ಅಜಿತ್ ಪವಾರ್ ಸಾವು ಆಕಸ್ಮಿಕವಲ್ಲ, ಅದೊಂದು ವ್ಯವಸ್ಥಿತ ಕೊಲೆ..? ಸಂಜಯ್ ರಾವತ್ ಸ್ಫೋಟಕ ಹೇಳಿಕೆ 
ದೇಶ

ಅಜಿತ್ ಪವಾರ್ ಸಾವು ಆಕಸ್ಮಿಕವಲ್ಲ, ಅದೊಂದು ವ್ಯವಸ್ಥಿತ ಕೊಲೆ..? ಸಂಜಯ್ ರಾವತ್ ಸ್ಫೋಟಕ ಹೇಳಿಕೆ | Sanjay Raut

ನವದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ಸುತ್ತ ಈಗ ಅನುಮಾನದ ಹುತ್ತ ಬೆಳೆಯುತ್ತಿದೆ. ದಾದಾ ಸಾವಿನ ಹಿಂದೆ ಅತೀಂದ್ರಿಯ ಶಕ್ತಿಗಳ ಕೈವಾಡವಿರುವ ಶಂಕೆ ಇದೆ ಎಂದು ಶಿವಸೇನೆ (UBT) ನಾಯಕ ಸಂಜಯ್ ರಾವತ್(Sanjay Raut) ಅನುಮಾನ ವ್ಯಕ್ತಪಡಿಸಿದ್ದಾರೆ. 
ಈ ಘಟನೆಯನ್ನು ಅವರು ವಿವಾದಾತ್ಮಕ ಜಸ್ಟಿಸ್ ಲೋಯಾ ಪ್ರಕರಣಕ್ಕೆ ಹೋಲಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಸಂಜಯ್ ರಾವತ್ ಎತ್ತಿದ 5 ಪ್ರಮುಖ ಪ್ರಶ್ನೆಗಳು

ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ರಾವತ್, ಅಜಿತ್ ದಾದಾ ಅವರಂತಹ ಪ್ರಭಾವಿ ನಾಯಕ ವಿಮಾನ ಅಪಘಾತದಲ್ಲಿ ಸಾಯುವುದು ಸಾಮಾನ್ಯವಲ್ಲ. ಇದರ ಹಿಂದೆ ಏನೋ ನಿಗೂಢತೆ ಇದೆ. ತೆರೆಯ ಮರೆಯಲ್ಲಿ ದೊಡ್ಡ ಸಂಚು ನಡೆದಿದೆ ಎಂದು ನೇರ ಆರೋಪ ಮಾಡಿದ್ದಾರೆ.
ಮನೆಗೆ ಮರಳುವ ಇಚ್ಛೆ ಮತ್ತು ಬೆದರಿಕೆ
ಅಜಿತ್ ಪವಾರ್ ಅವರು ಶರದ್ ಪವಾರ್ ನೇತೃತ್ವದ ತಮ್ಮ ಹಳೆಯ ಪಕ್ಷಕ್ಕೆ (NCP) ಮರಳಲು ಬಯಸಿದ್ದರು. ಈ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿಯವರು ಅವರಿಗೆ ಹಳೆಯ ಸಿಂಚನ್ ಹಗರಣದ ಫೈಲ್‌ಗಳನ್ನು ತೋರಿಸಿ ಬೆದರಿಕೆ ಹಾಕಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

10 ದಿನಗಳ ರಹಸ್ಯ

ಸಿಂಚನ್ ಹಗರಣದ ಬಗ್ಗೆ ಅಜಿತ್ ಪವಾರ್ ಅವರು ತಿರುಗೇಟು ನೀಡಿದ ಕೇವಲ 10 ದಿನಗಳಲ್ಲೇ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದು ಕೇವಲ ಕಾಕತಾಳೀಯವೇ? ಎಂದು ರಾವತ್ ಪ್ರಶ್ನಿಸಿದ್ದಾರೆ.

ಜಸ್ಟಿಸ್ ಲೋಯಾ ಪ್ರಕರಣದ ನೆನಪು

ಮುಂದುವರೆದು ಮಾತನಾಡಿದ ರಾವತ್​, ಈ ಇಡೀ ಘಟನೆಯು ಈ ಹಿಂದೆ ನಡೆದ ಜಸ್ಟಿಸ್ ಲೋಯಾ ಅವರ ನಿಗೂಢ ಸಾವಿನ ಪ್ರಕರಣವನ್ನು ನೆನಪಿಸುತ್ತಿದೆ. ಯಾರೋ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಪಕ್ಷದವರಲ್ಲೇ ಸಂಶಯ

ಅಜಿತ್ ಪವಾರ್ ಅವರ ಸ್ವಂತ ಪಕ್ಷದ ನಾಯಕರು ಮತ್ತು ಬೆಂಬಲಿಗರೇ ಈಗ ಈ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ರಾವತ್ ಮಾಹಿತಿ ನೀಡಿದ್ದಾರೆ.

ಏನಿದು ಘಟನೆ..?

ಕಳೆದ ಜನವರಿ 28 ರಂದು ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಅಜಿತ್ ಪವಾರ್ ಅವರ ಲಿಯರ್‌ಜೆಟ್ 45 ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ರನ್‌ವೇ ಬಳಿ ಪತನಗೊಂಡು ಬೆಂಕಿ ಹೊತ್ತಿಕೊಂಡಿತ್ತು. ಈ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದರು. ಸದ್ಯ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಮತ್ತು ಸಿಐಡಿ ತನಿಖೆ ನಡೆಸುತ್ತಿವೆ.

ರಾಜಕೀಯ ಸಂಚಲನ

ರಾವತ್ ಅವರ ಈ ಹೇಳಿಕೆಯು ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದಲ್ಲಿ (ಮಹಾಯುತಿ) ಬಿರುಗಾಳಿ ಎಬ್ಬಿಸಿದೆ. ಒಂದು ಕಡೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳು ಈ ಸಾವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿವೆ,(ಏಜೆನ್ಸೀಸ್).