A320 ವರ್ಗಕ್ಕೆ ಸೇರಿದ ಏರ್​ಬಸ್​ ವಿಮಾನ 
ದೇಶ

ಜಾಗತಿಕವಾಗಿ 6000 ವಿಮಾನಗಳ ತುರ್ತು ರಿಪೇರಿಗೆ ಏರ್​ಬಸ್​ ಕರೆ: ಕಾರಣವೇನು? ಭಾರತದ ಮೇಲೇನು ಪರಿಣಾಮ? Airbus

ಪ್ರಮುಖ ಮುಖ್ಯಾಂಶಗಳು

  • A320 ವರ್ಗಕ್ಕೆ ಸೇರಿದ ಸುಮಾರು 6000 ವಿಮಾನಗಳ ತುರ್ತು ರಿಪೇರಿಗೆ ಕರೆ
  • ತನ್ನ 350ಕ್ಕೂ ಹೆಚ್ಚು ಆಪರೇಟರ್​ಗಳಿಗೆ ತುರ್ತು ರಿಪೇರಿ ನೋಟಿಸ್ ನೀಡಿದ ಏರ್​ಬಸ್​ ಕಂಪನಿ​
  • ತುರ್ತು ರಿಪೇರಿ ಕರೆಯಿಂದಾಗಿ ಜಾಗತಿಕವಾಗಿ ವಿಮಾನ ಪ್ರಯಾಣದಲ್ಲಿ ಅಸ್ತವ್ಯಸ್ತ
ನವದೆಹಲಿ: ಯುರೋಪಿನ ಏರ್‌ಬಸ್ ( Airbus ) ವಿಮಾನ ಕಂಪನಿಯು ತನ್ನ A320 ವರ್ಗಕ್ಕೆ ಸೇರಿದ ಸುಮಾರು 6000 ವಿಮಾನಗಳ ತುರ್ತು ರಿಪೇರಿಗೆ ಕರೆ ನೀಡಿದೆ. ಜಾಗತಿಕವಾಗಿ ಸುಮಾರು ಅರ್ಧದಷ್ಟು ವಿಮಾನಗಳು A320 ವರ್ಗಕ್ಕೆ ಸೇರಿದ್ದು, ತುರ್ತು ರಿಪೇರಿ ನಿರ್ಧಾರವೂ ಈ ವೀಕೆಂಡ್​ನಲ್ಲಿ ಜಾಗತಿಕವಾಗಿ ವಿಮಾನ ಪ್ರಯಾಣದಲ್ಲಿ ಅಸ್ತವ್ಯಸ್ತ ಉಂಟು ಮಾಡಿದೆ.
ಏರ್​ಬಸ್​ಗೆ ಬರೋಬ್ಬರಿ 55 ವರ್ಷಗಳ ಇತಿಹಾಸವಿದ್ದು, ಇದೇ ಮೊದಲ ಬಾರಿಗೆ ಇಂಥದ್ದೊಂದು ಭಾರಿ ಅಡಚಣೆ ಉಂಟಾಗಿದೆ. ಈ ವಾರ ಬೋಯಿಂಗ್ 737 ಅನ್ನು ಹಿಂದಿಕ್ಕಿ ಅತಿ ಹೆಚ್ಚು ವಿತರಿಸಲಾದ ವಿಮಾನ ಮಾದರಿ ಎಂಬ ಹೆಗ್ಗಳಿಕೆಯನ್ನು A320 ಹೊಂದಿದೆ. ಇದರ ಬೆನ್ನಲ್ಲೇ ತುರ್ತು ರಿಪೇರಿ ಘೋಷಣೆ ಕೂಡ ಹೊರಬಿದ್ದಿದೆ. ಅಂದಹಾಗೆ, ಏರ್‌ಬಸ್​ ಕಂಪನಿಯು ತನ್ನ 350ಕ್ಕೂ ಹೆಚ್ಚು ಆಪರೇಟರ್​ಗಳಿಗೆ ತುರ್ತು ರಿಪೇರಿ ನೋಟಿಸ್​ ಬಿಡುಗಡೆ ಮಾಡಿದ ಸಮಯದಲ್ಲೇ ಸುಮಾರು 3,000 A320 ವರ್ಗದ ವಿಮಾನಗಳು ಹಾರಾಟ ನಡೆಸುತ್ತಿದ್ದವು.

