ಅಜಿತ್ ನಿಧನ ಕೇವಲ ಆಕಸ್ಮಿಕ, ಇದರಲ್ಲಿ ರಾಜಕೀಯ ಬೇಡ: ಸೋದರಳಿಯನ ಸಾವಿನ ನಂತರ ಮೌನ ಮುರಿದ ಶರದ್ ಪವಾರ್
ಮುಂಬೈ: ಮಹಾರಾಷ್ಟ್ರ ರಾಜಕಾರಣದ ದಿಗ್ಗಜ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ ಇಡೀ ದೇಶವೇ ಆಘಾತದಲ್ಲಿದೆ. ಈ ಬೆನ್ನಲ್ಲೇ ಹಿರಿಯ ನಾಯಕ ಶರದ್ ಪವಾರ್(Sharad Pawar) ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕೇವಲ ಒಂದು ದುರದೃಷ್ಟಕರ ಅಪಘಾತ, ಇದರಲ್ಲಿ ಯಾವುದೇ ರಾಜಕೀಯ ಹುಡುಕುವುದು ಬೇಡ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಸಹಾಯಹಸ್ತ ಚಾಚಲಾಗದ ಅಸಹಾಯಕ ಸ್ಥಿತಿ
ಸುದ್ದಿಗಾರರೊಂದಿಗೆ ಮಾತನಾಡಿದ 85 ವರ್ಷದ ಹಿರಿಯ ಮುತ್ಸದ್ದಿ ಶರದ್ ಪವಾರ್, ಮಹಾರಾಷ್ಟ್ರ ಇಂದು ಒಬ್ಬ ಸಮರ್ಥ ನಾಯಕನನ್ನು ಕಳೆದುಕೊಂಡಿದೆ. ಅಜಿತ್ ನನ್ನ ಕಣ್ಣೆದುರೇ ಬೆಳೆದವನು. ಈ ನಷ್ಟವನ್ನು ತುಂಬಲು ಅಸಾಧ್ಯ. ವಿಮಾನ ಪತನವಾದ ಸುದ್ದಿ ಕೇಳಿದಾಗ ನಾನು ಅಸಹಾಯಕನಾಗಿದ್ದೆ. ಕೆಲವು ಘಟನೆಗಳ ಹಿಂದೆ ಯಾವುದೇ ರಾಜಕೀಯ ಇರುವುದಿಲ್ಲ, ಇದು ಕೂಡ ಅಂತಹದ್ದೇ ಒಂದು ಆಕಸ್ಮಿಕ ಎಂದು ಸ್ಪಷ್ಟಪಡಿಸಿದ್ದಾರೆ.
ಇದೊಂದು ಆಕಸ್ಮಿಕ, ರಾಜಕೀಯ ಬೇಡ
ನಾನು ಮಾಧ್ಯಮಗಳಲ್ಲಿ ಮತ್ತು ಕೆಲವು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿರುವ ಮಾತುಗಳನ್ನು ಗಮನಿಸಿದ್ದೇನೆ. ಈ ಘಟನೆಯ ಹಿಂದೆ ಯಾವುದೋ ಸಂಚು ಅಥವಾ ರಾಜಕೀಯ ಉದ್ದೇಶವಿದೆ ಎಂದು ಕೆಲವರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಾನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಅಜಿತ್ ನಿಧನವು ಕೇವಲ ಒಂದು ದುರದೃಷ್ಟಕರ ಅಪಘಾತವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಹುಡುಕುವುದು ಬೇಡ. ಈ ಶೋಕದ ಸಮಯದಲ್ಲಿ ನಾವು ಸಂಚುಗಳನ್ನು ಹುಡುಕುವ ಬದಲು, ಅಗಲಿದ ಜೀವಗಳಿಗೆ ಗೌರವ ನೀಡೋಣ ಎಂದು ಶರದ್ ಪವಾರ್ ಹೇಳಿದ್ದಾರೆ.
ಅಜಿತ್ ನನ್ನ ಕಣ್ಣೆದುರೇ ಬೆಳೆದವನು
ಅಜಿತ್ ಪವಾರ್ ಕೇವಲ ನನ್ನ ಸೋದರಳಿಯನಲ್ಲ, ಅವನು ಈ ಮಣ್ಣಿನ ಮಗ. ರಾಜಕೀಯದಲ್ಲಿ ನಾವು ಭಿನ್ನ ದಾರಿಗಳನ್ನು ಆರಿಸಿಕೊಂಡಿರಬಹುದು. ಆದರೆ ನಮ್ಮ ನಡುವಿನ ಕೌಟುಂಬಿಕ ಸಂಬಂಧ ಎಂದಿಗೂ ಮುರಿದಿರಲಿಲ್ಲ. ಅವನು ಅತ್ಯಂತ ಕಠಿಣ ಪರಿಶ್ರಮಿ ಮತ್ತು ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದ ನಾಯಕನಾಗಿದ್ದ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ಅವನು ಹಗಲಿರುಳು ಶ್ರಮಿಸಿದ್ದಾನೆ. ಅವನ ನಿಧನವು ತುಂಬಲಾರದ ನಷ್ಟ ಎಂದು ಪವಾರ್ ಕಂಬನಿ ಮೀಡಿದಿದ್ದಾರೆ.
