ಭಾರತದ ಮೊದಲ ಹೈಡ್ರೋಜನ್ ರೈಲು: ಏನಿದರ ವಿಶೇಷತೆ? ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ...India First Hydrogen Train  
ದೇಶ

ಭಾರತದ ಮೊದಲ ಹೈಡ್ರೋಜನ್ ರೈಲು: ಏನಿದರ ವಿಶೇಷತೆ? ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ...India First Hydrogen Train

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮೋದಿಯಿಂದ ದೇಶದ ಮೊದಲ ಪರಿಸರಸ್ನೇಹಿ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ
  • ಹಳಿಗಿಳಿದ ಭಾರತದ ಮೊದಲ ಹೈಡ್ರೋಜನ್ ರೈಲು ಜಗತ್ತಿನ ಬಲಿಷ್ಠ ದೇಶಗಳ ಸಾಲಿಗೆ ಸೇರಿದ ದೇಶ
  • ಜಿಂದ್ ಮತ್ತು ಸೋನಿಪತ್ ನಡುವೆ ದೇಶದ ಮೊದಲ ಹೈಡ್ರೋಜನ್ ರೈಲು ಸಂಚಾರ ಆರಂಭ
  • ಶೂನ್ಯ ಇಂಗಾಲ ಹೊರಸೂಸುವಿಕೆಯ ಭಾರತದ ಮೊದಲ ಹೈಡ್ರೋಜನ್ ರೈಲಿನ ವಿಶೇಷತೆಗಳು
ನವದೆಹಲಿ: ಭಾರತದ ಸ್ವಚ್ಛ ಮತ್ತು ಪರಿಸರಸ್ನೇಹಿ ಸಾರಿಗೆ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ದಿನವಾಗಿದೆ. ಏಕೆಂದರೆ, ಹರಿಯಾಣದ ಜಿಂದ್​ ರೈಲ್ವೆ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲೇ ಪ್ರಥಮ ಬಾರಿಗೆ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾದ 10 ಬೋಗಿಗಳ ಹೈಡ್ರೋಜನ್ ಚಾಲಿತ ರೈಲಿಗೆ ( India First Hydrogen Train ) ಅಧಿಕೃತವಾಗಿ ಹಸಿರು ನಿಶಾನೆ ತೋರಿದ್ದಾರೆ. ಜಿಂದ್​ ಮತ್ತು ಸೋನಿಪತ್ ನಡುವೆ ಚಲಿಸುವ ಈ ಅತ್ಯಾಧುನಿಕ ರೈಲು ಹಳಿಗೆ ಇಳಿಯುತ್ತಿದ್ದಂತೆ, ಜಪಾನ್, ಜರ್ಮನಿ, ಅಮೆರಿಕ ಹಾಗೂ ಚೀನಾದಂತಹ ವಿಶ್ವದ ಆಯ್ದ ಹೈಡ್ರೋಜನ್ ತಂತ್ರಜ್ಞಾನ ಹೊಂದಿರುವ ಬಲಿಷ್ಠ ದೇಶಗಳ ಸಾಲಿಗೆ ಭಾರತವೂ ಹೆಮ್ಮೆಯಿಂದ ಸೇರ್ಪಡೆಗೊಂಡಿದೆ. ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಹೊಂದಿರುವ ಈ ಪರಿಸರಸ್ನೇಹಿ ರೈಲು, ಭಾರತದ ಹಸಿರು ಮಿಷನ್ ಹಾಗೂ ಆತ್ಮನಿರ್ಭರ ತಂತ್ರಜ್ಞಾನದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ರೈಲು ತುಂಬಾ ವಿಶೇಷ ಏಕೆ?

