ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವು
- ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ತಮ್ಮ ಚೊಚ್ಚಲ ಸಿನಿಮಾಗೆ 45 ಎಂದು ಟೈಟಲ್ ಇಟ್ಟರು
- ಈ ಟೈಟಲ್ ನೋಡಿದಾಗ ಅನೇಕ ಮಂದಿ ಏನಿದರ ಅರ್ಥ ಎಂದು ತಲೆ ಕಡೆಸಿಕೊಳ್ಳಲು ಶುರು ಮಾಡಿದರು
- ಟೈಟಲ್‌ನ ಅರ್ಥ ಹಿಂದೂ ಸಂಪ್ರದಾಯದಲ್ಲಿ ಮರಣದ ನಂತರ ಆತ್ಮದ ಪಯಣಕ್ಕೆ ಸಂಬಂಧಿಸಿದೆ
- ಇಂದಿನ ವಿಮಾನ ಪತನದಲ್ಲಿ ಮಹಾ ಡಿಸಿಎಂ ಸಾವಿಗೀಡಾಗಿರುವುದರಿಂದ 45 ಹೆಸರು ಮುನ್ನೆಲೆಗೆ ಬಂದಿದೆ
Ajit Pawar : ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ನಿರ್ದೇಶಕರಾಗಿ ಬಡ್ತಿ ಪಡೆದಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ತಮ್ಮ ಚೊಚ್ಚಲ ಸಿನಿಮಾಗೆ 45 ಎಂದು ಟೈಟಲ್ ಇಟ್ಟರು. ಈ ಟೈಟಲ್ ನೋಡಿದಾಗ ಅನೇಕ ಮಂದಿ ಏನಿದರ ಅರ್ಥ ಎಂದು ತಲೆ ಕಡೆಸಿಕೊಳ್ಳಲು ಶುರು ಮಾಡಿದರು. ಆದರೆ, ಸಿನಿಮಾ ಬಿಡುಗಡೆಯಾದ ಬಳಿಕ ಅದರ ಅರ್ಥ ತಿಳಿದು, ಸಿನಿಮಾಗೆ ಪೂರಕವಾಗಿದೆ ಎಂದು ಮಾತನಾಡಿಕೊಂಡರು. ‘45’ ಸಿನಿಮಾದ ಟೈಟಲ್‌ನ ಅರ್ಥ ಹಿಂದೂ ಸಂಪ್ರದಾಯದಲ್ಲಿ ಮರಣದ ನಂತರ ಆತ್ಮದ ಪಯಣಕ್ಕೆ ಸಂಬಂಧಿಸಿದೆ. ಇದೀಗ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್, ಇಂದು ನಡೆದ ವಿಮಾನ ಪತನದಲ್ಲಿ ದುರಂತ ಸಾವಿಗೀಡಾಗಿರುವುದು ಮತ್ತೊಮ್ಮೆ 45 ಹೆಸರು ಮುನ್ನೆಲೆಗೆ ಬಂದಿದೆ.
45ಗೂ ಮಹಾರಾಷ್ಟ್ರ ಡಿಸಿಎಂಗೂ ಏನು ಸಂಬಂಧ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಒಂದು ಕಾರಣವಿದೆ. ಅದೇನೆಂದರೆ, ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಲಿಯರ್‌ಜೆಟ್ 45XR. ಈ ವಿಮಾನದಲ್ಲಿಯೂ 45 ಸಂಖ್ಯೆ ಇದೆ. 45 ಸಿನಿಮಾ ಕೂಡ ಸಾವಿಗೆ ಸಂಬಂಧಿಸಿದ್ದು, ಇದೀಗ ವಿಮಾನ ಪತನದಲ್ಲಿ ಮಹಾ ಡಿಸಿಎಂ ಕೂಡ ಮೃತಪಟ್ಟಿದ್ದಾರೆ.
45 ಸಿನಿಮಾ ಕತೆ ಏನು?
