Ajit Pawar | ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್
ಪುಣೆ: ನಿನ್ನೆ (ಜನವರಿ 28-ಬುಧವಾರ) ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಪ್ರಯಾಣಿಕರು ಕೊನೆಯುಸಿರೆಳೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಕಸ್ಮಿಕ ಸಾವಿನ ವರದಿ (ಎಡಿಆರ್) ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುಣೆ ಗ್ರಾಮೀಣ ಪೊಲೀಸರು ಬಾರಾಮತಿ ತಾಲೂಕು ಪೊಲೀಸ್ ಠಾಣೆಯಲ್ಲಿ ಎಡಿಆರ್ ದಾಖಲಿಸಿದ್ದಾರೆ, ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯವಿಧಾನದ ಪ್ರಕಾರ, ಎಡಿಆರ್ನ್ನು ಮಹಾರಾಷ್ಟ್ರ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಲಾಗುವುದು, ಇದು ವಿಮಾನ ಅಪಘಾತ ತನಿಖಾ ಬ್ಯೂರೋ (Aircraft Accident Investigation Board) ವಿಚಾರಣೆಯ ಸಂಶೋಧನೆಗಳ ಆಧಾರದ ಮೇಲೆ ತನಿಖೆ ನಡೆಸುತ್ತದೆ ಎಂದು ತಿಳಿದುಬಂದಿದೆ.
ವಿಎಸ್ಆರ್ ವೆಂಚರ್ಸ್ ಅಧಿಕಾರಿಗಳ ವಿಚಾರಣೆ
ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಐಬಿ, ಅಪಘಾತದ ತನಿಖೆಯನ್ನು ವಹಿಸಿಕೊಂಡಿದೆ. ಈಗಾಗಲೇ ಎಎಐಬಿ ತನಿಖಾ ತಂಡವು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಮೂವರು ಅಧಿಕಾರಿಗಳು ವಿಎಸ್ಆರ್ ವೆಂಚರ್ಸ್ ಕಚೇರಿಗೆ ಭೇಟಿ ನೀಡಿ ಕಂಪನಿಯ ಮಾಲೀಕರು ಮತ್ತು ಇತರ ಅಧಿಕಾರಿಗಳನ್ನು ಸುಮಾರು 90 ನಿಮಿಷಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಅಪಘಾತದ ಕುರಿತಾಗಿ ಇದುವರೆಗೆ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ ಮತ್ತು ತನಿಖಾ ಸಂಸ್ಥೆಗಳು ತಮ್ಮ ವರದಿಗಳನ್ನು ಸಲ್ಲಿಸಿದ ಬಳಿಕವೇ ಸ್ಪಷ್ಟತೆ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೊಂಬಾರ್ಡಿಯರ್ ಅಧಿಕೃತ ಹೇಳಿಕೆ
ಅಪಘಾತಕ್ಕೀಡಾದ ಲಿಯರ್‌ಜೆಟ್ ವಿಮಾನದ ತಯಾರಕರಾದ ಬೊಂಬಾರ್ಡಿಯರ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ ದುರಂತದ ಬಗ್ಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ.
ತನಿಖೆ ಪೂರ್ಣಗೊಳ್ಳುವವರೆಗೆ ಈ ಅಪಘಾತದ ಸಂಭವನೀಯ ಕಾರಣಗಳ ಕುರಿತು ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ತನಿಖಾ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಮತ್ತು ಅಗತ್ಯವಿರುವಂತೆ ನಮ್ಮ ಶಿಫಾರಸುಗಳನ್ನು ಒದಗಿಸುತ್ತೇವೆ ಎಂದು ಕಂಪನಿ ಹೇಳಿದೆ.
ವಿಮಾನ ಅಪಘಾತಕ್ಕೆ ಕಾರಣವಾದ ಘಟನೆ ಮತ್ತು ಪವಾರ್ ಸಾವಿಗೆ ಕಾರಣವಾದ ಘಟನೆಗಳನ್ನು ವಿವರಿಸುವ ಹೇಳಿಕೆಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಕಳಪೆ ಗೋಚರತೆಯಿಂದಾಗಿ ಲಿಯರ್‌ಜೆಟ್ ವಿಮಾನಕ್ಕೆ ಬಾರಾಮತಿಯಲ್ಲಿ ಇಳಿಯಲು ಅನುಮತಿ ನೀಡಲಾಯಿತು, ಅನುಮತಿ ಪಡೆದ ಬಳಿಕ ಅದು ATC (Air Traffic Control) ಗೆ ಯಾವುದೇ ರೀಡ್-ಬ್ಯಾಕ್ ನೀಡಲಿಲ್ಲ, ಹೀಗಾಗಿ ಕೆಲವೇ ಕ್ಷಣಗಳಲ್ಲಿ ರನ್‌ವೇಯ ಅಂಚಿನಲ್ಲಿ ಬೆಂಕಿ ಹೊತ್ತಿಕೊಂಡಿತು(ಏಜೆನ್ಸೀಸ್).