ವಿಮಾನ ಪ್ರಯಾಣಿಕರಿಗೆ ಬಿಗ್​ ರಿಲೀಫ್​: ಸೀಟ್ ಚಾರ್ಜ್‌ಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, 60ರಷ್ಟು ಉಚಿತ! Airlines  
ದೇಶ

ವಿಮಾನ ಪ್ರಯಾಣಿಕರಿಗೆ ಬಿಗ್​ ರಿಲೀಫ್​: ಸೀಟ್ ಚಾರ್ಜ್‌ಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, 60ರಷ್ಟು ಉಚಿತ! Airlines

ಪ್ರಮುಖ ಮುಖ್ಯಾಂಶಗಳು

  • ವಿಮಾನ ಪ್ರಯಾಣಿಕರಿಗೆ ಬಿಗ್​ ರಿಲೀಫ್ ನೀಡಿದ ಕೇಂದ್ರ ಸರ್ಕಾರ
  • ವಿಮಾನದಲ್ಲಿ ಶೇ.60 ರಷ್ಟು ಸೀಟುಗಳನ್ನು ಹಣ ಪಾವತಿಸದೇ ಉಚಿತವಾಗಿ ಆಯ್ಕೆ
  • ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದ ಕೇಂದ್ರ ಸರ್ಕಾರ
ನವದೆಹಲಿ: ವಿಮಾನ ಪ್ರಯಾಣಿಕರಿಗೆ ಶೀಘ್ರದಲ್ಲೇ ಬಿಗ್​ ರಿಲೀಫ್​ ಸಿಗಲಿದೆ. ಅದೇನೆಂದರೆ, ಯಾವುದೇ ವಿಮಾನದಲ್ಲಿ ಶೇ.60 ರಷ್ಟು ಸೀಟುಗಳನ್ನು ಹಣ ಪಾವತಿಸದೇ ಉಚಿತವಾಗಿ ಆಯ್ಕೆ ಮಾಡಿಕೊಳ್ಳಲು ಪ್ರಯಾಣಿಕರಿಗೆ ಅವಕಾಶ ನೀಡಬೇಕೆಂದು ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ( Airlines ) ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಸೀಟು ಆಯ್ಕೆ ಮಾಡಿಕೊಳ್ಳಲು ಶುಲ್ಕ ವಿಧಿಸುವುದು ಸೇರಿದಂತೆ ಕೆಲ ಹೆಚ್ಚುವರಿ ವೆಚ್ಚಗಳ ವಿರುದ್ಧ ಅನೇಕ ವಿಮಾನ ಪ್ರಯಾಣಿಕರು ಧ್ವನಿ ಎತ್ತಿ, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಇಂಥದ್ದೊಂದು ಸೂಚನೆ ಬಂದಿದೆ.
ಅಂದಹಾಗೆ, ಕೇಂದ್ರ ವಿಮಾನಯಾನ ಸಚಿವಾಲಯವು ಪ್ರಯಾಣಿಕರ ಪ್ರಯೋಜನಕ್ಕಾಗಿಯೇ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರ ಪ್ರಕಾರ, ಒಂದೇ PNR (ಒಂದೇ ಬುಕಿಂಗ್‌ನಲ್ಲಿ) ಅಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಒಟ್ಟಿಗೆ ಕೂರಿಸಬೇಕು. ಸಾಧ್ಯವಾದರೆ ಪಕ್ಕ ಪಕ್ಕದ ಸೀಟ್‌ಗಳಲ್ಲಿ ಕೂರಿಸಬೇಕು ಎಂದು ಡಿಜಿಸಿಎ (DGCA) ಮೂಲಕ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಕುಟುಂಬಗಳು ಮತ್ತು ಗುಂಪಿನ ಪ್ರಯಾಣಿಕರಿಗೆ ಸೀಟ್‌ಗಾಗಿ ಜಗಳವಾಡುವ ಸಮಸ್ಯೆ ತಪ್ಪುತ್ತದೆ.
ಇದಿಷ್ಟೇ ಅಲ್ಲದೆ, ನಿಯಂತ್ರಕ ಸಂಸ್ಥೆಯು ವಿಮಾನದ ವಿಳಂಬ, ರದ್ದತಿ ಮತ್ತು ಬೋರ್ಡಿಂಗ್ ನಿರಾಕರಣೆಯ ಸಂದರ್ಭಗಳಲ್ಲಿ ಪ್ರಯಾಣಿಕರ ಹಕ್ಕುಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದೆ. ಇದಕ್ಕಾಗಿ ಎಲ್ಲಾ ವಿಮಾನಯಾನ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ಗಳು, ಮೊಬೈಲ್ ಆ್ಯಪ್‌ಗಳು, ಬುಕಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿ ಈ ಹಕ್ಕುಗಳನ್ನು ಸ್ಪಷ್ಟವಾಗಿ ಮತ್ತು ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. ಇದರಿಂದ ಪ್ರಯಾಣಿಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ಸರಿಯಾದ ಸಹಾಯ ಪಡೆಯಬಹುದು.
ಕ್ರೀಡಾ ಉಪಕರಣಗಳು, ಸಂಗೀತ ಉಪಕರಣಗಳು ಮತ್ತು ಸಾಕುಪ್ರಾಣಿಗಳ ಸಾಗಣೆಗೆ ಸ್ಪಷ್ಟ ಮತ್ತು ಪಾರದರ್ಶಕ ನೀತಿಗಳನ್ನು ಅಳವಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಈ ಎಲ್ಲ ನೀತಿಗಳು ಪ್ರಯಾಣಿಕರ ಸುರಕ್ಷತೆ ಮತ್ತು ವಿಮಾನ ಕಾರ್ಯಾಚರಣೆಯ ಅವಶ್ಯಕತೆಗಳಿಗೆ ಹೊಂದಿಕೆಯಾಗಬೇಕು ಮತ್ತು ಪ್ರಯಾಣಿಕ ಸ್ನೇಹಿ ರೀತಿಯಲ್ಲಿ ಸಂವಹನ ಮಾಡಬೇಕು ಎಂದು ಡಿಜಿಸಿಎ ಹೇಳಿದೆ. ಇದಿಷ್ಟೇ ಅಲ್ಲದೆ, ಪ್ರಾದೇಶಿಕ ಭಾಷೆಗಳಲ್ಲಿ ಪ್ರಯಾಣಿಕರ ಹಕ್ಕುಗಳನ್ನು ತಿಳಿಸಲು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ, (ಏಜೆನ್ಸೀಸ್​).