ಸಿನಿಮಾದಲ್ಲಿ ವಿನಯ್ ಪಾತ್ರಧಾರಿ ಆಕಸ್ಮಿಕವಾಗಿ ಒಂದು ನಾಯಿಯನ್ನು ಬೈಕ್ನಿಂದ ಡಿಕ್ಕಿ ಹೊಡೆದು ಸಾಯಿಸುತ್ತಾನೆ. ಆ ನಾಯಿಯನ್ನು ತನ್ನ ತಾಯಿಯಂತೆ ಪ್ರೀತಿಸುವ ರಾಯಪ್ಪ (ಉಪೇಂದ್ರ) ಕೋಪಗೊಂಡು ವಿನಯ್ನನ್ನು ಕೊಲ್ಲಲು ನಿರ್ಧರಿಸುತ್ತಾನೆ. ಆದರೆ, ತಕ್ಷಣ ಕೊಲ್ಲದೆ, 45 ದಿನಗಳ ಕಾಲಾವಧಿ ನೀಡುತ್ತಾನೆ. ಈ ಅವಧಿಯಲ್ಲಿ ತನ್ನ ಜೀವನವನ್ನು ಮರುಪರಿಶೀಲಿಸಿ, ಬದುಕನ್ನು ಮತ್ತೆ ಅನುಭವಿಸಲು ಅವಕಾಶ ಕೊಡುತ್ತಾನೆ. ಈ 45 ದಿನಗಳು ಗರುಡ ಪುರಾಣದಿಂದ ಪ್ರೇರಿತವಾಗಿದೆ. ಹಿಂದೂ ಸಂಪ್ರದಾಯದಲ್ಲಿ ಮರಣದ ನಂತರ ಆತ್ಮವು ಭಯ, ಅಸಂತೋಷ ಹಾಗೂ ಅಪೂರ್ಣ ಆಸೆಗಳಿಂದಾಗಿ 45 ದಿನಗಳವರೆಗೆ ಅಸ್ಥಿರವಾಗಿರುತ್ತದೆ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಆತ್ಮದ ಪಯಣ ಪೂರ್ಣಗೊಳ್ಳುತ್ತದೆ ಎಂಬ ಕಲ್ಪನೆಯನ್ನು ಸಿನಿಮಾದಲ್ಲಿ ಆಧುನಿಕ ರೂಪದಲ್ಲಿ ತೋರಿಸಲಾಗಿದೆ.
45 ಸಂಖ್ಯೆಗೂ ಸಾವಿಗೂ ಇದೆ ಲಿಂಕ್
ಹಿಂದೂ ಸಂಪ್ರದಾಯದ ಪ್ರಕಾರ, ಮರಣದ ನಂತರ ಆತ್ಮವು (ಪ್ರೇತ ರೂಪದಲ್ಲಿ) ಸುಮಾರು 45 ದಿನಗಳವರೆಗೆ ಭೂಮಿಯ ಸಮೀಪದಲ್ಲೇ ಇರುತ್ತದೆ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಆತ್ಮಕ್ಕೆ ಭಯ, ಆಸೆ, ದುಃಖ, ಹಸಿವು-ಬಾಯಾರಿಕೆ ಇತ್ಯಾದಿ ಅನುಭವಗಳಾಗುತ್ತವೆ. ಈ 45 ದಿನಗಳಲ್ಲಿ ಸರಿಯಾಗಿ ಪಿಂಡ ಪ್ರದಾನ, ತರ್ಪಣ ಮಾಡದಿದ್ದರೆ ಆತ್ಮಕ್ಕೆ ತೊಂದರೆ ಆಗುತ್ತದೆ ಎಂಬ ನಂಬಿಕೆ. ಹಲವು ಸಮುದಾಯಗಳಲ್ಲಿ 45 ದಿನಗಳ ಶ್ರಾದ್ಧ ಅಥವಾ 45 ದಿನಗಳ ತರ್ಪಣ ಮಾಡುವ ಸಂಪ್ರದಾಯವಿದೆ. ಇದರಿಂದ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ಹಿಂದೂ ಸಂಪ್ರದಾಯದಲ್ಲಿ 45 ಸಂಖ್ಯೆಗೂ ಸಾವಿಗೂ ನಿಕಟ ಸಂಬಂಧ ಇದೆ.
ಲಿಯರ್‌ಜೆಟ್ 45 ವಿಮಾನ ಪತನ
ಇಂದು (ಜ.28) ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ( Ajit Pawar ) ಸೇರಿದಂತೆ ಐವರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಅಪಘಾತಕ್ಕೀಡಾದ ಲಿಯರ್‌ಜೆಟ್ 45XR ವಿಮಾನವು ಭಾರತದ ಅತಿದೊಡ್ಡ ನಾನ್-ಶೆಡ್ಯೂಲ್ಡ್ ವಿಮಾನ ನಿರ್ವಾಹಕರಲ್ಲಿ ಒಂದಾದ ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನಕ್ಕೆ ಸೇರಿದೆ. ಇನ್ನೊಂದು ಅಚ್ಚರಿ ಸಂಗತಿ ಏನೆಂದರೆ, ವಿಮಾನ ಅಪಘಾತ ಇಂದು ಬೆಳಗ್ಗೆ 8.45ಕ್ಕೆ ನಡೆಯಿತು. ಇಲ್ಲಿಯೂ 45ನೇ ಸಂಖ್ಯೆ ಇದೆ. ಇದು ಕಾಕತಾಳಿಯವೋ ಅಥವಾ ನಿಗೂಢವೂ ಅಜಿತ್ ಪವಾರ್ ಸಾವಿನ ಬಳಿಕ 45 ನಂಬರ್ ಚರ್ಚೆ ಹುಟ್ಟುಹಾಕುವುದಂತೂ ಸತ್ಯ. ಏಕೆಂದರೆ, ಸಾವಿಗೂ 45ಗೂ ಸಂಬಂಧ ಇರುವುದಂತೂ ಸತ್ಯ.
