ವಾರಾಣಸಿ ಫಲಿತಾಂಶ ರದ್ದುಗೊಳಿಸಿ ಮರುಚುನಾವಣೆ ನಡೆಸುವಂತೆ ಕಾಂಗ್ರೆಸ್ ನಾಯಕನ ಆಗ್ರಹ  
ದೇಶ

ಎಸ್​​​ಐಆರ್​ ವಿವಾದ: ಪ್ರಧಾನಿ ಮೋದಿ ಗೆದ್ದಿರುವ ವಾರಾಣಸಿ ಫಲಿತಾಂಶ ರದ್ದುಗೊಳಿಸಿ ಮರುಚುನಾವಣೆ ನಡೆಸುವಂತೆ ಕಾಂಗ್ರೆಸ್ ನಾಯಕನ ಆಗ್ರಹ | Election Commission

ಲಖನೌ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಭ್ರಷ್ಟ ಮತ್ತು ಅಪ್ರಮಾಣಿಕ ವ್ಯಕ್ತಿ ಎಂದು ಕಟುವಾಗಿ ಟೀಕಿಸಿದ್ದು, ತಕ್ಷಣವೇ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಲಖನೌ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಭ್ರಷ್ಟ ಮತ್ತು ಅಪ್ರಮಾಣಿಕ ವ್ಯಕ್ತಿ ಎಂದು ಕಟುವಾಗಿ ಟೀಕಿಸಿದ್ದು, ತಕ್ಷಣವೇ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಯಗಳಿಸಿದ್ದ ವಾರಾಣಸಿ ಲೋಕಸಭಾ ಕ್ಷೇತ್ರದ 2024ರ ಚುನಾವಣೆಯನ್ನು ರದ್ದುಗೊಳಿಸಿ, ಮರುಚುನಾವಣೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಬಿಜೆಪಿ ಗೆಲುವಿಗಾಗಿ ಜ್ಞಾನೇಶ್ ಕುಮಾರ್ ಚುನಾವಣೆಯಲ್ಲಿ ಅಕ್ರಮ ಎಸಗಲು ನೆರವಾಗಿದ್ದಾರೆ ಎಂದು ರೈ ಆರೋಪಿಸಿದ್ದು, ಅವರ ಅಧಿಕಾರಾವಧಿಯಲ್ಲಿ ಯಾವೆಲ್ಲಾ ರಾಜ್ಯಗಳಲ್ಲಿ ಮತದಾನ ನಡೆದಿದೆಯೋ, ಆ ಎಲ್ಲಾ ರಾಜ್ಯಗಳ ಚುನಾವಣೆಗಳನ್ನು ರದ್ದುಗೊಳಿಸಿ ಮತ್ತೆ ಚುನಾವಣೆ ನಡೆಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಳೆದ 10 ತಿಂಗಳುಗಳಲ್ಲಿ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಬರೆದಿದ್ದ ಆಕ್ಷೇಪಣೆಗಳನ್ನು ಸಿಇಸಿ ಜ್ಞಾನೇಶ್ ಕುಮಾರ್ 14 ಬಾರಿ ನಿರ್ಲಕ್ಷಿಸಿದ್ದಾರೆ ಎಂಬ ಮಾಧ್ಯಮ ವರದಿಯ ಬೆನ್ನಲ್ಲೇ ವಿಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ದಾಳಿ ಚುರುಕುಗೊಳಿಸಿವೆ.

2024ರ ಲೋಕಸಭಾ ಚುನಾವಣೆಯಲ್ಲಿ ಅಜಯ್ ರೈ ಅವರು ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿ 1,52,513 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಇದನ್ನೂ ಓದಿ:138th Mann Ki Baat: ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಪುನರುಚ್ಚರಿಸಿದ ಪ್ರಧಾನಿ ಮೋದಿ!

ಬಿಜೆಪಿ ಟಿಕೆಟ್ ಆಫರ್ ನೀಡಿದ್ದರಂತೆ ಜ್ಞಾನೇಶ್ ಕುಮಾರ್!

