ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ವಿಚಾರಣೆಯಲ್ಲಿ ನಿರತರಾಗಿರುವ ಪೊಲೀಸರು 
ದೇಶ

ಅಜಿತ್ ಪವಾರ್ ವಿಮಾನ ದುರಂತ ಪ್ರಕರಣ: ಸಿಐಡಿ ಹೆಗಲಿಗೆ ತನಿಖೆ ಜವಾಬ್ದಾರಿ | Ajit Pawar

ಪ್ರಮುಖ ಮುಖ್ಯಾಂಶಗಳು

  • ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ನಿಧನ
  • ಸಾವಿನ ಕುರಿತು ತನಿಖೆ ನಡೆಸುತ್ತಿರುವ ವಿಮಾನ ಅಪಘಾತ ತನಿಖಾ ಬ್ಯೂರೋ
  • ಮುಂದಿನ ಹಂತದ ತನಿಖೆ ನಡಿಸಲಿರುವ ಮಹಾರಾಷ್ಟ್ರ ಅಪರಾಧ ತನಿಖಾ ಇಲಾಖೆ (ಸಿಐಡಿ)
ಮಹಾರಾಷ್ಟ್ರ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ವಿಮಾನ ಅಪಘಾತ ಪ್ರಕರಣವನ್ನು ಮಹಾರಾಷ್ಟ್ರ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬುಧವಾರ (ಜ.28) ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಎಡಿಆರ್ ದಾಖಲಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಎಡಿಆರ್ ಸಲ್ಲಿಕೆಯನ್ನು ದೃಢಪಡಿಸುತ್ತಾ, ಪುಣೆ ಗ್ರಾಮೀಣ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು, ಬಾರಾಮತಿ ತಾಲೂಕು ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ವರದಿ (ಎಡಿಆರ್) ನಾವು ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಆಕಸ್ಮಿಕ ಸಾವಿನ ವರದಿ (ಎಡಿಆರ್) ಯನ್ನು ಮಹಾರಾಷ್ಟ್ರ ಅಪರಾಧ ತನಿಖಾ ಇಲಾಖೆಗೆ (CID) ವರ್ಗಾಯಿಸಲಲಿದ್ದು, ಇದನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ನ ಸಂಶೋಧನೆಗಳ ಆಧಾರದ ಮೇಲೆ ತನಿಖೆ ನಡೆಸುತ್ತದೆ ಎಂದು ಹೇಳಲಾಗುತ್ತಿದೆ.

ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ನಡೆಸುತ್ತಿದೆ

ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಮಾನ ಅಪಘಾತ ತನಿಖಾ ಬ್ಯೂರೋ (AAIB), ವಿಮಾನ ಅಪಘಾತದ ತನಿಖೆಯನ್ನು ಈಗಾಗಲೇ ವಹಿಸಿಕೊಂಡಿದೆ. ಅಪಘಾತದಲ್ಲಿ ಪ್ರಮುಖ ಸಾರ್ವಜನಿಕ ಪ್ರತಿನಿಧಿ ಅಥವಾ ಪ್ರಭಾವಿ ವ್ಯಕ್ತಿಯ ಸಾವು ಸಂಭವಿಸಿದಾಗ, ತನಿಖೆಯನ್ನು ಸಿಐಡಿ ನಡೆಸುತ್ತದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮಗೆ ಇನ್ನೂ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಆದಾಗ್ಯೂ, ಸಿಐಡಿ ತನಿಖೆ ನಡೆಸುವ ಸಾಧ್ಯತೆಯಿದ್ದು, ಈಗಾಗಲೇ ಸ್ಥಳೀಯ ಪೊಲೀಸರಲ್ಲಿ ಸಲ್ಲಿಸಲಾದ ಆಕಸ್ಮಿಕ ಸಾವಿನ ವರದಿ (ADR) ಯ ಆಧಾರದಲ್ಲಿ ತಿನಿಖೆ ಮುಂದುವರೆಯಲಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ವರದಿ 

ಬುಧವಾರ (ಜ.28) ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಟೇಬಲ್‌ಟಾಪ್ ರನ್‌ವೇಯ ಅಂಚಿನಿಂದ ಕೇವಲ 200 ಮೀಟರ್ ದೂರದಲ್ಲಿ ಚಾರ್ಟರ್ಡ್ ವಿಮಾನ ಅಪಘಾತಕ್ಕೀಡಾಗಿ ಅಜಿತ್ ಪವಾರ್ (66) ಮತ್ತು ಇತರ ನಾಲ್ವರು ಸಾವನ್ನಪ್ಪಿದರು.
ಎನ್‌ಸಿಪಿ ಮುಖಂಡ ಅಜಿತ್​ ಪವಾರ್, ಫೆಬ್ರವರಿ 5 ರಂದು ನಡೆಯಲಿದ್ದ ಜಿಲ್ಲಾ ಪರಿಷತ್ ಚುನಾವಣೆಗೆ ಮುನ್ನ ಪುಣೆಯ ಜಿಲ್ಲೆಯಲ್ಲಿ ನಾಲ್ಕು ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಮುಂಬೈನಿಂದ ತೆರಳಿದ್ದರು. ಅಪಘಾತದಲ್ಲಿ ಅಜಿತ್​ ಪವಾರ್​ ಜತೆಗೆ ಕ್ಯಾಪ್ಟನ್ ಸುಮಿತ್ ಕಪೂರ್, ಸಹ-ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್, ವೈಯಕ್ತಿಕ ಭದ್ರತಾ ಅಧಿಕಾರಿ ವಿದಿಪ್ ಜಾಧವ್ ಮತ್ತು ವಿಮಾನ ಸಹಾಯಕಿ ಪಿಂಕಿ ಮಾಲಿ ಸಾವನ್ನಪ್ಪಿದರು.
ಪ್ರಾಥಮಿಕ ವರದಿಗಳ ಪ್ರಕಾರ, ಲಿಯರ್‌ಜೆಟ್ ವಿಮಾನವು ಕಳಪೆ ಗೋಚರತೆ ಕಾರಣ ತುರ್ತು ಭೂಸ್ಪರ್ಶಕ್ಕಾಗಿ ಅನುಮತಿ ಪಡೆದ ನಂತರ, ಕೆಳಗಿಳಿಯುತ್ತಿದ್ದ ವೇಳೆ ಅಫಘಾತ ಸಂಭವಿಸಿ ರನ್‌ವೇ ಬಳಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು,(ಏಜನ್ಸೀಸ್​).