ಈ ಬ್ರಾಡ್-ಗೇಜ್ ಹೈಡ್ರೋಜನ್ ಚಾಲಿತ ರೈಲು ಜಗತ್ತಿನ ಅತಿ ಉದ್ದದ ಹೈಡ್ರೋಜನ್ ರೈಲುಗಳಲ್ಲಿ ಒಂದಾಗಿದೆ. ಅಲ್ಲದೆ, ಇದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಉಪಕ್ರಮಗಳ ಯಶಸ್ಸನ್ನು ಪ್ರತಿಬಿಂಬಿಸುತ್ತದೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ತಿಳಿಸಿದ್ದಾರೆ. ಈ ರೈಲನ್ನು ಉದ್ಘಾಟನೆ ಮಾಡಿದ ಬಳಿಕ ಪ್ರಧಾನಿ ಮೋದಿ ಅವರು ಸುಮಾರು 200 ಶಾಲಾ ಮಕ್ಕಳೊಂದಿಗೆ ಜಿಂದ್​​ನಿಂದ ಪಾಂಡು ಪಿಂಡಾರಾ ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಸಾಂಪ್ರದಾಯಿಕ ವಿದ್ಯುದೀಕರಣ ಕಷ್ಟಕರವಾಗಿರುವ ಪಾರಂಪರಿಕ, ಗುಡ್ಡಗಾಡು ಮತ್ತು ವಿದ್ಯುದೀಕರಣಗೊಳ್ಳದ ಮಾರ್ಗಗಳಲ್ಲಿ ಇಂತಹ 35 ಹೈಡ್ರೋಜನ್ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಯೋಜಿಸಿದ್ದು, ಪ್ರತಿ ರೈಲಿಗೆ 80 ಕೋಟಿ ರೂಪಾಯಿ ಹಾಗೂ ಮೂಲಸೌಕರ್ಯಕ್ಕೆ 70 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯು 2030ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಮತ್ತು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಭಾರತದ ಗುರಿಗೆ ದೊಡ್ಡ ಬಲ ತುಂಬಲಿದ್ದು, ನೀಲಗಿರಿ, ಡಾರ್ಜಿಲಿಂಗ್ ಹಾಗೂ ಕಾಂಗ್ರಾದಂತಹ ಪಾರಂಪರಿಕ ಮಾರ್ಗಗಳಲ್ಲೂ ಇವುಗಳ ಸಂಚಾರಕ್ಕೆ ದಾರಿ ಮಾಡಿಕೊಡಲಿದೆ.

2025ರಲ್ಲಿ ಈ ಯೋಜನೆ ಪೂರ್ಣ

ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಹೈಡ್ರೋಜನ್ ರೈಲು ಯೋಜನೆಯನ್ನು 2020–21ರಲ್ಲಿ ರೂಪಿಸಲಾಗಿದ್ದು, ಜಿಂದ್–ಸೋನಿಪತ್ ನಡುವಿನ 89 ಕಿಲೋಮೀಟರ್ ಮಾರ್ಗದಲ್ಲಿ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (DEMU) ರೇಕ್ ಅನ್ನು ಮರುಹೊಂದಿಸುವ ಪೈಲಟ್ ಪ್ರಾಜೆಕ್ಟ್‌ಗಾಗಿ 136 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಇದಕ್ಕಾಗಿ 2022ರ ಏಪ್ರಿಲ್‌ನಲ್ಲಿ ಹೈದರಾಬಾದ್ ಮೂಲದ ಮೇಧಾ ಸರ್ವೋ ಡ್ರೈವ್ಸ್ 70 ಕೋಟಿ ರೂ. ವೆಚ್ಚದ ಒಪ್ಪಂದವನ್ನು ಪಡೆದುಕೊಂಡು, ನಂತರ ಕೆನಡಾದ ಬಲ್ಲಾರ್ಡ್ ಪವರ್ ಸಿಸ್ಟಮ್ಸ್ ಜೊತೆ ಕೈಜೋಡಿಸಿ ಡೀಸೆಲ್ ರೈಲನ್ನು ಹೈಡ್ರೋಜನ್ ಇಂಧನ ತಂತ್ರಜ್ಞಾನಕ್ಕೆ ಪರಿವರ್ತಿಸಿತು. 2023ರ ಅಕ್ಟೋಬರ್‌ನಲ್ಲಿ ಗ್ರೀನ್ ಹೆಚ್ ಎಲೆಕ್ಟ್ರೋಲಿಸಿಸ್ ಸಂಸ್ಥೆಯು ಜಿಂದ್‌ನಲ್ಲಿ 1 ಮೆಗಾವ್ಯಾಟ್ ಹಸಿರು ಹೈಡ್ರೋಜನ್ ಉತ್ಪಾದನೆ ಮತ್ತು ಮರುಪೂರಣ ಘಟಕವನ್ನು ನಿರ್ಮಿಸುವ ಗುತ್ತಿಗೆಯನ್ನು ಪಡೆದುಕೊಂಡಿತು. ಮುಂದಿನ ಮೂರು ವರ್ಷಗಳಲ್ಲಿ ಆರ್‌ಡಿಎಸ್‌ಒ (RDSO) ಸಂಸ್ಥೆಯು ತಾಂತ್ರಿಕ ವಿಶೇಷತೆಗಳನ್ನು ಅಭಿವೃದ್ಧಿಪಡಿಸಿ, ಡೀಸೆಲ್ ಇಂಜಿನ್ ಬದಲಿಗೆ ಹೈಡ್ರೋಜನ್ ಇಂಧನ ಕೋಶಗಳು, ಲಿಥಿಯಂ ಬ್ಯಾಟರಿಗಳನ್ನು ಅಳವಡಿಸುವ ಮೂಲಕ 2 ಬಾಲಕೇಂದ್ರಿತ ಪವರ್ ಕಾರ್ ಹಾಗೂ 8 ಪ್ರಯಾಣಿಕರ ಬೋಗಿಗಳನ್ನು ಒಳಗೊಂಡ 10 ಬೋಗಿಗಳ ರೈಲು ಸೆಟ್‌ ಅನ್ನು 2025ರ ಡಿಸೆಂಬರ್‌ನಲ್ಲಿ ಸಿದ್ಧಪಡಿಸಿತು. ಅಗತ್ಯ ತಾಂತ್ರಿಕ ಮತ್ತು ಸುರಕ್ಷತಾ ಮಂಜೂರಾತಿಗಳ ನಂತರ, ರೈಲ್ವೆ ಮಂಡಳಿಯು 2026ರ ಮೇ 22ರಂದು ಕಾರ್ಯಾಚರಣೆಗೆ ಅನುಮೋದನೆ ನೀಡಿತು ಹಾಗೂ ಜೂನ್ 26ರ ಅಂತಿಮ ಗರಿಷ್ಠ ವೇಗದ ಪರೀಕ್ಷೆಯಲ್ಲಿ ಈ ರೈಲು ಗಂಟೆಗೆ 120 ಕಿಲೋಮೀಟರ್ ವೇಗವನ್ನು ಮುಟ್ಟಿತು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಯೋಜನೆಯನ್ನು 'ಆತ್ಮನಿರ್ಭರ ಭಾರತ' ಉಪಕ್ರಮದಡಿ ಭಾರತದಲ್ಲೇ ಮೊದಲಿನಿಂದ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಒಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ.

