ದೇಶ

ಸಿಎಂ ಕುರ್ಚಿ ಯಾರಿಗೆ? ವೇದಿಕೆಯಲ್ಲೇ ಅಚ್ಚರಿಯ ಘೋಷಣೆ ಮಾಡಿದ ಅಮಿತ್ ಷಾ; ಏನಿದರ ಒಳಮರ್ಮ? | BJP Akali Dal Alliance

ನವದೆಹಲಿ: ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಒಗ್ಗಟ್ಟಿನಿಂದ ಎದುರಿಸಲಿದ್ದು, ಈ ಮೈತ್ರಿಕೂಟದಲ್ಲಿ ಅಕಾಲಿ ದಳವೇ ದೊಡ್ಡಣ್ಣನ ಪಾತ್ರವನ್ನು ನಿರ್ವಹಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ (ನವೆಂಬರ್ 24) ಘೋಷಿಸಿದ್ದಾರೆ.

ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಎಸ್‌ಎಡಿ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​ ಮತ್ತು ಇತರ ಹಿರಿಯ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಷಾ, ಸಹಜವಾಗಿಯೇ ಅಕಾಲಿ ದಳವು ದೊಡ್ಡಣ್ಣನ ಪಾತ್ರವನ್ನು ನಿರ್ವಹಿಸಲಿದ್ದು, ಎರಡು ಪಕ್ಷಗಳು ಒಟ್ಟಾಗಿ ರಾಜ್ಯದ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಅಕಾಲಿ ದಳವು ಹಿರಿಯ ಪಾಲುದಾರನ ಸ್ಥಾನದಲ್ಲಿರಲಿದೆ ಎಂದು ಸ್ಪಷ್ಟಪಡಿಸಿದರು.

ಪಂಜಾಬ್ ಸಿಎಂ ಅಕಾಲಿ ದಳದವರೇ ಆಗ್ತಾರೆ: ಅಮಿತ್ ಷಾ ಸ್ಪಷ್ಟನೆ

ಪಂಜಾಬ್‌ನಲ್ಲಿ ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಮಿತ್ ಷಾ, ಪಂಜಾಬ್‌ನ ಮುಖ್ಯಮಂತ್ರಿ ಹುದ್ದೆ ಶಿರೋಮಣಿ ಅಕಾಲಿ ದಳಕ್ಕೇ ಸಿಗಲಿದೆ ಎಂದು ಖಚಿತಪಡಿಸಿದರು. ಮೈತ್ರಿಕೂಟದಲ್ಲಿ ಯಾರು ದೊಡ್ಡಣ್ಣನ ಪಾತ್ರದಲ್ಲಿರುತ್ತಾರೋ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ನೇರವಾಗಿ ಹೇಳಿದರು.

ಆರು ವರ್ಷಗಳ ಸುದೀರ್ಘ ಅಂತರದ ನಂತರ 2027ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎಸ್‌ಎಡಿ ತಮ್ಮ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಅವರ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಬಿಜೆಪಿ ಮತ್ತು ಎಸ್‌ಎಡಿ ನಾಯಕರು ಈ ಸಭೆಯಲ್ಲಿ ನಿರ್ಧರಿಸಿದ್ದಾರೆ. ಇಂದಿನಿಂದ ಅಕಾಲಿ ದಳವು ರಾಜಕೀಯದಲ್ಲಿ ಎನ್‌ಡಿಎಯ ಅಧಿಕೃತ ಮಿತ್ರಪಕ್ಷವಾಗಿ ಕಾರ್ಯನಿರ್ವಹಿಸಲಿದೆ ಎಂದು ಷಾ ತಿಳಿಸಿದರು. 2020ರ ಸೆಪ್ಟೆಂಬರ್‌ನಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಅಕಾಲಿ ದಳವು ಎನ್‌ಡಿಎಯಿಂದ ಹೊರಬಂದಿತ್ತು ಮತ್ತು ಹರ್‌ಸಿಮ್ರತ್ ಕೌರ್ ಬಾದಲ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಕೇಂದ್ರ ಸರ್ಕಾರ ಆ ಕಾಯ್ದೆಗಳನ್ನು ಹಿಂಪಡೆದಿತ್ತು.

ಮಾದಕವಸ್ತು ಮುಕ್ತ ಪಂಜಾಬ್ ಮತ್ತು ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ!

