ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ದುರ್ಮರಣ
- ಇಂದು (ಜ.28) ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತ
- ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಮಂದಿ ದುರ್ಮರಣ
- ಸುಟ್ಟು ಕರಕಲಾದ ವಿಮಾನದಲ್ಲಿ ಅಜಿತ್ ಪವಾರ್‌ರನ್ನು ಗುರುತಿಸಿದ್ದು ಅವರ ವಾಚ್
ಪುಣೆ: ಇಂದು (ಜ.28) ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ( Ajit Pawar ) ಸೇರಿದಂತೆ ಐವರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮುಂಬೈನಿಂದ ನಿಗದಿತ ರಾಜಕೀಯ ರ್ಯಾಲಿಗಳಿಗಾಗಿ ವಿಮಾನ ಹೊರಟಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಪವಾರ್ ಅವರು ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬೇಕಿತ್ತು. ಆದರೆ, ವಿಧಿಯ ಘೋರ ಆಟಕ್ಕೆ ಇಂದು ಸುಟ್ಟು ಭಸ್ಮವಾಗಿದ್ದಾರೆ.
ಮುಂಬೈನಿಂದ ಬೆಳಗ್ಗೆ 8.10 ಕ್ಕೆ ಹೊರಟ ವಿಮಾನ 8.50ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, 8.45ರ ಸುಮಾರಿಗೆ ವಿಮಾನ ಪತನಗೊಂಡಿದೆ. ಬೆಳಗ್ಗೆ ಪುಣೆ ಮತ್ತು ಬಾರಾಮತಿ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿತ್ತು. ಇದರಿಂದ ಪೈಲಟ್ಗೆ ಏನು ಕಾಣುತ್ತಿರಲಿಲ್ಲ. ವಿಮಾನ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಪೈಲಟ್ ಶಾಂಭವಿ ಪಾಠಕ್, ಸ್ವಯಂ ಚಾಲಿತ ಮತ್ತು ವಿಸುವಲ್ ಲ್ಯಾಂಡಿಂಗ್ಗೆ ಪ್ರಯತ್ನಿಸಿದರು. ಲ್ಯಾಂಡಿಂಗ್ ಮಾಡುವಾಗ ವಿಮಾನ ನೇರವಾಗಿ ರನ್ವೇ ಸಮೀಪ ಬರಲಿಲ್ಲ ಹೀಗಾಗಿ ವಿಮಾನ, ಒಂದು ದೊಡ್ಡ ಟರ್ನ್ ತೆಗೆದುಕೊಂಡಿತು. ಇದರಿಂದ ಮೊದಲ ಲ್ಯಾಂಡಿಂಗ್ ಫೇಲ್ ಆಯಿತು. ದಟ್ಟ ಮಂಜಿನಿಂದಾಗಿ ವಿಮಾನವನ್ನು ರನ್ವೇಗೆ ಸರಿಯಾಗಿ ಹೊಂದಿಸುವುದು ತುಂಬಾ ಕಷ್ಟಕರವಾಗಿತ್ತು. ಮೊದಲ ಪ್ರಯತ್ನ ವಿಫಲವಾದಾಗ ಪೈಲಟ್ ಎರಡನೇ ಲ್ಯಾಂಡಿಂಗ್ ಪ್ರಯತ್ನವನ್ನು ಮಾಡಿದರು. ಎರಡನೇ ಪ್ರಯತ್ನದ ವೇಳೆ ಪೈಲಟ್ ಮೇಡೇ ಕರೆಯನ್ನು ನೀಡಿದರು. ಮೇಡೇ ಕರೆ ಎಂದರೆ, ವಿಮಾನ ಅಥವಾ ಹಡಗುಗಳಲ್ಲಿ ಗಂಭೀರ ತುರ್ತು ಸಂದರ್ಭದಲ್ಲಿ ರೇಡಿಯೋ ಮೂಲಕ ನೀಡುವ ಅಂತಾರಾಷ್ಟ್ರೀಯ ತುರ್ತು ಸಿಗ್ನಲ್ ಅಥವಾ ಸಹಾಯಕ್ಕಾಗಿ ಮಾಡುವ ಕರೆಯಾಗಿದೆ. ಎರಡನೇ ಪ್ರಯತ್ನದ ಲ್ಯಾಂಡಿಂಗ್ ವೇಳೆ ವಿಮಾನವು ರನ್ವೇ ಅಂಚಿನ ಬಳಿಯೇ ನೆಲಕ್ಕೆ ಅಪ್ಪಳಿಸಿತು. ಅಂದಾಜು 100 ಅಡಿ ಎತ್ತರದಲ್ಲಿ ಇರುವಾಗಲೇ ವಿಮಾನವೂ ತನ್ನ ನಿಯಂತ್ರಣವನ್ನು ಕಳೆದುಕೊಂಡಿತು. ನಿಯಂತ್ರಣ ತಪ್ಪಿದ ವಿಮಾನ, ರನ್ವೇ ತಲುಪುವ ಮುಂಚೆಯೇ ನೆಲಕ್ಕೆ ಅಪ್ಪಳಿಸಿತು. ನೆಲಕ್ಕೆ ಅಪ್ಪಳಿಸಿದ ಪರಿಣಾಮ, ತಕ್ಷಣ ಆ ಸ್ಥಳದಲ್ಲಿ ದೊಡ್ಡ ಸ್ಫೋಟ ಸಂಭವಿಸಿತು. ಇದಾದ ಬಳಿಕ ಅನೇಕ ಸಣ್ಣ ಸ್ಫೋಟಗಳು ಕೂಡ ಸಂಭವಿಸಿದವು. ಸರಣಿ ಸ್ಫೋಟಗಳಿಂದಾಗಿ ವಿಮಾನವು ಬೆಂಕಿಯ ಉಂಡೆಯಾಗಿ ಸ್ಥಳದಲ್ಲೇ ಹೊತ್ತಿ ಉರಿಯಿತು.
