SIR Discussion | ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯ ಸಂಗ್ರಹ ಚಿತ್ರ 
ದೇಶ

SIR Discussion | ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ಸಭೆ; ಎಸ್​ಐಆರ್ ಚರ್ಚೆಗೆ ಕೊನೆಗೂ ದಿನಾಂಕ ನಿಗದಿ

ದೆಹಲಿ: ಲೋಕಸಭೆಯಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಪ್ರಸ್ತುತ ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ಕಲಾಪ ಸ್ಥಗಿತಗೊಳಿಸಿದ್ದ ದೊಡ್ಡ ಬಿಕ್ಕಟ್ಟನ್ನು ಸ್ಪೀಕರ್ ಮಧ್ಯಪ್ರವೇಶವು ತಾತ್ಕಾಲಿಕವಾಗಿ ಕೊನೆಗೊಳಿಸಿದೆ.

ಪ್ರತಿಪಕ್ಷಗಳ ಪ್ರತಿಭಟನೆಯ ಬಳಿಕ

ಡಿಸೆಂಬರ್ 8 ರಂದು ಮಧ್ಯಾಹ್ನ 12 ಗಂಟೆಯಿಂದ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಕುರಿತು ಚರ್ಚೆಯನ್ನು ಸದನದಲ್ಲಿ ಆರಂಭಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಮಂಗಳವಾರ (ಡಿಸೆಂಬರ್ 9) ಮಧ್ಯಾಹ್ನ 12 ಗಂಟೆಯಿಂದ ಚುನಾವಣಾ ಸುಧಾರಣೆಗಳ ಕುರಿತು ವಿವರವಾದ ಚರ್ಚೆ ನಡೆಯಲಿದೆ. 150ನೇ ವಾರ್ಷಿಕೋತ್ಸವದ ಕುರಿತ ಚರ್ಚೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಬಿಕ್ಕಟ್ಟು ಸದ್ಯ ಬಗೆಹರಿದ ಬಳಿಕ ನಾಳೆಯಿಂದ ಲೋಕಸಭೆ ಸುಗಮವಾಗಿ ನಡೆಯುವ ನಿರೀಕ್ಷೆಯಿದೆ.
ಸರ್ವಪಕ್ಷ ಸಭೆಯ ಬಳಿಕ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಇಂದು ಲೋಕಸಭಾ ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಡಿಸೆಂಬರ್ 8 ರ ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ನ 150 ನೇ ವಾರ್ಷಿಕೋತ್ಸವದ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಲು ಮತ್ತು ಡಿಸೆಂಬರ್ 9 ರ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಬರೆದಿದ್ದಾರೆ
ಕಾಂಗ್ರೆಸ್ ಮುಖ್ಯ ಸಚೇತಕ ಕೆ. ಸುರೇಶ್ ಮಾತನಾಡಿ, ಎಸ್​ಐಆರ್​ ಕುರಿತ ವಿರೋಧ ಪಕ್ಷದ ವಿನಂತಿಯನ್ನು ಚುನಾವಣಾ ಸುಧಾರಣೆಗಳ ಕುರಿತಾದ ವಿಶಾಲ ಚರ್ಚೆಯಲ್ಲಿ ವಿಲೀನಗೊಳಿಸಲಾಗಿದೆ ಎಂದು ಹೇಳಿದರು. ಎರಡೂ ಚರ್ಚೆಗಳಿಗೆ ತಲಾ 10 ಗಂಟೆಗಳ ಕಾಲ ಅವಕಾಶ ನೀಡಲಾಗಿದ್ದು, ಅಗತ್ಯವಿದ್ದರೆ ಸಮಯವನ್ನು ವಿಸ್ತರಿಸುವ ಆಯ್ಕೆಯನ್ನು ಸಹ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸ್ವತಂತ್ರ SIR ಚರ್ಚೆಗೆ ಸರ್ಕಾರ ನಕಾರ..

ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಕಲಾಪದ ಮುಂದೂಡಿಕೆಗಳು ಬಳಿಕ ಸ್ಪೀಕರ್ ಈ ಪ್ರಯತ್ನಕ್ಕೆ ಕೈ ಹಾಕಿದರು. ಇಂದು ಬೆಳಿಗ್ಗೆ ಕೇಂದ್ರ ಸಚಿವ ರಿಜಿಜು, ಸದನದ ನಾಯಕರನ್ನು ಭೇಟಿಯಾದರು, ಚರ್ಚೆಗೆ ಸಮಯ ಮಿತಿಯನ್ನು ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದಿಲ್ಲ ಎಂದು ಈ ವೇಳೆ ತಿಳಿಸಿದರು. ಸ್ವತಂತ್ರ ಚರ್ಚೆಯನ್ನು ತಳ್ಳಿಹಾಕಿದ ಅವರು ಇದು ಸಂಪೂರ್ಣವಾಗಿ ಚುನಾವಣಾ ಆಯೋಗದ ಆಡಳಿತಾತ್ಮಕ ನಿರ್ಧಾರ ಎಂದರು(ಏಜೆನ್ಸೀಸ್​).