ಪಂಜಾಬ್‌ಗೆ ಸಂಬಂಧಿಸಿದ ಹಲವು ಗಂಭೀರ ವಿಷಯಗಳ ಕುರಿತು ಉಭಯ ಪಕ್ಷಗಳು ಚರ್ಚಿಸಿ ಒಮ್ಮತಕ್ಕೆ ಬಂದಿವೆ ಎಂದು ಗೃಹ ಸಚಿವರು ತಿಳಿಸಿದರು. ಪಂಜಾಬ್ ಅನ್ನು ಮಾದಕವಸ್ತು ಮುಕ್ತಗೊಳಿಸುವುದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವುದು, ಗಡಿ ರಾಜ್ಯದಲ್ಲಿ ಭದ್ರತೆಯನ್ನು ಖಾತ್ರಿಪಡಿಸುವುದು ಹಾಗೂ ಕ್ರಿಮಿನಲ್ ಗ್ಯಾಂಗ್‌ಗಳನ್ನು ನಿರ್ಮೂಲನೆ ಮಾಡುವುದು ಮೈತ್ರಿಕೂಟದ ಮೊದಲ ಆದ್ಯತೆಯಾಗಿದೆ ಎಂದರು. ಎಲ್ಲೆಲ್ಲಿ ಎನ್‌ಡಿಎ ಸರ್ಕಾರವಿದೆಯೋ ಅಲ್ಲೆಲ್ಲಾ ಕಾನೂನು ಮತ್ತು ಸುವ್ಯವಸ್ಥೆ ಅತ್ಯುತ್ತಮವಾಗಿರುವುದು ಬಿಜೆಪಿ ಮತ್ತು ಎನ್‌ಡಿಎಯ ದೊಡ್ಡ ಹೆಗ್ಗುರುತಾಗಿದೆ. ಡ್ರಗ್ಸ್ ಮುಕ್ತ ಪಂಜಾಬ್ ನಿರ್ಮಾಣ, ಗಡಿ ರಾಜ್ಯಕ್ಕೆ ಭದ್ರತೆ ಒದಗಿಸಲು ಕಾನೂನು ಸುವ್ಯವಸ್ಥೆ ಸರಿಪಡಿಸುವುದು ಮತ್ತು ಗ್ಯಾಂಗ್‌ಗಳನ್ನು ಮಟ್ಟಹಾಕುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಎರಡೂ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಪ್ರಮುಖ ವಿಷಯವಾಗಿರಲಿದೆ ಎಂದು ಅಮಿತ್ ಷಾ ಭರವಸೆ ನೀಡಿದರು.

ಆಪ್ ಸರ್ಕಾರದ ವಿರುದ್ಧ ವಾಗ್ದಾಳಿ!

ಇದೇ ಸಂದರ್ಭದಲ್ಲಿ ಪಂಜಾಬ್‌ನ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಷಾ, ಪಂಜಾಬ್ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಆಪ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರಸ್ತುತ ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಸರ್ಕಾರವು ಒಂದು ರೀತಿಯಲ್ಲಿ ಭರವಸೆಗಳನ್ನು ಮುರಿದ ಸರ್ಕಾರವಾಗಿದೆ. ತಾನು ನೀಡಿದ ಯಾವೊಂದು ಭರವಸೆಯನ್ನು ಇಲ್ಲಿಯವರೆಗೂ ಈಡೇರಿಸಿಲ್ಲ, ಪಂಜಾಬ್ ಜನತೆ ಇನ್ನೂ ಕಾಯುತ್ತಲೇ ಇದ್ದಾರೆ ಎಂದು ಷಾ ಟೀಕಿಸಿದರು. ಸಿಖ್ ಗುರುಗಳಿಗೆ ಅವಮಾನ ಮಾಡಿದವರನ್ನು ಬಿಜೆಪಿ ಮತ್ತು ಎಸ್‌ಎಡಿ ಮೈತ್ರಿಕೂಟ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ-ಎಸ್‌ಎಡಿ ಮೈತ್ರಿಯು ರಾಜ್ಯದಲ್ಲಿ ಬದಲಾವಣೆ ತರುವ ಜನರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲಿದೆ ಎಂದ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತದಾರರು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಲಿದ್ದು, 2027ರ ಚುನಾವಣೆಯಲ್ಲಿ ಪ್ರಚಂಡ ಜನಾದೇಶ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು(ಏಜೆನ್ಸೀಸ್​).