Baramati plane crash | ತನಿಖೆಗೆ ಜಯ್ ಪವಾರ್ ಆಗ್ರಹ; ರೋಹಿತ್ ಪರ ಸುಪ್ರಿಯಾ ಸುಳೆ ಬ್ಯಾಟಿಂಗ್
ಪುಣೆ: ಇತ್ತೀಚೆಗೆ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ( Baramati plane crash) ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೊನೆಯುಸಿರೆಳೆದಿದ್ದು, ಈ ಘಟನೆಯ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಎಂದು ಅಜಿತ್ ದಾದಾ ಪುತ್ರ ಜಯ್ ಪವಾರ್ ಒತ್ತಾಯಿಸಿದ್ದಾರೆ.
ಈ ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಶಾಸಕ ರೋಹಿತ್ ಪವಾರ್ ಬೆನ್ನಿಗೆ ಸಂಸದೆ ಸುಪ್ರಿಯಾ ಸುಳೆ ನಿಂತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಯ್ ಪವಾರ್, ವಿಮಾನದಲ್ಲಿದ್ದ ಬ್ಲ್ಯಾಕ್ ಬಾಕ್ಸ್ನ್ನು ಅಷ್ಟು ಸುಲಭವಾಗಿ ನಾಶಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಮತ್ತು ಘಟನೆಯ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಕರೆ ನೀಡಿದ್ದಾರೆ.
ಈ ಅಪಘಾತದ ಬಗ್ಗೆ ಸಂಪೂರ್ಣ, ಪಾರದರ್ಶಕ ಮತ್ತು ಇರುವ ಸತ್ಯವನ್ನು ತಿಳಿದುಕೊಳ್ಳುವ ಹಕ್ಕು ಮಹಾರಾಷ್ಟ್ರದ ಜನರಿಗೆ ಇದ್ದು, ವಿಮಾನಯಾನ ಸಂಸ್ಥೆಯ ವಿಮಾನಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಅವುಗಳ ನಿರ್ವಹಣೆಯಲ್ಲಿನ ಗಂಭೀರ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಜಯ್ ಪವಾರ್ ಒತ್ತಾಯಿಸಿದರು.
ತನಿಖೆಯ ವೇಳೆ ನಿರ್ಲಕ್ಷ್ಯ ಅಥವಾ ದುಷ್ಕೃತ್ಯ ಕಂಡುಬಂದರೆ, ಅದಕ್ಕೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿರುವ ಅಜಿತ್ದಾದಾ ಪುತ್ರ, ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಾ ಮಿಸ್ ಯು ಡ್ಯಾಡ್ ಎಂದು ಬರೆದಿದ್ದಾರೆ.
ರೋಹಿತ್ ಪವಾರ್ ಆರೋಪಗಳಿಗೆ ಸುಪ್ರಿಯಾ ಸುಳೆ ಬೆಂಬಲ
ಅಜಿತ್ ಪವಾರ್ ವಿಮಾನ ಅಪಘಾತದ ಬಗ್ಗೆ ರೋಹಿತ್ ಪವಾರ್ ಮಾಡಿರುವ ಆರೋಪಗಳನ್ನು ಸಂಸದೆ ಸುಪ್ರಿಯಾ ಸುಳೆ ಬೆಂಬಲಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಘಟನೆಯಿಂದ ಇಡೀ ರಾಜ್ಯಕ್ಕೆ ಆಘಾತವಾಗಿದೆ, ರೋಹಿತ್ ಪವಾರ್ ಅನೇಕ ನಂಬಲಾರ್ಹ ಸಂಗತಿಗಳನ್ನು ಬಹಿರಂಗಪಡಿಸಿದ್ದು, ಅವುಗಳ ಕುರಿತಾಗಿ ತನಿಖೆ ಮಾಡಬೇಕಾಗಿದೆ ಎಂದು ಸುಳೆ ಹೇಳಿದ್ದಾರೆ.
ರೋಹಿತ್ ಪವಾರ್ ಹೇಳಿದ್ದೇನು...?