2016 ರಲ್ಲಿ ದೆಹಲಿಗೆ ಪ್ರಯಾಣಿಸುವಾಗ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸುವಂತೆ ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ನನಗೆ ಸಲಹೆ ನೀಡಿದ್ದರು ಎಂದು ಕೆರಳದ ಮಾಜಿ ಮುಖ್ಯ ಕಾರ್ಯದರ್ಶಿ ಜಿಜಿ ಥಾಮ್ಸನ್​​ ಗಂಭೀರ ಆರೋಪ ಮಾಡಿದ್ದಾರೆ.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಿರ್ಧಾರಗಳ ಕುರಿತು ಚುನಾವಣಾ ಆಯೋಗದ ಇಬ್ಬರು ಆಯುಕ್ತರ ಆಕ್ಷೇಪಣೆಗಳಿಂದಾಗಿ ಎದ್ದಿರುವ ವಿವಾದದ ನಡುವೆಯೇ ಈ ಹೊಸ ಆರೋಪ ಕೇಳಿಬಂದಿದೆ. ತಾವು ಆ ಪ್ರಸ್ತಾಪವನ್ನು ತಕ್ಷಣವೇ ತಿರಸ್ಕರಿಸಿದ್ದಾಗಿ ತಿಳಿಸಿರುವ ಥಾಮ್ಸನ್​​, ಜ್ಞಾನೇಶ್ ಕುಮಾರ್ ಅವರ ಈ ನಡೆ ತಮಗೆ ಅಚ್ಚರಿ ತಂದಿತ್ತು ಎಂದಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದ ಒಳಗಿನ ಭಿನ್ನಾಭಿಪ್ರಾಯಗಳ ವರದಿ ಹೊರಬಂದ ಬೆನ್ನಲ್ಲೇ ಜಿಜಿ ಥಾಮ್ಸನ್​​ ಅವರ ಈ ಹೇಳಿಕೆ ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ದೇಶದಾದ್ಯಂತ ವಿಪಕ್ಷಗಳು ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿ ತಿದ್ದುಪಡಿ, ಫಾರ್ಮ್ 6 ರ ಬದಲಾವಣೆ ಮತ್ತು ಕೇಂದ್ರೀಕೃತ ವೋಟರ್ ಡೇಟಾಬೇಸ್ ನಿರ್ವಹಣೆಯ ನಿರ್ಧಾರಗಳ ಬಗ್ಗೆ ಹಲವು ಬಾರಿ ಲಿಖಿತ ರೂಪದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಮಾಧ್ಯಮ ವರದಿಗೆ ಚುನಾವಣಾ ಆಯೋಗದ ಸ್ಪಷ್ಟನೆ

ಶನಿವಾರದಂದು ಚುನಾವಣಾ ಆಯೋಗವು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಎಸ್​​ಐಆರ್​​ಗೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನು ಮೂವರು ಆಯುಕ್ತರೂ ಸರ್ವಸಮ್ಮತಿಯಿಂದ ತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಮತದಾರರ ನೋಂದಣಿಗೆ ಬಳಸುವ ಫಾರ್ಮ್ 6 ರ ಬದಲಾವಣೆಯನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ ಎಂದು ತಿಳಿಸಿದೆ. ಸಂಧು ಮತ್ತು ಜೋಶಿ ಅವರು ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಬರೆದ ಪತ್ರಗಳು ಆಡಳಿತಾತ್ಮಕ ನಿಯೋಜನೆಗೆ ಸಂಬಂಧಿಸಿದ್ದು, ಯಾವುದೇ ನೀತಿ ನಿರ್ಧಾರಗಳಿಗೆ ಸಂಬಂಧಿಸಿದ್ದಲ್ಲ ಎಂದು ಆಯೋಗ ಹೇಳಿದೆ.

ಚುನಾವಣಾ ಆಯೋಗದ ಸ್ಪಷ್ಟನೆಯಿಂದ ಕಾಂಗ್ರೆಸ್ ಹೆಣೆದಿದ್ದ ಸುಳ್ಳು ಆರೋಪಗಳು ಬಯಲಾಗಿವೆ ಎಂದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸಮರ್ಥಿಸಿಕೊಂಡಿವೆ. ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರು ವಿಪಕ್ಷಗಳು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿವೆ ಎಂದು ಟೀಕಿಸಿದ್ದಾರೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಕೂಡ ಚುನಾವಣಾ ಆಯೋಗದ ಈ ಸ್ಪಷ್ಟನೆಯನ್ನು ಸ್ವಾಗತಿಸಿದ್ದಾರೆ.

ಮತ್ತೊಂದೆಡೆ, ಇಂಡಿಯಾದ ಒಕ್ಕೂಟದ ನಾಯಕರು ಸೆಪ್ಟೆಂಬರ್ 30 ರಂದು ದೆಹಲಿಯಲ್ಲಿ ಮುಂದಿನ ಕಾರ್ಯತಂತ್ರ ರೂಪಿಸಲು ಸಭೆ ಸೇರಲಿದ್ದು, ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ವಿಪಕ್ಷ ನಾಯಕರಿಗೆ ಪತ್ರ ಬರೆದು ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದ್ದಾರೆ(ಏಜೆನ್ಸೀಸ್​).