Ajinkya Rahane | .ನಿವೃತ್ತಿ ಬಳಿಕ ಸಚಿನ್ ತೆಂಡೂಲ್ಕರ್ ಜೊತೆಗಿನ ಮಾತುಕತೆ ಬಹಿರಂಗಪಡಿಸಿದ ರಹಾನೆ
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತ ತಂಡದ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ, ತಮ್ಮ ನಿವೃತ್ತಿಯ ನಿರ್ಧಾರದ ನಂತರ ನಡೆದ ಅತ್ಯಂತ ಭಾವುಕ ಹಾಗೂ ಸ್ವಾರಸ್ಯಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಕ್ರೀಡಾಲೋಕಕ್ಕೆ ಅಚ್ಚರಿಯಾಗುವಂತೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಯುರೋಪಿಯನ್ T20 ಲೀಗ್‌ನ ಆಂಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡವನ್ನು ಸೇರಿಕೊಂಡಿರುವ ಅವರು, ನಿವೃತ್ತಿಯ ಸುದ್ದಿ ಹೊರಬಿದ್ದ ತಕ್ಷಣ ತಮಗೆ ಮೊದಲ ಕರೆ ಬಂದಿದ್ದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಂದ ಎಂದು ಬಹಿರಂಗಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ಕುರಿತು ವಿಸ್ತೃತವಾಗಿ ಮಾತನಾಡಿರುವ 38 ವರ್ಷದ ರಹಾನೆ, ಸಚಿನ್ ಪಾಜಿ ಕರೆ ಮಾಡಿ ನಾನು ಇನ್ನು ಕೆಲವು ಕಾಲ ಕ್ರಿಕೆಟ್ ಆಡಬಹುದು ಎಂದು ಭಾವಿಸಿದ್ದಾಗಿ ಹೇಳಿದರು. ಆದರೆ, ಆಟಕ್ಕಾಗಿ ನನ್ನಲ್ಲಿದ್ದ ಎಲ್ಲವನ್ನೂ ನೀಡಿ ತೃಪ್ತಿಯಿಂದ ನಿವೃತ್ತಿಯಾಗುತ್ತಿದ್ದೇನೆ, ಹೀಗಾಗಿ ಸುಮ್ಮನೆ ವೃತ್ತಿಜೀವನವನ್ನು ಎಳೆದುಕೊಂಡು ಹೋಗಲು ಇಷ್ಟವಿಲ್ಲ ಎಂದು ಅವರಿಗೆ ತಿಳಿಸಿದೆ ಎಂದಿದ್ದಾರೆ. ಇಷ್ಟೇ ಅಲ್ಲದೆ ಇರ್ಫಾನ್ ಪಠಾಣ್ ಕರೆ ಮಾಡಿದ್ದರು ಹಾಗೂ ಮಾಜಿ ಸಹಪಾಠಿಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಮತ್ತು ಜಸ್ಪ್ರೀತ್ ಬುಮ್ರಾ ಸಂದೇಶ ಕಳುಹಿಸಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಆ ರೆಕಾರ್ಡಿಂಗ್ ನನ್ನನ್ನು!...
ನಿವೃತ್ತಿಯ ನಿರ್ಧಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಜಗತ್ತಿಗೆ ತಿಳಿಸಲು ವಿಡಿಯೋ ರೆಕಾರ್ಡ್ ಮಾಡುವಾಗ ರಹಾನೆ ತೀವ್ರವಾಗಿ ಭಾವುಕರಾಗಿದ್ದರು. ವಿಡಿಯೋ ರೆಕಾರ್ಡ್ ಮಾಡಿದ ನಂತರ ನಾನು ತುಂಬಾ ಅತ್ತೆ. ಕುಟುಂಬದೊಂದಿಗೆ ನಿವೃತ್ತಿ ಬಗ್ಗೆ ಚರ್ಚಿಸುವಾಗ ಭಾವುಕನಾಗಿದ್ದೆ ನಿಜ, ಆದರೆ ರೆಕಾರ್ಡಿಂಗ್ ನನ್ನನ್ನು ಈ ಮಟ್ಟಿಗೆ ಕಾಡುತ್ತದೆ ಎಂದು ಭಾವಿಸಿರಲಿಲ್ಲ. ಇಷ್ಟು ವರ್ಷ ಪ್ರೀತಿಸಿದ ಆಟವನ್ನು ಇನ್ಮುಂದೆ ಆಡುವುದಿಲ್ಲ ಎಂಬ ವಾಸ್ತವದ ಅರಿವು ಆ ಕ್ಷಣದಲ್ಲಿ ನನ್ನನ್ನು ಆವರಿಸಿತ್ತು ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಭಾರತದ ಪರ 85 ಟೆಸ್ಟ್, 90 ಏಕದಿನ ಹಾಗೂ 20 T20 ಪಂದ್ಯಗಳನ್ನು ಆಡಿ 8,000ಕ್ಕೂ ಹೆಚ್ಚು ರನ್ ಕಲೆಹಾಕಿರುವ ರಹಾನೆ, 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. 2020-21ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಪ್ರಮುಖ ಆಟಗಾರರ ಗಾಯದ ಸಮಸ್ಯೆಯ ನಡುವೆಯೂ ಅದ್ಭುತ ನಾಯಕತ್ವದ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ 2-1 ಅಂತರದ ಐತಿಹಾಸಿಕ ಟೆಸ್ಟ್ ಗೆಲುವು ತಂದುಕೊಟ್ಟಿದ್ದು ರಹಾನೆ ವೃತ್ತಿಜೀವನದ ಸುವರ್ಣ ಅಧ್ಯಾಯವಾಗಿ ಉಳಿದುಕೊಂಡಿದೆ(ಏಜೆನ್ಸೀಸ್).