ಮುಂಬೈನಲ್ಲಿ ಮಾತನಾಡಿದ ಶಾಸಕ ಪವಾರ್, ವಿಮಾನದ ಇಂಧನ ಟ್ಯಾಂಕ್ ತುಂಬಿತ್ತು ಎಂದು ವರದಿಗಳು ಹೇಳಿವೆ. ಹೀಗಿದ್ದಾಗ ಇಂಧನವನ್ನು ಸಾಗಿಸುವ ಕಾರ್ಯಾಚರಣೆಯ ಅವಶ್ಯಕತೆ ಇರಲಿಲ್ಲ, ಅಗತ್ಯವಿದ್ದರೆ ಹೈದರಾಬಾದ್‌ನಲ್ಲಿ ಇಂಧನ ತುಂಬಿಸಬಹುದಿತ್ತು ಎಂದರು.
ಕಳಪೆ ಗೋಚರತೆಯ ಹೊರತಾಗಿಯೂ ವಿಮಾನ ಕಾರ್ಯನಿರ್ವಹಿಸಿದ್ದು ಏಕೆ ಎಂಬುದರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿರುವ ರೋಹಿತ್, ಇಂತಹ ಪರಿಸ್ಥಿತಿಗಳಲ್ಲಿ ಹಾರಾಟ ನಡೆಸುವ ಅಗತ್ಯವಿರಲ್ಲ, ಪರ್ಯಾಯ ಲ್ಯಾಂಡಿಂಗ್ ಆಯ್ಕೆಗಳು ಸೀಮಿತವಾಗಿದ್ದು, ವಿಮಾನವು ಮುಂದುವರಿಯುವ ಬದಲು ಮುಂಬೈಗೆ ಹಿಂತಿರುಗಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಇಂಧನದೊಂದಿಗೆ ವಿಮಾನವನ್ನು ಉದ್ದೇಶಪೂರ್ವಕವಾಗಿ ಉರುಳಿಸಲಾಗಿದೆ ಎಂದು ಆರೋಪಿಸಿರುವ ಎನ್‌ಸಿಪಿ ಶಾಸಕ, ಘಟನೆಯಲ್ಲಿ ಪೈಲಟ್ನ್ನು ಬಳಸಿಕೊಂಡಿರಬಹುದು ಎಂದು ಹೇಳಿದರು.
ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯ
ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡುರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಶಾಸಕ ಪವಾರ್ ಒತ್ತಾಯಿಸಿದ್ದು, ಸಚಿವರ ಮೇಲೆ ಯಾವುದೇ ನೇರ ಆರೋಪ ಮಾಡುತ್ತಿಲ್ಲ, ಆದರೆ ನಾಯ್ಡು ಮತ್ತು ವಿಎಸ್ಆರ್ ನಡುವೆ ನಿಕಟ ಸಂಬಂಧವಿದೆ ಎಂದರು.
ಸಿಬಿಐ ತನಿಖೆಗೆ ಸುನೇತ್ರಾ ಪವಾರ್ ಆಗ್ರಹ
ಅಜಿತ್ ಪವಾರ್ ಸಾವಿನ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ವಹಿಸಬೇಕೆಂದು ಡಿಸಿಎಂ ಸುನೇತ್ರಾ ಪವಾರ್ ನೇತೃತ್ವದ ಎನ್‌ಸಿಪಿ ನಿಯೋಗ ಒತ್ತಾಯಿಸಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ರನ್ನು ಭೇಟಿ ಮಾಡಿದ್ದ ಈ ನಿಯೋಗ, ಘಟನೆಯ ಸಮಗ್ರ ಮತ್ತು ಸ್ವತಂತ್ರ ತನಿಖೆಗೆ ಒತ್ತಾಯಿಸಿದೆ.
ಸಿಎಂ ಜೊತೆಗಿನ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎನ್‌ಸಿಪಿ (ಅಜಿತ್ ಪವಾರ್ ಬಣ) ಅಧ್ಯಕ್ಷ ಸುನಿಲ್ ತತ್ಕರೆ, ಘಟನೆಯ ಸಂಪೂರ್ಣ ತನಿಖೆಯನ್ನು ಸಿಬಿಐಗೆ ನೀಡುವಂತೆ ನಾವು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದು, ಇದನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾರಿಗೆ ಪತ್ರ ಬರೆದು, ಸಿಬಿಐ ತನಿಖೆ ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಹೇಳಿದರು(ಏಜೆನ್ಸೀಸ್).