ತನಿಖೆ ನಡೆಯಲಿ
ವಿಮಾನ ಪತನಕ್ಕೆ ತಾಂತ್ರಿಕ ಕಾರಣಗಳಿವೆಯೇ ಅಥವಾ ಹವಾಮಾನ ಕಾರಣವೇ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತಿವೆ. ಸತ್ಯಾಸತ್ಯತೆ ಹೊರಬರಲಿ, ಆದರೆ ಅಲ್ಲಿಯವರೆಗೆ ಯಾರೂ ಇಲ್ಲದ ಸಲ್ಲದ ಊಹಾಪೋಹಗಳನ್ನು ಹಬ್ಬಿಸಬಾರದು ಎಂದು ನಾನು ವಿನಂತಿಸುತ್ತೇನೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.
ನನ್ನ ಇಡೀ ಕುಟುಂಬ ಇಂದು ಶೋಕ ಸಾಗರದಲ್ಲಿದೆ. ಪ್ರಧಾನಮಂತ್ರಿ ಮೋದಿಜಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನನಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಈ ಕಷ್ಟದ ಸಮಯದಲ್ಲಿ ರಾಜ್ಯದ ಜನತೆ ನಮ್ಮ ಕುಟುಂಬದ ಜೊತೆಗಿರಲಿ ಎಂದು ಆಶಿಸುತ್ತೇನೆ ಎಂದು ಶರದ್ ಪವಾರ್ ಹೇಳಿದ್ದಾರೆ.
ವಿರೋಧ ಪಕ್ಷಗಳ ಸಂಚಿನ ಆರೋಪಕ್ಕೆ ತಿರುಗೇಟು
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಸಂಜಯ್ ರಾವತ್ ಅವರಂತಹ ನಾಯಕರು ಅಜಿತ್ ಪವಾರ್ ಅವರು ಬಿಜೆಪಿ ಬಿಡಲು ನಿರ್ಧರಿಸಿದ್ದರಿಂದ ಈ ಘಟನೆ ನಡೆದಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹಿಸಿದ್ದರು. ಆದರೆ ಶರದ್ ಪವಾರ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತನಿಖೆ ನಡೆಯಲಿ, ಆದರೆ ಈ ಶೋಕದ ಸಮಯದಲ್ಲಿ ಸಂಚುಗಳನ್ನು ಹುಡುಕುವುದು ಸರಿಯಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ದುರಂತ ಹೇಗಾಯಿತು?
ಜಿಲ್ಲಾ ಪರಿಷತ್ ಚುನಾವಣೆಯ ಪ್ರಚಾರ ಸಭೆಗಳು ಬಾರಾಮತಿಯಲ್ಲಿ ನಡೆಯುತ್ತಿರುವ ಹಿನ್ನಲೆ ಅಜಿತ್ ಪವಾರ್ ಬುಧವಾರ (ಜ.28) ಬೆಳಿಗ್ಗೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಬಾರಾಮತಿಗೆ ತೆರಳುತ್ತಿದ್ದರು. ಈ ವೇಳೆ ವಿಮಾನವು ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದಾಗ, ಹಠಾತ್ ತಾಂತ್ರಿಕ ದೋಷ ಸಂಭವಿಸಿದೆ. ಪೈಲಟ್ ನಿಯಂತ್ರಣ ಕಳೆದುಕೊಂಡು ಕಾರಣ ವಿಮಾನ ಅಪಘಾತಕ್ಕೀಡಾಯಿತು.
ಪ್ರಾಥಮಿಕ ವರದಿಗಳ ಪ್ರಕಾರ, ಅಜಿತ್ ಪವಾರ್ ಸೇರಿದಂತೆ ಎಲ್ಲಾ ಆರು ಮಂದಿ ಪ್ರಯಾಣಿಕರು ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮೂಲಗಳು ದೃಢಪಡಿಸಿವೆ.
ಒಂದಾಗುವ ಮುನ್ಸೂಚನೆ ಇತ್ತೇ..?
ಕೇವಲ ಎರಡು ದಿನಗಳ ಹಿಂದೆಯಷ್ಟೇ ಶರದ್ ಪವಾರ್ ಮತ್ತು ಅಜಿತ್ ಪವಾರ್ ಬಣಗಳು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದೇ ಚಿಹ್ನೆಯಡಿ ಸ್ಪರ್ಧಿಸಲು ನಿರ್ಧರಿಸಿದ್ದವು. ಈ ವಿಲೀನದ ಪ್ರಕ್ರಿಯೆ ಚಾಲ್ತಿಯಲ್ಲಿದ್ದಾಗಲೇ ಸಂಭವಿಸಿದ ಈ ದುರಂತವು ಪವಾರ್ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಎನ್‌ಸಿಪಿ ಕಾರ್ಯಕರ್ತರಿಗೆ ದೊಡ್ಡ ಆಘಾತ ನೀಡಿದೆ.
ಅಂತಿಮ ಸಂಸ್ಕಾರದ ವಿವರ
ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಗುರುವಾರ (ಜನವರಿ 29) ಬಾರಾಮತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಕೂಡ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆಯಿದೆ,(ಏಜೆನ್ಸೀಸ್).