ಜಿಂದ್​-ಸೋನಿಪತ್​ ಮಾರ್ಗ ಆಯ್ದುಕೊಂಡಿದ್ದೇಕೆ?

ತಾಂತ್ರಿಕ ತಜ್ಞರ ಪ್ರಕಾರ, ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿನ ಪೈಲಟ್ ಯೋಜನೆಗಾಗಿ ಜಿಂದ್-ಸೋನಿಪತ್ ಮಾರ್ಗವನ್ನು ಆಯ್ಕೆ ಮಾಡಲು ಅಲ್ಲಿನ ಪೂರಕ ವಾತಾವರಣವೇ ಪ್ರಮುಖ ಕಾರಣವಾಗಿದೆ. ಈ ಸಣ್ಣ ಮತ್ತು ವಿದ್ಯುದೀಕರಣಗೊಳ್ಳದ ಮಾರ್ಗವು ದಿನಕ್ಕೆ ಎರಡು ಬಾರಿ ರೌಂಡ್ ಟ್ರಿಪ್ ಮಾಡಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಪ್ರತಿದಿನ ಒಟ್ಟು 356 ಕಿಲೋಮೀಟರ್ ಕ್ರಮಿಸಿ ಸುಲಭವಾಗಿ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ಈ ಮಾರ್ಗದಲ್ಲಿ ಈಗಾಗಲೇ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (DEMU) ಸೇವೆಗಳು ಲಭ್ಯವಿದ್ದ ಕಾರಣ, ಹೊಸದಾಗಿ ರೈಲನ್ನು ನಿರ್ಮಿಸುವ ಬದಲು ಇದ್ದ ರೇಕ್ ಅನ್ನೇ 10 ಬೋಗಿಗಳ ಹೈಡ್ರೋಜನ್ ರೈಲಾಗಿ ಪರಿವರ್ತಿಸಲು ಸುಲಭವಾಯಿತು. ಇದರೊಂದಿಗೆ, ಜಿಂದ್‌ನಲ್ಲಿ 3000 ಕೆಜಿ ಸಂಗ್ರಹಣಾ ಸಾಮರ್ಥ್ಯದ ಹಸಿರು ಹೈಡ್ರೋಜನ್ ಉತ್ಪಾದನೆ ಮತ್ತು ಮರುಪೂರಣ ಘಟಕವನ್ನು ಸ್ಥಾಪಿಸುವುದು ಸಹ ಇಲ್ಲಿ ಸುಲಭ ಸಾಧ್ಯವಾಗಿತ್ತು. ಅಷ್ಟೇ ಅಲ್ಲದೆ, ಈ ಮಾರ್ಗವು ದೆಹಲಿಗೆ ಹತ್ತಿರದಲ್ಲೇ ಇರುವುದರಿಂದ ಸರಬರಾಜು ಪ್ರಕ್ರಿಯೆಗಳಿಗೆ ಅನುಕೂಲಕರವಾಗಿದ್ದು, ದೆಹಲಿ ವಿಭಾಗದ ಶಕುರ್‌ಬಸ್ತಿಯಂತಹ ಪ್ರಮುಖ ರೈಲ್ವೆ ಹಬ್‌ನಿಂದ ಸೂಕ್ತ ನಿರ್ವಹಣಾ ಬೆಂಬಲವನ್ನು ಪಡೆಯಲು ಸಹಕಾರಿಯಾಗಿದೆ.

