Modi in Tamilnadu | ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಬುಧವಾರ ತಿರುಚ್ಚಿಯಲ್ಲಿ (Modi in Tamilnadu) ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹರಿಸುತ್ತಿರುವ ಹಣವನ್ನು ಒಂದು ಕುಟುಂಬ ಲೂಟಿ ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು.
ತಮಿಳುನಾಡಿನ ಭವಿಷ್ಯಕ್ಕೆ ಬಿಲಿಯನ್ ಹೂಡಿಕೆ
ಕೇಂದ್ರ ಸರ್ಕಾರವು ತಮಿಳುನಾಡನ್ನು ಕೈಗಾರಿಕಾ ಮತ್ತು ಮೂಲಸೌಕರ್ಯದ ಹಬ್ ಮಾಡಲು ಪಣ ತೊಟ್ಟಿದೆ, ಕಳೆದ ಬಾರಿ ನಾನು ತಿರುಚ್ಚಿಗೆ ಬಂದಾಗ 20,000 ಕೋಟಿ ರೂ.ಗಳ ಯೋಜನೆಗಳನ್ನು ನೀಡಿದ್ದೆ. ಇತ್ತೀಚೆಗಷ್ಟೇ ಮಧುರೈನಲ್ಲಿ 4,400 ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು.
ಇಂದು ಮತ್ತೆ ತಿರುಚ್ಚಿಯಲ್ಲಿ 5,600 ಕೋಟಿ ರೂಪಾಯಿ ಮೌಲ್ಯದ ಹೊಸ ಯೋಜನೆಗಳನ್ನು ಅರ್ಪಿಸುತ್ತಿದ್ದೇನೆ, ಈ ಯೋಜನೆಗಳು ಶುದ್ಧ ಇಂಧನ, ರೈಲ್ವೆ, ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳನ್ನು ಒಳಗೊಂಡಿದ್ದು, ಯುವಕರಿಗೆ ಸಾವಿರಾರು ಉದ್ಯೋಗ ಸೃಷ್ಟಿಸಲಿವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ಹಣಕ್ಕಾಗಿ ಉದ್ಯೋಗದ ಆರೋಪ
ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಗುಡುಗಿದ ಪ್ರಧಾನಿ ಮೋದಿ, ತಮಿಳುನಾಡಿನ ಜನರಿಗೆ ಸೇರಬೇಕಾದ ಹಣವನ್ನು ಒಂದೇ ಕುಟುಂಬದ ಹಿತಾಸಕ್ತಿಗಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಈ ಸರ್ಕಾರದಲ್ಲಿ ಅರ್ಹರಿಗೆ ಕೆಲಸ ಸಿಗುತ್ತಿಲ್ಲ, ಬದಲಾಗಿ ಹಣಕ್ಕಾಗಿ ಉದ್ಯೋಗಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಬೇಸತ್ತಿರುವ ರಾಜ್ಯದ ಜನರು ಈಗ ಬದಲಾವಣೆ ಬಯಸಿದ್ದು, ಡಿಎಂಕೆಯನ್ನು ಅಧಿಕಾರದಿಂದ ಕಿತ್ತೊಗೆಯಲು ಮನಸ್ಸು ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಧುರೈ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ
ಮಧುರೈ ಈ ಭಾಗದ ಪ್ರಮುಖ ದ್ವಾರವಾಗಿದ್ದು, ನಮ್ಮ ಸರ್ಕಾರ ಮಧುರೈ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ ನೀಡಲು ನಿರ್ಧರಿಸಿದೆ. ಇದರಿಂದ ತಮಿಳುನಾಡಿನ ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ನೋಡಲು ವಿಶ್ವದಾದ್ಯಂತ ಪ್ರವಾಸಿಗರು ನೇರವಾಗಿ ಇಲ್ಲಿಗೆ ಬರಲಿದ್ದಾರೆ ಎಂದರು(ಏಜೆನ್ಸೀಸ್).