ಸಂಸದ ನಿಶಿಕಾಂತ್ ದುಬೆ ಮತ್ತು ಅಖಿಲೇಶ್ ಯಾದವ್
ನವದೆಹಲಿ: ರಾಮಮಂದಿರ ದೇಣಿಗೆ ಕಳ್ಳತನ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ ರಾಮಶಂಕರ್@ ಟಿನ್ನು ಯಾದವ್ ಜೊತೆ ಎಸ್‌ಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ಹೆಸರು ತಳುಕು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ನಿಶಿಕಾಂತ್ ದುಬೆಗೆ(Nishikant Dubey) ಸಮಾಜವಾದಿ ಪಕ್ಷ ಲೀಗಲ್ ನೋಟಸ್ ಕಳುಹಿಸಿದೆ ಎಂದು ಬುಧವಾರ(ಜು. 08) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಮಾಜವಾದಿ ಅಧಿವಕ್ತ ಸಭಾದ ಅಧ್ಯಕ್ಷ ಕೃಷ್ಣ ಕನ್ಹಯ್ಯಾ ಪಾಲ್, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಮಾನನಷ್ಟ, ಚಾರಿತ್ರ್ಯಹರಣ ಮತ್ತು ದುರುದ್ದೇಶಪೂರಿತ ವಿಷಯವನ್ನು ಹಂಚಿಕೊಂಡಿರುವ ಹಿನ್ನೆಲೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೆ ಕಾನೂನು ನೋಟಿಸ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ನೋಟಿಸ್ನಲ್ಲಿ, ಸಮಾಜವಾದಿ ಪಕ್ಷ ಮತ್ತು ಅಖಿಲೇಶ್ ಯಾದವ್ ಜಿ ವಿರುದ್ಧ ಉದ್ದೇಶಪೂರ್ವಕವಾಗಿ ದ್ವೇಷವನ್ನು ಹುಟ್ಟುಹಾಕಲು ಮಾನಹಾನಿಕರ ವಿಷಯಗಳು/ಟೀಕೆಗಳನ್ನು ಹಂಚಿಕೊಂಡಿದ್ದೀರಿ, ಆ ಮೂಲಕ ಸಮಾಜವಾದಿ ಪಕ್ಷದ ವಿರುದ್ಧ ನೇರವಾಗಿ ದ್ವೇಷವನ್ನು ಪ್ರಚೋದಿಸುತ್ತಿದ್ದೀರಿ. ಆದ್ದರಿಂದ ಎರಡು ವಾರಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚನೆ ಮಾಡಲು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.
ನಿಶಿಕಾಂತ್ ದುಬೆ ಅವರು, ಅಖಿಲೇಶ್ ಯಾದವ್ ಮತ್ತು ಟಿನ್ನು ನಡುವೆ ಸಂಬಂಧವಿದೆ ಎಂದು ಆರೋಪಿಸಿ, ಟಿನ್ನು ಟಿಪ್ಪು ಜೊತೆ ಮಾತನಾಡುತ್ತಿದ್ದನೇ? ಎಂದು ಎಕ್ಸ್ನಲ್ಲಿ ಟಿನ್ನು ಯಾದವ್ ಮತ್ತು ಅಖಿಲೇಶ್ ಯಾದವ್ ನಡುವಿನ ಸಂಪರ್ಕವು ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣವನ್ನು ಇನ್ನಷ್ಟು ರೋಮಾಂಚನಗೊಳಿಸಿದೆ ಎಂಬ ಸರವಣಪ್ರಸಾದ್ ಬಾಲಸುಬ್ರಮಣಿಯನ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.
ಪೊಲೀಸ್ ತನಿಖೆ ಮತ್ತು ಮೊಬೈಲ್ ಕರೆ ವಿವರಗಳ ವಿಶ್ಲೇಷಣೆಯ ಪ್ರಕಾರ, ಟಿನ್ನು ಯಾದವ್ ಅಖಿಲೇಶ್ ಯಾದವ್ ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದರು, ಪ್ರತಿದಿನ ಒಂದು ಅಥವಾ ಎರಡು ಬಾರಿ ಅವರೊಂದಿಗೆ ಮಾತನಾಡುತ್ತಿದ್ದರು. ಬಂಧನಕ್ಕೆ ಕೇವಲ ಒಂದು ದಿನ ಮೊದಲು, ಟಿನ್ನು, ಅಖಿಲೇಶ್ ಯಾದವ್ ಅವರೊಂದಿಗೆ ಮೂರು ಬಾರಿ ಫೋನ್‌ನಲ್ಲಿ ಮಾತನಾಡಿದ್ದರು ಎಂದು ದಾಖಲೆಗಳು ತೋರಿಸುತ್ತವೆ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ (ಏಜೆನ್ಸೀಸ್).