Ajit Pawar Death | ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅಂತಿಮ ದರ್ಶನ
ಪುಣೆ: ನಿನ್ನೆ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿಧನರಾಗಿದ್ದು, ಅವರ ಅಗಲಿಕೆಯಿಂದಾಗಿ ಇಡೀ ದೇಶವೇ ಆಘಾತದಲ್ಲಿದೆ. ಈ ನಡುವೆ ರಾಜ್ಯ ಚುನಾವಣಾ ಆಯೋಗ ಮಹತ್ವದ ವಿಷಯವೊಂದನ್ನು ಬಹಿರಂಗಪಡಿಸಿದೆ.
ಮಹಾರಾಷ್ಟ್ರ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗಳು ಪೂರ್ವ ನಿಗದಿಯಂತೆ ಫೆಬ್ರವರಿ 5 ರಂದೇ ನಡೆಯಲಿವೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಮುಂದೂಡಲು ಅವಕಾಶವಿಲ್ಲ: ಚುನಾವಣಾ ಆಯೋಗ
ಅಧಿಕೃತ ಶೋಕಾಚರಣೆಯ ಘೋಷಣೆಯು ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಚುನಾವಣಾ ಅವಧಿಯಲ್ಲಿ ಸಾಂವಿಧಾನಿಕ ಪ್ರಾಧಿಕಾರದ ಮರಣದಿಂದಾಗಿ ಚುನಾವಣೆಗಳನ್ನು ರದ್ದುಗೊಳಿಸಲು ಅಥವಾ ಮುಂದೂಡಲು ಯಾವುದೇ ಅವಕಾಶವಿಲ್ಲ ಎಂದು ಆಯೋಗದ ಮೂಲಗಳು ತಿಳಿಸಿವೆ.
ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಟೇಬಲ್‌ಟಾಪ್ ರನ್‌ವೇಯ ಅಂಚಿನಿಂದ ಕೇವಲ 100 ಮೀಟರ್ ದೂರದಲ್ಲಿ ಚಾರ್ಟರ್ಡ್ ವಿಮಾನ ಪತನಗೊಂಡು ಡಿಸಿಎಂ ಅಜಿತ್ ಪವಾರ್ (66) ಮತ್ತು ಅದರಲ್ಲಿದ್ದ ಇತರ ನಾಲ್ವರು ಸಾವನ್ನಪ್ಪಿದ್ದಾರೆ.
ಅಜಿತ್ ದಾದಾ ಹಠಾತ್ ನಿರ್ಗಮನ ಬಿಜೆಪಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸೂತಕದ ಛಾಯೆಯನ್ನು ಮೂಡಿಸಿದ್ದು, ಅವರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಭವಿಷ್ಯದ ಮೇಲೂ ಕರಿನೆರಳು ಬೀರಿದೆ. ಪವಾರ್ ನಿಧನ ರಾಜಕೀಯ ವಲಯಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಚುನಾವಣೆ ನಿಗದಿತ ಸಮಯದಲ್ಲಿ ನಡೆಯುತ್ತದೆಯೇ ಎಂಬ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿತ್ತು, ಆಯೋಗ ಸದ್ಯ ಎಲ್ಲರ ಅನುಮಾನಕ್ಕೆ ತೆರೆ ಎಳೆದಿದೆ.
ಚುನಾವಣಾ ಅವಧಿಯಲ್ಲಿ ಹಿರಿಯ ಸಾಂವಿಧಾನಿಕ ಅಧಿಕಾರಿಯೊಬ್ಬರು ಸಾವನ್ನಪ್ಪಿದ ಅಪರೂಪದ ಪ್ರಕರಣ ಇದಾಗಿದೆ, ಆದರೆ ಕಾನೂನುಗಳು ಅಂತಹ ಆಧಾರದ ಮೇಲೆ ಚುನಾವಣೆಗಳನ್ನು ರದ್ದುಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳ ಹೇಳಿವೆ.
ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಮತದಾನ ದಿನಾಂಕವನ್ನು ಬದಲಾಯಿಸುವುದು ಅಗತ್ಯವೆಂದು ಜಿಲ್ಲಾಧಿಕಾರಿ ಭಾವಿಸಿದರೆ, ರಾಜ್ಯ ಚುನಾವಣಾ ಆಯೋಗ ಹೊರಡಿಸಿದ ನಿರ್ದೇಶನಗಳಿಗೆ ತಕ್ಕಂತೆ ಮಾತ್ರ ಅಂತಹ ಬದಲಾವಣೆಯನ್ನು ಮಾಡಬಹುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ಶೋಕಾಚರಣೆಯು ಮತದಾನದ ದಿನಾಂಕದೊಂದಿಗೆ ಹೊಂದಿಕೆಯಾದರೆ, ಚುನಾವಣೆಯನ್ನು ಮುಂದೂಡಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಮೂಲಗಳು ತಿಳಿಸಿವೆ, ರಾಜ್ಯದಲ್ಲಿ ಪ್ರಸ್ತುತ ಅಂತಹ ಪರಿಸ್ಥಿತಿ ಅಸ್ತಿತ್ವದಲ್ಲಿಲ್ಲ, ಆದ್ದರಿಂದ ಈ ಮೊದಲೇ ಘೋಷಿಸಿದಂತೆ 125 ಪಂಚಾಯತ್ ಸಮಿತಿಗಳು ಮತ್ತು 12 ಜಿಲ್ಲಾ ಪರಿಷತ್‌ಗಳಿಗೆ (ZPs) ಫೆಬ್ರವರಿ 5 ರಂದು ಚುನಾವಣೆಗಳು ನಡೆಯಲಿದ್ದು, ಎರಡು ದಿನಗಳ ಬಳಿಕ ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್).