ಮುಂಬೈ: ಅಲ್ಬೇನಿಯಾದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ಮತ್ತು ವಿದ್ಯಾರ್ಥಿ ನೇತೃತ್ವದ ಹಿಂಸಾತ್ಮಕ ಪ್ರತಿಭಟನೆಗಳ ವಿಚಾರವಾಗಿ ಶಿವಸೇನಾ (ಉದ್ಧವ್ ಬಣ) ಪ್ರಮುಖ ನಾಯಕರಾದ ಸಂಜಯ್ ರಾವುತ್ ಮತ್ತು ಪ್ರಿಯಾಂಕಾ ಚತುರ್ವೇದಿ (Sanjay Raut Vs Priyanka Chaturvedi) ಅವರ ನಡುವಿನ ಬಹಿರಂಗ ವಾಕ್ಸಮರ ಭುಗಿಲೆದ್ದಿದೆ. ವಿದೇಶಿ ಪ್ರತಿಭಟನೆಗಳಿಂದ ಭಾರತವು ಪಾಠ ಕಲಿಯಬೇಕು ಎಂದು ರಾವುತ್ ವಾದಿಸಿದರೆ, ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಇಂತಹ ಹಿಂಸಾತ್ಮಕ ದಾಳಿಗಳನ್ನು ಮತ್ತು ಅರಾಜಕತೆಯನ್ನು ಭಾರತದೊಂದಿಗೆ ಹೋಲಿಸುವುದನ್ನು ಪ್ರಿಯಾಂಕಾ ಚತುರ್ವೇದಿ ಖಂಡಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಸಂಸದ ಸಂಜಯ್ ರಾವುತ್, ಅಲ್ಬೇನಿಯಾದಲ್ಲಿ ಭ್ರಷ್ಟ ಪ್ರಧಾನಿಗಳಿಗೆ ಸಹಾಯ ಮಾಡುತ್ತಿದೆ ಎಂಬ ಕಾರಣಕ್ಕೆ ಅಲ್ಲಿನ ಜನತೆ ಮತ್ತು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಉಲ್ಲೇಖಿಸಿದ್ದರು. ಪ್ರತಿಭಟನಾಕಾರರು ಸಂಸತ್ತು, ಸರ್ಕಾರಿ ಕಚೇರಿಗಳು ಹಾಗೂ ಸಚಿವರ ಮನೆಗಳ ಮೇಲೂ ಮುಗಿಬಿದ್ದು ದಾಳಿ ನಡೆಸಿದ್ದಾರೆ. ಎಲ್ಲಾ ದೇಶಗಳು, ಅದರಲ್ಲೂ ವಿಶೇಷವಾಗಿ ಭಾರತವು ಈ ಘಟನೆಗಳಿಂದ ಗಂಭೀರ ಪಾಠ ಕಲಿಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು. ಅಲ್ಬೇನಿಯಾದಲ್ಲಿ ಪ್ರಧಾನಿ ಎಡಿ ರಾಮಾ ಅವರ ದೀರ್ಘಕಾಲದ ಆಡಳಿತ, ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ಮುಗಿಬಿದ್ದಿರುವ ಜನತೆಯ ಆಕ್ರೋಶವನ್ನು ಅವರು ಬೆಂಬಲಿಸುವಂತೆ ಮಾತನಾಡಿದ್ದರು.
ರಾವುತ್ ಈ ಹೇಳಿಕೆಯನ್ನು ಪಕ್ಷದ ಸಹೋದ್ಯೋಗಿ ಹಾಗೂ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ತೀವ್ರವಾಗಿ ಖಂಡಿಸಿದ್ದು, ಭಾರತವು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹೊಂದಿದ್ದು, ಬೇರೆ ಯಾವುದೇ ಚಿಕ್ಕ ದೇಶದಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಯಾರೂ ಕೂಡ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಅಥವಾ ಸಾಂಸ್ಥಿಕ ವ್ಯವಸ್ಥೆಗಳನ್ನು ಅಸ್ಥಿರಗೊಳಿಸಲು ಮುಂದಾಗಬಾರದು ಎಂದು ಸಲಹೆ ನೀಡಿದರು.
ಎಎನ್ಐ ಜೊತೆ ಮಾತನಾಡಿದ ಚತುರ್ವೇದಿ, ಅಲ್ಬೇನಿಯಾವು ದೀರ್ಘಕಾಲದ ಕಮ್ಯುನಿಸ್ಟ್ ಸರ್ವಾಧಿಕಾರದ ಕರಾಳ ಇತಿಹಾಸವನ್ನು ಹೊತ್ತುಕೊಂಡಿರುವ ಸಣ್ಣ ರಾಷ್ಟ್ರ ಎಂಬುದನ್ನು ಉಲ್ಲೇಖಿಸುತ್ತಾ, ಸುಪ್ರೀಂ ಕೋರ್ಟ್ ಮತ್ತು ಸಂಸತ್ತಿನಂತಹ ಉನ್ನತ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಗುರಿಯಾಗಿಸಿ ಧ್ವಂಸಗೊಳಿಸುವುದು ಅಥವಾ ಬೆಂಕಿ ಹಚ್ಚುವುದುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಬಾಂಗ್ಲಾದೇಶದ ಪ್ರತಿಭಟನೆಗಳ ಮಾದರಿಯನ್ನು ಭಾರತದಲ್ಲಿ ಅನುಸರಿಸಿ ಆಡಳಿತ ಬದಲಾವಣೆ ಬಯಸುವವರ ಧೋರಣೆಯನ್ನು ಪ್ರಿಯಾಂಕಾ ಕಟುವಾಗಿ ಟೀಕಿಸಿದರು. ಇಂತಹ ಹಿಂಸಾತ್ಮಕ ಆಡಳಿತ ಬದಲಾವಣೆಗಳಿಗೆ ಯಾವುದೇ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ. ಅಲ್ಬೇನಿಯಾ, ಬಾಂಗ್ಲಾದೇಶ ಅಥವಾ ಪ್ಯಾರಿಸ್ ನಿದರ್ಶನಗಳನ್ನು ನಾವು ಎಂದಿಗೂ ಅನುಸರಿಸಲು ಅಥವಾ ಮಾದರಿಯಾಗಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಅಲ್ಬೇನಿಯಾದ ರಾಜಧಾನಿ ಟಿರಾನಾದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಹಾಗೂ ಸರ್ಕಾರಿ ಭ್ರಷ್ಟಾಚಾರವನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ದೊಡ್ಡ ಮಟ್ಟದಲ್ಲಿ ಆಂದೋಲನ ನಡೆಸುತ್ತಿದ್ದಾರೆ. ಪ್ರಧಾನಿ ಎಡಿ ರಾಮಾ ಅವರ ರಾಜೀನಾಮೆಗೆ ಪಟ್ಟುಹಿಡಿದು ಪ್ರತಿಭಟನಾಕಾರರು ರಸ್ತೆಗಿಳಿದಿದ್ದಾರೆ. ಈ ವೇಳೆ ನಡೆದ ಘರ್ಷಣೆಯಲ್ಲಿ ಸುಪ್ರೀಂ ಕೋರ್ಟ್ ಕಟ್ಟಡದ ಭಾಗಕ್ಕೆ ಬೆಂಕಿ ಹಚ್ಚಲಾಗಿದೆ, ವಾಹನಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಸರ್ಕಾರಿ ಕಚೇರಿಗಳ ಮೇಲೆ ದಾಳಿಗಳು ನಡೆದಿವೆ. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ(ಏಜೆನ್ಸೀಸ್).