ತುರ್ತು ರಿಪೇರಿಗೆ ಕಾರಣವೇನು?

2025, ಅಕ್ಟೋಬರ್ 30 ರಂದು JetBlue ಏರ್‌ಲೈನ್‌ನ A320 ವಿಮಾನ ಕ್ಯಾಂಕೂನ್‌ನಿಂದ ನ್ಯೂಜರ್ಸಿಗೆ ಪ್ರಯಾಣಿಸುವಾಗ ಸಡನ್ ಡ್ರಾಪ್ ಆಗಿ ಫ್ಲೋರಿಡಾದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತು. ಬಳಿಕ ಅಮೆರಿಕನ್ ಏರ್‌ಪೋರ್ಟ್ ಅಥಾರಿಟಿ ಈ ಘಟನೆ ಬಗ್ಗೆ ತನಿಖೆ ನಡೆಸಿದ ಬೆನ್ನಲ್ಲೇ ಐರ್‌ಬಸ್ ಕಂಪನಿ ಇಂಥದ್ದೊಂದು ಕ್ರಮ ಕೈಗೊಂಡಿದೆ. ಘಟನೆಯ ವಿಶ್ಲೇಷಣೆಯ ಪ್ರಕಾರ, ತೀವ್ರವಾದ ಸೌರ ವಿಕಿರಣ ವಿಮಾನದ ಹಾರಾಟ ನಿಯಂತ್ರಣಕ್ಕೆ ನಿರ್ಣಾಯಕವಾದ ಡೇಟಾವನ್ನು ಹಾಳುಮಾಡಬಹುದು ಎಂದು ತಿಳಿದುಬಂದಿದೆ. ಈ ಒಂದು ದೋಷವು ವಿಮಾನದ ಎಲಿವೇಟರ್ ಮತ್ತು ಐಲೆರಾನ್ ಕಂಪ್ಯೂಟರ್‌ಗೆ ಸಂಬಂಧಿಸಿದೆ. ಇದರಿಂದ ಪೈಲಟ್‌ ವಿಮಾನ ಮೇಲಿನ ತಮ್ಮ ನಿಯಂತ್ರಣ ಕಳೆದುಕೊಂಡು ವಿಮಾನ ಅನಿರೀಕ್ಷಿತವಾಗಿ ಕೆಳಗೆ ಬೀಳಬಹುದು ಎಂದು ತಿಳಿದುಬಂದಿದೆ.

ಏನು ಮಾಡಲಿದ್ದಾರೆ?

ತುರ್ತು ರಿಪೇರಿಗೆ ಏರ್‌ಬಸ್ ಮತ್ತು ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (EASA) ಕರೆ ನೀಡಿದ್ದು, A320 ವರ್ಗಕ್ಕೆ ಸೇರಿದ ಎಲ್ಲ ವಿಮಾನಗಳನ್ನು ಮುಂದಿನ ಹಾರಾಟಕ್ಕೂ ಮೊದಲು ಸಾಫ್ಟ್‌ವೇರ್ ಅಪ್‌ಡೇಟ್ ಅಥವಾ ಹಾರ್ಡ್‌ವೇರ್ ಬದಲಾವಣೆ ಮಾಡಲಾಗುತ್ತದೆ. ಹೆಚ್ಚಿನ ವಿಮಾನಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್ (ಹಳೆಯ ವರ್ಷನ್‌ಗೆ ರಿವರ್ಟ್) ಸುಮಾರು 2 ರಿಂದ 3 ಗಂಟೆಗಳು ತಗುಲುತ್ತದೆ. ಆದರೆ 900 ರಿಂದ 1,000 ಹಳೆಯ ವಿಮಾನಗಳಿಗೆ ಹಾರ್ಡ್‌ವೇರ್ ಬದಲಾವಣೆಗೆ 1 ರಿಂದ 2 ದಿನಗಳು ಅಥವಾ ಅದಕ್ಕಿಂತಲೂ ಹೆಚ್ಚು ದಿನಗಳಾಗಬಹುದು.