ಈ ರೈಲು ಹೇಗೆ ಕಾರ್ಯನಿರ್ವಹಿಸುತ್ತದೆ?

ರೈಲ್ವೆ ಅಧಿಕಾರಿಗಳ ಪ್ರಕಾರ, ಈ ರೈಲು ಚಲನೆಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಲು 1,200 kW ಸಾಮರ್ಥ್ಯದ ಹೈಡ್ರೋಜನ್ ಇಂಧನ ಕೋಶದ (Fuel-Cell) ಚಾಲನಾ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ ಮತ್ತು ಇದನ್ನು ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (DEMU) ರೇಕ್‌ನಿಂದ ಮಾರ್ಪಡಿಸಲಾಗಿದೆ. ತಜ್ಞರ ಪ್ರಕಾರ, ಹೈಡ್ರೋಜನ್, ಡೀಸೆಲ್‌ಗಿಂತ ಗಣನೀಯವಾಗಿ ಹೆಚ್ಚಿನ ಶಕ್ತಿ ಸಾಂದ್ರತೆಯನ್ನು ಹೊಂದಿದ್ದು, ಡೀಸೆಲ್‌ನ 43 MJ/kg ಗೆ ಹೋಲಿಸಿದರೆ ಹೈಡ್ರೋಜನ್ 120 MJ/kg ನಷ್ಟು ಹೆಚ್ಚಿನ ಸಾಂದ್ರತೆ ಹೊಂದಿದೆ. ಇದರ ಹೈಬ್ರಿಡ್ ಚಾಲನಾ ವ್ಯವಸ್ಥೆಯು ಸರಾಸರಿ ಮತ್ತು ಗರಿಷ್ಠ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಪ್ರಾಥಮಿಕ ಶಕ್ತಿಯ ಆಧಾರವಾಗಿ 'ಪ್ರೋಟಾನ್ ಎಕ್ಸ್ಚೇಂಜ್ ಮೆಂಬರೇನ್ ಫ್ಯುಯೆಲ್ ಸೆಲ್' (PEMFC) ಹಾಗೂ ಬ್ಯಾಟರಿ ಬ್ಯಾಂಕ್ ಅನ್ನು ಸಂಯೋಜಿಸುತ್ತದೆ. ಈ ಹೈಡ್ರೋಜನ್ ಇಂಧನ ಕೋಶಗಳು ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಅನ್ನು ಉತ್ಪಾದಿಸುತ್ತವೆ ಮತ್ತು ಕೇವಲ ನೀರಿನ ಹಾವಿಯನ್ನು ಮಾತ್ರ ಹೊರಸೂಸುವುದರಿಂದ, ಸಾರಿಗೆ ವಲಯಕ್ಕೆ ಇದು ಅತ್ಯಂತ ಸ್ವಚ್ಛ ಹಾಗೂ ಹೆಚ್ಚು ಸುಸ್ಥಿರ ಪರ್ಯಾಯ ವ್ಯವಸ್ಥೆಯಾಗಿದೆ.

