಯಲ್ಲಿ ಬಂಧಿಸಿದ್ದ ತಂದೆಯ ಕ್ರೂರ ನಡೆಗೆ ಅಲಹಾಬಾದ್ ಹೈಕೋರ್ಟ್ ಛೀಮಾರಿ
- ತಂದೆ-ತಾಯಿ ಇಬ್ಬರಿಗೂ ತಲಾ 25 ಲಕ್ಷ ರೂ. ದಂಡ
ಉತ್ತರ ಪ್ರದೇಶ: ತನ್ನಿಬ್ಬರು ಹೆಣ್ಣುಮಕ್ಕಳನ್ನು ಪೊಲೀಸರ ಸಹಾಯದಿಂದ ಬರೋಬ್ಬರಿ ಐದು ವರ್ಷಗಳ ಕೋಣೆಯಲ್ಲಿ ಬಂಧಿಸಿದ್ದ ತಂದೆಯ ಕ್ರೂರ ನಡೆಗೆ ಅಲಹಾಬಾದ್ ಹೈಕೋರ್ಟ್ ಛೀಮಾರಿ ಹಾಕಿದೆ.
ಇಬ್ಬರೂ ಹೆಣ್ಣುಮಕ್ಕಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶ ನೀಡಿದರೂ ಅದನ್ನು ಕಡೆಗಣಿಸಿದ ಜನ್ಮದಾತನನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು, ಸ್ವಯಂಪ್ರೇರಣೆಯಿಂದ ಯಾವುದೇ ಧರ್ಮಕ್ಕೆ ಮತಾಂತರಗೊಳ್ಳುವುದು ಮತ್ತು ಅವರ ಆಯ್ಕೆಯ ಆಧಾರದ ಮೇರೆಗೆ ಮದುವೆ ಆಗುವುದನ್ನು, ತಂದೆ ಸೇರಿದಂತೆ ಯಾವುದೇ ವ್ಯಕ್ತಿಗಳು ಆ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವಂತಿಲ್ಲ ಎಂದು ತಿಳಿಸಿದೆ.
ತಮ್ಮ ಹೆಣ್ಣುಮಕ್ಕಳು ಇಸ್ಲಾಂಗೆ ಮತಾಂತರಗೊಂಡರು ಎಂಬ ಕಾರಣದಿಂದ ತೀವ್ರ ಮನನೊಂದ ಪಾಲಕರು, ಮಕ್ಕಳು ಹೀಗೆ ಮಾಡಿದ್ದನ್ನು ಸಹಿಸಲಾರದೆ ಐದು ವರ್ಷಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿದ್ದಾಗಿ ತಿಳಿಸಿದ್ದಾರೆ. ಸಹೋದರಿಯರಾದ ಅಂಶು ಭಾಟಿಯಾ ಅಲಿಯಾಸ್ ಅಮಿನಾ ಅಂಶು ಭಾಟಿಯಾ (35) ಮತ್ತು ದಿವ್ಯಾ ಭಾಟಿಯಾ ಅಲಿಯಾಸ್ ಜೋಯಾ ದಿಯಾ ಭಾಟಿಯಾ (20) ತಾವು ವಯಸ್ಕರಾಗಿದ್ದು, ಸ್ವಯಂಪ್ರೇರಣೆಯಿಂದ ಇಸ್ಲಾಂಗೆ ಮತಾಂತರಗೊಂಡಿದ್ದೇವೆ ಎಂದು ನ್ಯಾಯಾಲಯಕ್ಕೆ ಹೇಳಿದರು.
ತಮ್ಮ ವೈಯಕ್ತಿಕ ಆಯ್ಕೆಗಳ ವಿರುದ್ಧ ತಮ್ಮ ತಂದೆ 2025ರ ಮೇ ತಿಂಗಳಲ್ಲಿ ಆಗ್ರಾದಲ್ಲಿ ಪ್ರಕರಣವನ್ನು ದಾಖಲಿಸಿ, ಸುಮಾರು ಐದು ವರ್ಷಗಳ ಕಾಲ ಪೊಲೀಸ್ ಅಧಿಕಾರಿಗಳ ಸಹಾಯದಿಂದ ನಮ್ಮನ್ನು ಬಲವಂತವಾಗಿ ಕೂಡಿ ಹಾಕಿದರು ಎಂದು ಆರೋಪಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಈ ಹಿಂದೆಯೇ ಹೆಣ್ಣು ಮಕ್ಕಳನ್ನು ಬಿಡುಗಡೆ ಮಾಡುವಂತೆ ತಂದೆಗೆ ಆದೇಶ ನೀಡಿತ್ತು. ಆದರೆ, ಕೋರ್ಟ್ ಸೂಚನೆಯನ್ನು ನಿರ್ಲಕ್ಷಿಸಿದ ಕಾರಣಕ್ಕೆ ಸಿಡಿದೆದ್ದ ನ್ಯಾಯಾಲಯದ ಪೀಠವು, ತಂದೆ-ತಾಯಿ ಇಬ್ಬರಿಂದಲೂ ತಲಾ 25 ಲಕ್ಷ ರೂ. ದಂಡ ಕಟ್ಟಿಸಿಕೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿ, ಸಹೋದರಿಯರಿಗೆ ಕಡೆಗೂ ಬಂಧನದಿಂದ ಮುಕ್ತಿ ನೀಡಿದೆ,(ಏಜೆನ್ಸೀಸ್).