Akhilesh Yadav | ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್
ಲಖನೌ: ಬಿಹಾರ ಮತ್ತು ಪಶ್ಚಿಮ ಬಂಗಾಳದ ಮಾದರಿಯಲ್ಲಿ ಚುನಾವಣಾ ಆಯೋಗದ ಜೊತೆಗೂಡಿ ಬಿಜೆಪಿ ದೇಶ್ಯಾದ್ಯಂತ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಕಸಗಂಜ್‌ನ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ಇದೇ ರೀತಿಯ ಲೂಟಿ ಮತ್ತು ಅಪ್ರಾಮಾಣಿಕತೆ ಉತ್ತರ ಪ್ರದೇಶದಲ್ಲೂ ಮುಂದುವರಿದರೆ, ಭವಿಷ್ಯದಲ್ಲಿ ದೇಶದಲ್ಲಿ ಚುನಾವಣೆಗಳೇ ನಡೆಯದ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ (SIR) ಅಭಿಯಾನದ ಮೂಲಕ ಬಿಜೆಪಿ ಮತ ಕದಿಯುತ್ತಿದೆ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಹೆಸರಿನಲ್ಲಿ ಮಹಿಳಾ ಮತದಾರರನ್ನು ದಾರಿ ತಪ್ಪಿಸುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಬಿಜೆಪಿ ತಿರುಗೇಟು...
ಉತ್ತರ ಪ್ರದೇಶ ಚುನಾವಣೆಯಲ್ಲಿಯೂ ಅಕ್ರಮ ನಡೆಯುವ ಸಾಧ್ಯತೆಯಿದೆ ಎಂಬ ಅಖಿಲೇಶ್ ಯಾದವ್ ಹೇಳಿಕೆಗೆ ಯುಪಿ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಿರುಗೇಟು ನೀಡಿದ್ದು, ವಿರೋಧ ಪಕ್ಷದ ನಾಯಕರು, ವಿಶೇಷವಾಗಿ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕರು, ಚುನಾವಣೆಗೂ ಮುನ್ನವೇ ತಮ್ಮ ಸೋಲನ್ನು ಮುನ್ಸೂಚಿಸಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ವಿರೋಧ ಪಕ್ಷಗಳ ದ್ವಂದ್ವ ನೀತಿಯನ್ನು ತರಾಟೆಗೆ ತೆಗೆದುಕೊಂಡ ಪಾಠಕ್, ವಿರೋಧ ಪಕ್ಷಗಳು ಗೆದ್ದಾಗ ಚುನಾವಣಾ ಆಯೋಗವು ಅತ್ಯುತ್ತಮವಾಗಿ ಕೆಲಸ ಮಾಡಿದೆ ಎನ್ನುತ್ತಾರೆ. ಆದರೆ ಯಾವಾಗ ತಮ್ಮ ರಾಜಕೀಯ ನೆಲೆ ಕುಸಿಯುತ್ತಿದೆ ಮತ್ತು ಸೋಲು ಗ್ಯಾರಂಟಿ ಎಂದು ತಿಳಿಯುತ್ತದೆಯೋ, ಆಗ ಮುಖ ಉಳಿಸಿಕೊಳ್ಳಲು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಪ್ರಾರಂಭಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಎಸ್‌ಪಿ ಆಡಳಿತ ನೆನಪಿಸಿದ ಪಾಠಕ್
ಸಮಾಜವಾದಿ ಪಕ್ಷದ ಹಿಂದಿನ ಆಡಳಿತಾವಧಿಯಲ್ಲಿ ಗೂಂಡಾಗಳು ಮತ್ತು ಅಪರಾಧಿಗಳ ದರ್ಬಾರ್ ಇತ್ತು ಎಂಬುದನ್ನು ನೆನಪಿಸಿರುವ ಪಾಠಕ್, ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತದ ನಂತರ ಜನರು ಬಿಜೆಪಿಗೆ ಭಾರಿ ಬಹುಮತ ನೀಡಿದ್ದಾರೆ ಮತ್ತು ಸಾರ್ವಜನಿಕರ ಆಕ್ರೋಶ ಈಗ ಮುನ್ನೆಲೆಗೆ ಬರುತ್ತಿದೆ ಎಂದಿದ್ದಾರೆ(ಏಜೆನ್ಸೀಸ್).