ಇಂಧನ ಸಂಗ್ರಹ ಹೇಗೆ?

ಈ ಅತ್ಯಾಧುನಿಕ ರೈಲು ಸುಮಾರು 440 ಕೆಜಿ ಹೈಡ್ರೋಜನ್ ಅನ್ನು ಹೊತ್ತೊಯ್ಯಲಿದ್ದು, ಇದನ್ನು ರೈಲಿನ ಮುಂಭಾಗ ಮತ್ತು ಹಿಂಭಾಗದಲ್ಲಿ ತಲಾ 27 ಸಿಲಿಂಡರ್‌ಗಳಲ್ಲಿ ಸಂಕುಚಿತ ಅನಿಲದ (Compressed Gas) ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಜಿಂದ್‌ನಲ್ಲಿರುವ ಘಟಕದಲ್ಲಿ 1MW 'ಪ್ರೋಟಾನ್ ಎಕ್ಸ್ಚೇಂಜ್ ಮೆಂಬರೇನ್' (PEM) ಎಲೆಕ್ಟ್ರೋಲೈಸರ್ ಬಳಸಿ ವಿದ್ಯುದ್ವಿಭಜನೆ (Electrolysis) ಪ್ರಕ್ರಿಯೆಯ ಮೂಲಕ ಹಸಿರು ಹೈಡ್ರೋಜನ್ ಅನ್ನು ಉತ್ಪಾದಿಸಲಾಗುತ್ತದೆ ಹಾಗೂ ಅಲ್ಲಿ 3000 ಕೆಜಿ ಸಂಗ್ರಹಣಾ ಸಾಮರ್ಥ್ಯವಿರುತ್ತದೆ. ಇಂಧನ ಕೋಶಗಳ ಒಳಗೆ ಹೈಡ್ರೋಜನ್ ಗಾಳಿಯಲ್ಲಿನ ಆಮ್ಲಜನಕದೊಂದಿಗೆ ಸೇರಿ ವಿದ್ಯುತ್ ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಕೇವಲ ನೀರಿನ ಹಾವಿ ಹಾಗೂ ಶಾಖ ಮಾತ್ರ ಉಪ-ಉತ್ಪನ್ನಗಳಾಗಿ (By-products) ಹೊರಬರುತ್ತವೆ. 'ಬಲ್ಲಾರ್ಡ್ ಪವರ್ ಸಿಸ್ಟಮ್ಸ್' ಸಂಸ್ಥೆಯ PEM ಇಂಧನ ಕೋಶಗಳನ್ನು ಹೊಂದಿರುವ ಈ ರೈಲು ಒಟ್ಟು 2400 kW (ಪ್ರತಿ DPC ಗೆ 1,200 kW) ಸಾಮರ್ಥ್ಯವನ್ನು ಹೊಂದಿದೆ. ಪ್ರತಿಯೊಂದು DPC ನಾಲ್ಕು ಸಂಯೋಜಿತ ಪವರ್ ಪ್ಯಾಕ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ 300 kW (ಇಂಧನ ಕೋಶದಿಂದ 115 kW ಮತ್ತು ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿಯಿಂದ 185 kW) ವಿದ್ಯುತ್ ಉತ್ಪಾದಿಸುತ್ತದೆ. ಒಂದು ಬಾರಿ ಇಂಧನ ಮರುಪೂರಣ ಮಾಡಿದರೆ ಈ ರೈಲು ಸರಿಸುಮಾರು 250 ಕಿಲೋಮೀಟರ್ ದೂರ ಕ್ರಮಿಸಬಲ್ಲದು. ತಜ್ಞರ ಪ್ರಕಾರ, ಇದರ ಸುರಕ್ಷತೆಗಾಗಿ ಹೈಡ್ರೋಜನ್ ಸೋರಿಕೆ ಮತ್ತು ಜ್ವಾಲೆ ಪತ್ತೆಹಚ್ಚುವ ಉಪಕರಣಗಳು, 24×7 ಮರುಪೂರಣ ವ್ಯವಸ್ಥೆಯ ಮೇಲ್ವಿಚಾರಣೆ, ತರಬೇತಿ ಪಡೆದ ಪ್ರಮಾಣೀಕೃತ ಸಿಬ್ಬಂದಿ, ಹೈಡ್ರೋಜನ್ ಸಂಗ್ರಹಣೆಯ ಪರವಾನಗಿ ಹಾಗೂ ಜರ್ಮನಿ ಮೂಲದ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಸುರಕ್ಷತಾ ಮೌಲ್ಯಮಾಪನವನ್ನು ಮಾಡಿಸಲಾಗಿದೆ.

