Akshara Gupta 
ದೇಶ

ಸೂರ್ಯವಂಶಿ ಬಳಿಕ 15 ವರ್ಷದ ಅಕ್ಷರಾ ಗುಪ್ತಾ ಅಬ್ಬರ! ಕೇವಲ 126 ಎಸೆತಗಳಲ್ಲಿ ಅಜೇಯ 306 ರನ್‌ ಸಿಡಿಸಿ ಇತಿಹಾಸ | Akshara Gupta

ಭಾಗಲ್ಪುರ್: ಬಿಹಾರದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಬಳಿಕ ಇದೀಗ ಮತ್ತೊಬ್ಬ ಕಿರಿಯ ಆಟಗಾರ್ತಿ ಕ್ರಿಕೆಟ್‌ ಲೋಕದ ಗಮನ ಸೆಳೆದಿದ್ದಾರೆ. ಬಿಹಾರದ 15 ವರ್ಷದ ಬ್ಯಾಟರ್‌ ಅಕ್ಷರಾ ಗುಪ್ತಾ(Akshara Gupta) ಮಹಿಳಾ ಅಂಡರ್‌-19 ಏಕದಿನ ಟೂರ್ನಿಯಲ್ಲಿ ಭರ್ಜರಿ ತ್ರಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.
ಹೌದು, ಭಾಗಲ್ಪುರದ ಸ್ಯಾಂಡಿಸ್ ಕಾಂಪೌಂಡ್ ಮೈದಾನದಲ್ಲಿ ಗುರುವಾರ ನಡೆದ ಬಿಸಿಎ (BCA) ಮಹಿಳಾ ಅಂಡರ್‌-19 ಏಕದಿನ ಟ್ರೋಫಿ ಪಂದ್ಯದಲ್ಲಿ ಅಕ್ಷರಾ ಗುಪ್ತಾ ಅಜೇಯ 306 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ ಆಡಿದರು. ಕೇವಲ 126 ಎಸೆತಗಳಲ್ಲಿ ಈ ಸಾಧನೆ ಮಾಡಿದ ಅವರು, ಎದುರಾಳಿ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಅಕ್ಷರಾ ತಮ್ಮ ಇನ್ನಿಂಗ್ಸ್‌ನಲ್ಲಿ 55 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು. ಅವರ ಸ್ಟ್ರೈಕ್‌ ರೇಟ್‌ 242.86 ಆಗಿತ್ತು. ಅಂದರೆ ಎದುರಿಸಿದ ಪ್ರತಿಯೊಂದು ಎಸೆತಕ್ಕೂ ಸುಮಾರು ಎರಡೂವರೆ ರನ್‌ಗಳಷ್ಟು ವೇಗದಲ್ಲಿ ಬ್ಯಾಟಿಂಗ್‌ ನಡೆಸಿದರು.

ಅಜೇಯ 306 ರನ್

ಅವರ ಬ್ಯಾಟಿಂಗ್‌ ಎಷ್ಟು ವೇಗವಾಗಿತ್ತೆಂದರೆ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ಕೇವಲ 34 ಎಸೆತಗಳಲ್ಲಿ ಶತಕದ ಗಡಿ ದಾಟಿ ಎಲ್ಲರ ಗಮನ ಸೆಳೆದರು. ಬಳಿಕ ದ್ವಿಶತಕ ಮತ್ತು ತ್ರಿಶತಕದತ್ತ ದಾಪುಗಾಲಿಟ್ಟು ಅಜೇಯ 306 ರನ್‌ಗಳೊಂದಿಗೆ ಮೈದಾನ ತೊರೆದರು.
ಪೂರ್ವ ಚಂಪಾರಣ ಜಿಲ್ಲೆಯ ರಕ್ಸೌಲ್ ಮೂಲದ ಅಕ್ಷರಾ ಗುಪ್ತಾ ಪ್ರಸ್ತುತ ಬಿಹಾರ ಮಹಿಳಾ ಅಂಡರ್‌-19 ತಂಡದ ನಾಯಕಿಯಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸತತ ನಾಲ್ಕು ಬಿಸಿಸಿಐ ಮಹಿಳಾ ಟೂರ್ನಿಗಳಲ್ಲಿ ಆಡಿರುವ ಬಿಹಾರದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.
ಇತ್ತೀಚೆಗೆ ಬಿಹಾರದ ಮತ್ತೊಬ್ಬ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ದೇಶದಾದ್ಯಂತ ಸುದ್ದಿಯಾಗಿದ್ದರು. ಕೇವಲ 15ನೇ ವಯಸ್ಸಿನಲ್ಲಿ ಭಾರತೀಯ ತಂಡಕ್ಕೆ ಆಯ್ಕೆಯಾಗಿರುವ ವೈಭವ್, ಐರ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ. ಜೊತೆಗೆ ಇಂಗ್ಲೆಂಡ್ ಪ್ರವಾಸಕ್ಕೂ ಆಯ್ಕೆಯಾಗಿದ್ದಾರೆ.
ℹ️

ಶುಭಾಶಯಗಳ ಮಹಪೂರ

ಅಕ್ಷರಾ ಅವರ ಈ ಐತಿಹಾಸಿಕ ಸಾಧನೆಗೆ ಬಿಹಾರ ಕ್ರಿಕೆಟ್ ಸಂಸ್ಥೆ (BCA) ಅಧ್ಯಕ್ಷ ಹರ್ಷವರ್ಧನ್ ಅಭಿನಂದನೆ ಸಲ್ಲಿಸಿದ್ದಾರೆ. "ಬಿಹಾರದ ಮಹಿಳಾ ಕ್ರಿಕೆಟಿಗರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ರಾಜ್ಯಕ್ಕೆ ಕೀರ್ತಿ ತರುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಜಿಯೌಲ್ ಅರ್ಫಿನ್ ಕೂಡ ಅಕ್ಷರಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಒಟ್ಟಾರೆ, ಕೇವಲ 15ನೇ ವಯಸ್ಸಿನಲ್ಲಿ 126 ಎಸೆತಗಳಲ್ಲಿ ಅಜೇಯ 306 ರನ್‌ ಸಿಡಿಸಿರುವ ಅಕ್ಷರಾ ಗುಪ್ತಾ, ಬಿಹಾರ ಮಾತ್ರವಲ್ಲದೆ ಭಾರತೀಯ ಮಹಿಳಾ ಕ್ರಿಕೆಟ್‌ನ ಭವಿಷ್ಯದ ತಾರೆಯಾಗಿ ಹೊರಹೊಮ್ಮಿದ್ದಾರೆ,(ಏಜೆನ್ಸೀಸ್​​).