ಸಾಂದರ್ಭಿಕ ಚಿತ್ರ 
ದೇಶ

ಕೆಂಪುಕೋಟೆಯ ಬಳಿ ಬಾಂಬ್​ ಸ್ಪೋಟ: ಕೃತ್ಯದ ಹಿಂದೆ ಅಲ್-ಖೈದಾ ಸಂಘಟನೆಯ ಕೈವಾಡ ಖಚಿತಪಡಿಸಿದ ವಿಶ್ವಸಂಸ್ಥೆ ವರದಿ | Al-Qaeda

ನವದೆಹಲಿ: ಕಳೆದ ವರ್ಷ ದೆಹಲಿಯಲ್ಲಿ 15 ಮಂದಿಯನ್ನು ಬಲಿತೆಗೆದುಕೊಂಡ ಕೆಂಪು ಕೋಟೆಯ ಬಳಿಯ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವ ವಿಚಾರವೊಂದು ಬೆಳಕಿಗೆ ಬಂದಿದ್ದು, ಸ್ಪೋಟದ ಹಿಂದೆ ಉಗ್ರ ಅಲ್-ಖೈದಾ(Al-Qaeda) ಸಂಘಟನೆಯ ಕೈವಾಡವಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಬಹಿರಂಗಪಡಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ವರದಿಯಲ್ಲಿ, ಭಾರತೀಯ ಉಪಖಂಡದಲ್ಲಿ ಅಲ್-ಖೈದಾ ಸಣ್ಣ-ಸಣ್ಣ ಗುಂಪುಗಳಾಗಿ ಛಿದ್ರಗೊಂಡು ಪ್ರಾದೇಶಿಕ ಭಯೋತ್ಪಾದಕ ಘಟಕವಾಗಿ ಕಾರ್ಯನಿರ್ವಹಿಸುವುದನ್ನು ಮುಂದುರೆಸಿದೆ.
ಇದು ದೊಡ್ಡ ಘಟಕಗಳ ಬದಲಿಗೆ, ವಿಕೇಂದ್ರೀಕೃತ, ಸಣ್ಣ ಮತ್ತು ಚದುರಿದ ಗುಂಪುಗಳ ಮೂಲಕ ಕಾರ್ಯನಿರ್ವಹಿಸುತ್ತಾ, ಅಗತ್ಯ ಸಂಪನ್ಮೂಲ ಪೂರೈಕೆ ಹಾಗೂ ಹಣಕಾಸು ಜಾಲಗಳನ್ನು ಸ್ಥಾಪಿಸಿಕೊಂಡಿದೆ ಎಂದು ತಿಳಿಸಿದೆ. ಮತ್ತು 2025 ನವೆಂಬರ್​ನಲ್ಲಿ ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಸ್ಪೋಟವನ್ನು ಅಧಿಕೃತವಾಗಿ ಅಲ್-ಖೈದಾ ಮಾಡಿಸಿದೆ ಎಂದು ಆರೋಪಿಸಿದೆ.
ಇನ್ನೂ ತಾಲಿಬಾನ್ ಬೆಂಬಲದೊಂದಿಗೆ AQIS ಹಲವಾರು ಪ್ರದೇಶಗಳಲ್ಲಿ ಸುರಕ್ಷಿತ ತಾಣಗಳನ್ನು ಪಡೆಯುತ್ತಿದೆ ಎಂಬ ಆರೋಪಗಳನ್ನು ವರದಿಯು ಎತ್ತಿ ತೋರಿಸಿದೆ. ದೆಹಲಿ ಸ್ಫೋಟ ಪ್ರಕರಣದಲ್ಲಿ ಹೆಚ್ಚಿನ ವಿವರಗಳು ಹೊರಬರುತ್ತಿದ್ದಂತೆ, ಅಂತರರಾಷ್ಟ್ರೀಯ ಭಯೋತ್ಪಾದಕ ಜಾಲದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಹೊರಹೊಮ್ಮುವ ಸಾಧ್ಯತೆಯಿದೆ.

ಕೆಂಪುಕೋಟೆಯ ಬಳಿ ಸ್ಪೋಟ

2025 ನವೆಂಬರ್ 10ರಂದು ಕೆಂಪುಕೋಟೆ ಬಳಿ ಈ ಸ್ಫೋಟ ನಡೆದಿತ್ತು. ಘಟನೆಯಲ್ಲಿ ಒಟ್ಟು 15 ಮಂದಿ ಮೃತಪಟ್ಟಿದ್ದರು. ದೆಹಲಿಯಿಂದ ಕೇವಲ 50 ಕಿ.ಮೀ ದೂರದಲ್ಲಿರುವ ನೆರೆಯ ಹರಿಯಾಣದ ಫರಿದಾಬಾದ್‌ನಲ್ಲಿ ಅಮೋನಿಯಂ ನೈಟ್ರೇಟ್ ಸೇರಿದಂತೆ 2,900 ಕೆಜಿ ಸ್ಫೋಟಕಗಳು ಪತ್ತೆಯಾದ ದಿನವೇ ಈ ದಾಳಿ ನಡೆದಿತ್ತು.
ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಎಎನ್​ಐ 10 ಆರೋಪಿಗಳ ವಿರುದ್ಧ 7,500 ಪುಟಗಳ ಬೃಹತ್ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ. ಇನ್ನೂ ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಆದಿಲ್ ರಾಥರ್ ಅವರನ್ನು ಬಂಧಿಸಿ ಸ್ಫೋಟಕಗಳನ್ನು ವಶಪಡಿಸಿಕೊಂಡಾಗ, ಆತ್ಮಹತ್ಯಾ ಬಾಂಬರ್ ಉಮರ್ ಮೊಹಮ್ಮದ್ ಗಾಬರಿಗೊಂಡು ಸ್ಫೋಟವನ್ನು ನಡೆಸಿದನೆಂದು ಹೇಳಲಾಗಿದೆ (ಏಜೆನ್ಸೀಸ್).