ಪುಣೆ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರ ಹಠಾತ್ ನಿಧನದಿಂದ ರಾಜ್ಯಾದ್ಯಂತ ಅವರ ಬೆಂಬಲಿಗರು ಆಘಾತಕ್ಕೊಳಗಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ನಾಗ್ಪುರದ ಎನ್‌ಸಿಪಿ ಕಾರ್ಯಕರ್ತನೊಬ್ಬ ಬಾರಾಮತಿಯ ನೀರಾ ನದಿ ದಂಡೆಯಲ್ಲಿ ತಲೆ ಬೋಳಿಸಿಕೊಂಡಿರುವ ವಿಡಿಯೋ ಸಧ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ.
ನಾಗ್ಪುರ ಜಿಲ್ಲೆಯ ಉಮ್ರೆಡ್ನ ಎನ್‌ಸಿಪಿ ಕಾರ್ಯಕರ್ತ ವಿಲಾಸ್ ಝೋಡಾಪೆ, 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಅಜಿತ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವವರೆಗೂ ತಮ್ಮ ಕೂದಲನ್ನು ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ, ಝೋಡಾಪೆ ತಮ್ಮ ನಾಯಕನ ಮೇಲಿನ ನಂಬಿಕೆಯಿಂದಾಗಿ ಕೂದಲನ್ನು ಕತ್ತರಿಸದೇ ಇಟ್ಟುಕೊಂಡಿದ್ದರು. ಆದರೆ, ಅವರ ಅಕಾಲಿಕ ಮರಣವು ಈ ಆಸೆಯನ್ನು ಈಡೇರಿಸಲಿಲ್ಲ.
ಝೋಡಾಪೆಗೆ ಅಜಿತ್ ಪವಾರ್ ಸಲಹೆ
ವರದಿಗಳ ಪ್ರಕಾರ, ನಾಗ್ಪುರದಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಝೋಡಾಪೆ ಅವರನ್ನು ಅಜಿತ್ ಭೇಟಿ ಮಾಡಿ ಅವರ ಉದ್ದನೆಯ ಕೂದಲನ್ನು ಗಮನಿಸಿ ಮುಖ್ಯಮಂತ್ರಿಯಾಗಲು ಸಾಂಕೇತಿಕ ಕಾರ್ಯಗಳಲ್ಲ, ಬದಲಾಗಿ ರಾಜಕೀಯ ಬಲ ಮತ್ತು ಸಂಖ್ಯೆಗಳು ಬೇಕಾಗುತ್ತವೆ. ಹಾಗಾಗಿ ಸಾರ್ವಜನಿಕ ಸೇವೆ ಮತ್ತು ಪಕ್ಷದ ಸಂಘಟನೆಯನ್ನು ಬಲಪಡಿಸುವತ್ತ ಗಮನಹರಿಸಿ ಎಂದು ಹೇಳಿದ್ದರಂತೆ.
ಆದಾಗ್ಯೂ, ಬುಧವಾರ (ಜ.28) ರ ಬೆಳಿಗ್ಗೆ ಅಜಿತ್ ಪವಾರ್ ಅವರನ್ನು ಭೇಟಿ ಮಾಡಲು ಝೋಡಾಪೆ ಮುಂಬೈಗೆ ಆಗಮಿಸಿದ್ದರು. ಈ ವೇಳೆ ವಿಮಾನ ಅಪಘಾತವಾದ ಸುದ್ಧಿ ತಿಳಿಯಿತು. ಈ ವಿಚಾರದಿಂದ ತೀವ್ರವಾಗಿ ಆಘಾತಗಗೊಂಡ ಝೋಡಾಪೆ ತಕ್ಷಣವೇ ಕುಟುಂಬದೊಂದಿಗೆ ಬಾರಾಮತಿಗೆ ತೆರಳಿ ಅಂತಿಮ ದರ್ಶನವನ್ನು ಪಡೆದಿದ್ದಾರೆ.
ಪವಾರ್ ಅವರ ಅಂತ್ಯಕ್ರಿಯೆ ನಂತರ ಝೋಡಾಪೆ ನೀರಾ ನದಿಯಲ್ಲಿ ತಲೆ ಬೋಳಿಸಿಕೊಳ್ಳುವ ಮೂಲಕ ಸ್ಮರಣಾರ್ಥ ಕಾರ್ಯವನ್ನು ಅರ್ಪಿಸಿದರು. ಈ ವೇಳೆ ಸ್ಥಳೀಯರೊಂದಿಗೆ ಮಾತನಾಡಿದ ಅವರು, ನಾಯಕನ ಮರಣದ ನಂತರ ಈ ಪ್ರತಿಜ್ಞೆಗೆ ಅರ್ಥವಿಲ್ಲ. ಹಾಗೆಯೇ ಈ ಕ್ರಿಯೆಯು ಪವಾರ್ ಅವರ ಜೀವನ ಮತ್ತು ಕೆಲಸಕ್ಕೆ ಗೌರವದ ಅಂತಿಮ ಸಂಕೇತವಾಗಿದೆ. ನಾನು ಯಾರಿಗಾಗಿ ಕೂದನನ್ನು ಬಿಟ್ಟಿದ್ದೆನೋ ಅವರೇ ಈಗ ನಮ್ಮೊಂದಿಗಿಲ್ಲ. ಇಲ್ಲಿ ನನ್ನ ತಲೆ ಬೋಳಿಸಿಕೊಳ್ಳುವ ಮೂಲಕ, ನಾನು ಅಜಿತ್ ದಾದಾ ಅವರ ಪರಂಪರೆಗೆ ತ್ಯಾಗವನ್ನು ಅರ್ಪಿಸುತ್ತೀದ್ದೇನೆ ಎಂದಿದ್ದಾರೆ.
ದುರಂತ ಹೇಗಾಯಿತು?
ಜಿಲ್ಲಾ ಪರಿಷತ್ ಚುನಾವಣೆಯ ಪ್ರಚಾರ ಸಭೆಗಳು ಬಾರಾಮತಿಯಲ್ಲಿ ನಡೆಯುತ್ತಿರುವ ಹಿನ್ನಲೆ ಅಜಿತ್ ಪವಾರ್ ಬುಧವಾರ (ಜ.28) ಬೆಳಿಗ್ಗೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಬಾರಾಮತಿಗೆ ತೆರಳುತ್ತಿದ್ದರು. ಈ ವೇಳೆ ವಿಮಾನವು ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದಾಗ, ಹಠಾತ್ ತಾಂತ್ರಿಕ ದೋಷ ಸಂಭವಿಸಿದೆ. ಪೈಲಟ್ ನಿಯಂತ್ರಣ ಕಳೆದುಕೊಂಡು ಕಾರಣ ವಿಮಾನ ಅಪಘಾತಕ್ಕೀಡಾಯಿತು.
ಪ್ರಾಥಮಿಕ ವರದಿಗಳ ಪ್ರಕಾರ, ಅಜಿತ್ ಪವಾರ್ ಸೇರಿದಂತೆ ಎಲ್ಲಾ ಆರು ಮಂದಿ ಪ್ರಯಾಣಿಕರು ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮೂಲಗಳು ದೃಢಪಡಿಸಿವೆ (ಏಜೆನ್ಸೀಸ್).