ಸುನೇತ್ರಾ ಪವಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು. 
ದೇಶ

ಅಜಿತ್ ಪವಾರ್ ಪರ್ವ ಅಂತ್ಯ; ಮಹಾರಾಷ್ಟ್ರದ ಮೊದಲ ಮಹಿಳಾ ಡಿಸಿಎಂ ಆಗಿ ಸುನೇತ್ರಾ ಪವರ್ ಪ್ರಮಾಣ ವಚನ | Sunetra Pawar

ಮುಂಬೈ: ಬಾರಾಮತಿಯಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದ ಎನ್​ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಇಂದು(ಜ. 31) ಮಹಾರಾಷ್ಟ್ರದ ಮೊದಲ ಮಹಿಳಾ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಂಜೆ 5 ಗಂಟೆಗೆ ಮಹಾರಾಷ್ಟ್ರದ ರಾಜ್ಯಪಾಲರ ಕಚೇರಿ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಈ ವೇಳೆ ಸಿಎಂ ದೇವೇಂದ್ರ ಫಡ್ನವೀಸ್, ಡಿಸಿಎಂ ಏಕನಾಥ್ ಶಿಂಧೆ ಹಾಗೂ ಎನ್​ಸಿಪಿ ಪಕ್ಷದ ನಾಯಕರಾದ ಪ್ರಫುಲ್ ಪಟೇಲ್, ಸುನೀಲ್ ತಟ್ಕರೆ, ಛಗನ್ ಭುಜಬಲ್ ಸೇರಿ ಪಕ್ಷದ ಶಾಸಕರು, ಮುಖಂಡರು ಉಪಸ್ಥಿತರಿದ್ದರು.
ಬೆಳಗ್ಗೆ ಮುಂಬೈ ವಿಧಾನ ಭವನದಲ್ಲಿ ನಡೆದ ಎನ್​ಸಿಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಪಕ್ಷದ ನಾಯಕ ಸಚಿವ ಛಗನ್ ಭುಜಬಲ್, ಸುನೇತ್ರಾ ಅವರನ್ನು ಹೆಸರನ್ನು ಪ್ರಸ್ತಾಪಿಸಿದ್ರೆ, ಉಳಿದ ಎಲ್ಲಾ ಶಾಸಕರು ಅನುಮೋದಿಸಿದ್ದರು.
ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಇತಿಹಾಸದಲ್ಲಿ ಈ ಉನ್ನತ ಹುದ್ದೆ ಅಲಂಕರಿಸಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸುನೇತ್ರಾ ಪವಾರ್ ಪ್ರಸ್ತುತ ರಾಜ್ಯಸಭಾ ಸಂಸದೆಯಾಗಿದ್ದು, ಮಹಾರಾಷ್ಟ್ರ ವಿಧಾನಸಭೆಯ ಎರಡೂ ಸದನಗಳ ಸದಸ್ಯರಲ್ಲ. ಆದಾಗ್ಯೂ, ಬುಧವಾರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವನ್ನಪ್ಪಿದ ನಂತರ ಪುಣೆ ಜಿಲ್ಲೆಯ ಬಾರಾಮತಿ ವಿಧಾನಸಭಾ ಸ್ಥಾನ ಖಾಲಿಯಾಗಿದೆ. ಅಲ್ಲಿಂದ ಅವರು ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗುವ ಸಾಧ್ಯೆತೆ ಇದೆ (ಏಜೆನ್ಸೀಸ್).