ಪ್ರತಿನಿತ್ಯವೂ ಈ ರೈಲು ಓಡುತ್ತಾ?

ನಿಯಮಿತ ಕಾರ್ಯಾಚರಣೆಯ ಸಮಯದಲ್ಲಿ, ರೈಲು ಸಂಖ್ಯೆ 74010 ಜಿಂದ್‌ನಿಂದ ಬೆಳಗ್ಗೆ 7:40 ಕ್ಕೆ ಹೊರಟು 9:40 ಕ್ಕೆ ಸೋನಿಪತ್ ತಲುಪಲಿದೆ. ಮರಳಿ ಪ್ರಯಾಣಿಸುವ ರೈಲು ಸಂಖ್ಯೆ 74009, ಸೋನಿಪತ್‌ನಿಂದ ಬೆಳಗ್ಗೆ 10:40 ಕ್ಕೆ ಹೊರಟು ಮಧ್ಯಾಹ್ನ 1:00 ಗಂಟೆಗೆ ಜಿಂದ್ ತಲುಪಲಿದೆ. ಈ ರೈಲು ಪ್ರತಿದಿನ ಎರಡು ರೌಂಡ್ ಟ್ರಿಪ್‌ಗಳನ್ನು ಮಾಡಲಿದ್ದು, ಸುಮಾರು 356 ಕಿಲೋಮೀಟರ್ ದೂರವನ್ನು ಕ್ರಮಿಸಿ ಒಟ್ಟು 2,600 ಪ್ರಯಾಣಿಕರನ್ನು ಹೊತ್ತೊಯ್ಯಲಿದೆ. ತನ್ನ ಪ್ರಯಾಣದ ಹಾದಿಯಲ್ಲಿ ಇದು ಜಿಂದ್ ಸಿಟಿ, ಪಾಂಡು ಪಿಂಡಾರಾ, ಲಲಿತ್ ಖೇರಾ, ಭಾಂಬೇವಾ, ಈಶಾಪುರ್ ಖೇರಿ, ಬುಟಾನಾ, ಖಾಂಡ್ರಾಯ್, ಗೋಹಾನಾ, ರಾಬ್ರಾಗೆ, ಲಾತ್, ಮೋಹಾನಾ ಮತ್ತು ಬರ್ವಾಸ್ನಿ ಸೇರಿದಂತೆ ಒಟ್ಟು 12 ನಿಲ್ದಾಣಗಳಲ್ಲಿ ನಿಲ್ಲಲಿದೆ.
1,200 kW ಹೈಡ್ರೋಜನ್ ಇಂಧನ ಕೋಶದ ಚಾಲನಾ ವ್ಯವಸ್ಥೆಯನ್ನು ಹೊಂದಿರುವ ಈ ರೈಲು ಚಲನೆಗೆ ಅಗತ್ಯವಿರುವ ವಿದ್ಯುತ್ ಅನ್ನು ಹೈಡ್ರೋಜನ್‌ನಿಂದಲೇ ಉತ್ಪಾದಿಸಲಿದ್ದು, ಇದು ಡೀಸೆಲ್‌ಗಿಂತ ಹೆಚ್ಚಿನ ಇಂಧನ ಸಾಂದ್ರತೆ ಹೊಂದಿರಲಲ್ಲದೆ ಕಡಿಮೆ ನಿರ್ವಹಣೆ ಬೇಡುತ್ತದೆ ಮತ್ತು ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಹೊಂದಿರುತ್ತದೆ. ಇನ್ನು ಕಾರ್ಯಾಚರಣೆಯ ಮೊದಲ ಮೂರು ತಿಂಗಳ ಅವಧಿಯಲ್ಲಿ, ರೈಲಿನ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತರಬೇತಿ ಪಡೆದ ತಜ್ಞರು ರೈಲಿನಲ್ಲೇ ಪ್ರಯಾಣಿಸಲಿದ್ದಾರೆ, (ಏಜೆನ್ಸೀಸ್​).