ಕೈ ಗಡಿಯಾರದಿಂದ ಅಜಿತ್ ಪವಾರ್ ಮೃತದೇಹದ ಗುರುತು ಪತ್ತೆ
ಅಪಘಾತದ ಸ್ಥಳದ ದೃಶ್ಯಗಳು, ವಿಮಾನವು ಸಂಪೂರ್ಣವಾಗಿ ನಾಶವಾಗಿರುವುದನ್ನು ತೋರಿಸಿವೆ. ದಟ್ಟ ಹೊಗೆ ಮತ್ತು ಜ್ವಾಲೆಗಳು ವಿಮಾನದ ಅವಶೇಷಗಳನ್ನು ಆವರಿಸಿದ್ದು, ಆ ಪ್ರದೇಶದಾದ್ಯಂತ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸದ್ಯ ರಕ್ಷಣ ಕಾರ್ಯಾಚರಣೆ ನಡೆದಿದೆ. ಈ ವೇಳೆ ಮೃತದೇಹಗಳನ್ನು ಗುರುತಿಸುವುದು ತುಂಬಾ ಕಷ್ಟಕರವಾಗಿತ್ತು. ಏಕೆಂದರೆ, ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದವು. ಆದರೆ, ಅಜಿತ್ ಪವಾರ್ ಅವರು ಧರಿಸಿದ ಕೈಗಡಿಯಾರದ ಸಹಾಯದಿಂದ ಮೃತದೇಹವನ್ನು ಪತ್ತೆ ಮಾಡಲಾಯಿತು. ಕಾಕತಾಳೀಯ ಏನೆಂದರೆ, ಅಜಿತ್ ಪವಾರ್ ಬಣದ ಎನ್ಸಿಪಿ ಪಕ್ಷದ ಗುರುತು ಕೂಡ ಗಡಿಯಾರವೇ. ದುರಂತದಲ್ಲಿ ಸಾವಿಗೀಡಾದ ಇತರ ಪ್ರಯಾಣಿಕರನ್ನು ಅವರ ಬಟ್ಟೆ ಮತ್ತು ಅವಶೇಷಗಳಿಂದ ವಶಪಡಿಸಿಕೊಂಡ ವಸ್ತುಗಳ ಮೂಲಕ ಗುರುತಿಸಲಾಯಿತು.
ಅಂದಹಾಗೆ, ಪವಾರ್ ಅವರು ತಮ್ಮ ವೈಯಕ್ತಿಕ ಭದ್ರತಾ ಅಧಿಕಾರಿ, ಒಬ್ಬ ಸಹಾಯಕ ಮತ್ತು ಇಬ್ಬರು ಪೈಲಟ್‌ಗಳೊಂದಿಗೆ ಪ್ರಯಾಣಿಸುತ್ತಿದ್ದರು. ಐದು ಮಂದಿ ಪ್ರಯಾಣಿಕರಲ್ಲಿ ಯಾರೊಬ್ಬರು ಬದುಕುಳಿದಿಲ್ಲ. ಈ ಘಟನೆಯ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆ ಆರಂಭಿಸಿದೆ. ವಿಮಾನದ ಅಂತಿಮ ಕ್ಷಣಗಳನ್ನು ಪತ್ತೆಹಚ್ಚುವಲ್ಲಿ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ನಿರ್ಣಾಯಕ ಪಾತ್ರ ವಹಿಸುತ್ತವೆ. ಸದ್ಯ ತನಿಖೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಲಿವೆ.
ಇನ್ನು ಈ ವಿಮಾನ ಅಪಘಾತವು ಮಹಾರಾಷ್ಟ್ರದ ರಾಜಕೀಯ ವ್ಯವಸ್ಥೆಯನ್ನು ಆಘಾತಗೊಳಿಸಿದೆ. ಏಕೆಂದರೆ, 66 ವರ್ಷದ ಅಜಿತ್ ಪವಾರ್, ರಾಜ್ಯದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು ಮತ್ತು ಉಪಮುಖ್ಯಮಂತ್ರಿಯಾಗಿ ಆರನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದರು. ಆದರೆ, ಇಂದಿನ ದುರಂತ ರಾಜಕೀಯ ನಾಯಕರನ್ನು ಚಿಂತಿಸುವಂತೆ ಮಾಡಿದೆ. ರಾಜ್ಯದ ಜನರಿಗೆ ಪವಾರ್ ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಸಿಎಂ ದೇವೆಂದ್ರ ಫಡ್ನಾವೀಸ್ ಮೂರು ದಿನಗಳ ಶೋಕಾಚಾರಣೆಯನ್ನು ಘೋಷಿಸಿದ್ದಾರೆ, (ಏಜೆನ್ಸೀಸ್).