ಅಜಿತ್ ಪವಾರ್ ಸಾವು: ವಿಮಾನ ಅಪಘಾತದ ಬಗ್ಗೆ ಈ ಕ್ಷಣದವರೆಗಿನ ಮಾಹಿತಿ...
* ಮುಂಬೈನಿಂದ ಬಾರಾಮತಿಗೆ ಹಾರುತ್ತಿದ್ದ ಚಾರ್ಟರ್ಡ್ ವಿಮಾನ ಬುಧವಾರ ಬೆಳಗ್ಗೆ ಅಪಘಾತಕ್ಕೀಡಾಯಿತು.
* ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆ ಬೆಳಗ್ಗೆ 8.45 ರ ಸುಮಾರಿಗೆ ನಡೆದಿದೆ.
* ಪ್ರಾಥಮಿಕ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಜಿತ್ ಪವಾರ್ ವಿಮಾನದಲ್ಲಿದ್ದರು.
* ಜಿಲ್ಲಾ ಪರಿಷತ್ ಚುನಾವಣೆಗಾಗಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಲು ಪವಾರ್ ಬಾರಾಮತಿಗೆ ಪ್ರಯಾಣಿಸುತ್ತಿದ್ದರು.
* ಮಂಗಳವಾರ, ಅಜಿತ್ ಪವಾರ್ ಮುಂಬೈನಲ್ಲಿದ್ದರು, ಅಲ್ಲಿ ಅವರು ಮೂಲಸೌಕರ್ಯ ಕುರಿತ ಮಹಾರಾಷ್ಟ್ರ ಸಚಿವ ಸಂಪುಟ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು.
* ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬವಾಂಕುಲೆ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು ಎಂದು ANI ವರದಿ ಮಾಡಿದೆ.
ಪತನಕ್ಕೆ ಕಾರಣ ಏನು?
ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ನೀಡಿರುವ ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನವು ಬೆಳಗ್ಗೆ 8.45ರ ಸುಮಾರಿಗೆ ಅಂತಿಮ ಹಂತದಲ್ಲಿ ಅಸ್ಥಿರತೆ ಹಾಗೂ ಅನೇಕ ತಾಂತ್ರಿಕ ದೋಷಗಳನ್ನು ಎದುರಿಸಿತು. ಈ ವೇಳೆ ಪೈಲಟ್, ಬಾರಾಮತಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಮುಂದಾದರು. ಆದರೆ, ವಿಮಾನವು ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿತು. ಇದರಿಂದ ರನ್ವೇಗೆ ವಿಮಾನ ಅಪ್ಪಳಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿತು. ಫ್ಲೈಟ್ ರಾಡಾರ್ ಪ್ರಕಾರ, ವಿಮಾನವು ಬಾರಾಮತಿ ವಿಮಾನ ನಿಲ್ದಾಣಕ್ಕೆ ಇಳಿಯಲು ಪ್ರಯತ್ನಿಸುತ್ತಿದ್ದಾಗ ಪತನಗೊಂಡಿದೆ. ಅಜಿತ್ ಪವಾರ್ ಮಾತ್ರವಲ್ಲದೆ, ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ ಓರ್ವ ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯೂ ಸೇರಿದ್ದಾರೆ. ಅಪಘಾತದ ಸ್ಥಳದ ದೃಶ್ಯಗಳು, ವಿಮಾನವು ಸಂಪೂರ್ಣವಾಗಿ ನಾಶವಾಗಿರುವುದನ್ನು ತೋರಿಸಿವೆ. ದಟ್ಟ ಹೊಗೆ ಮತ್ತು ಜ್ವಾಲೆಗಳು ವಿಮಾನದ ಅವಶೇಷಗಳನ್ನು ಆವರಿಸಿದ್ದು, ಆ ಪ್ರದೇಶದಾದ್ಯಂತ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ, (ಏಜೆನ್ಸೀಸ್).