ಪರಿಣಾಮವೇನು?

ಈ ತುರ್ತು ರಿಪೇರಿಯಿಂದಾಗಿ ವಿಶ್ವದಾದ್ಯಂತ ವಿಮಾನಯಾನ ಸಂಸ್ಥೆಗಳಲ್ಲಿ ವಿಮಾನಗಳ ವಿಳಂಬ ಮತ್ತು ಟಿಕೆಟ್​ ರದ್ದತಿ ಉಂಟಾಗುವ ಸಾಧ್ಯತೆಯಿದೆ. ಅಮೆರಿಕ ಏರ್​ಲೈನ್ಸ್​ನ 340 ವಿಮಾನಗಳು, ಡೆಲ್ಟಾದ 50ಕ್ಕೂ ಕಡಿಮೆ ವಿಮಾನಗಳು, ಯುನೈಟೆಡ್​ನ 6 ಮತ್ತು ಜೆಟ್​ಬ್ಲೂ ವಿಮಾನಗಳ ಮೇಲೆ ಪರಿಣಾಮ ಬೀರಲಿದ್ದು, ಮುಖ್ಯವಾಗಿ ವೀಕೆಂಡ್‌ನಲ್ಲಿ ಹಾಲಿಡೇ ಟ್ರಾವೆಲ್ ವಿಳಂಬವಾಗುವುದರಿಂದ ಅನೇಕ ಮಂದಿ ಟಿಕೆಟ್​ ಅನ್ನು ರದ್ದು ಮಾಡುವ ಸಾಧ್ಯತೆಗಳಿವೆ. ಯುರೋಪ್​ನಲ್ಲಿ Lufthansa, easyJetನ ಕೆಲವು ವಿಮಾನಗಳಲ್ಲಿ ಈಗಾಗಲೇ ಟಿಕೆಟ್​ಗಳನ್ನು ರದ್ದು ಮಾಡಲಾಗಿದೆ.

ಭಾರತದ ಮೇಲೆ ಹೇಗೆ ಪರಿಣಾಮ?

ಭಾರತದಲ್ಲಿ ಇಂಡಿಗೋ (IndiGo) ಮತ್ತು ಏರ್ ಇಂಡಿಯಾ (Air India) ಸೇರಿದಂತೆ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ A320 ವಿಮಾನಗಳ ಸಮೂಹದಲ್ಲಿ ರಿಪೇರಿ ಕೆಲಸವನ್ನು ಕೈಗೆತ್ತಿಕೊಂಡಿವೆ. ಸುಮಾರು 350ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ಅಡಚಣೆ ಉಂಟಾಗಲಿದೆ. ಸದ್ಯ ಶೇ. 56 ರಷ್ಟು ರಿಪೇರಿ ಪೂರ್ಣಗೊಂಡಿದೆ. ಡಿಸೆಂಬರ್ 1 ಅಥವಾ 2ರೊಳಗೆ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಇಂಡಿಗೋ ಹೇಳಿದೆ. ಅಲ್ಲದೆ, ಕೆಲವರು ಟಿಕೆಟ್​ ರದ್ದು ಮಾಡಿರುವುದಾಗಿಯೂ ತಿಳಿಸಿದೆ. ಅದೇ ರೀತಿ ಏರ್​ ಇಂಡಿಯಾ ಮತ್ತು ಏರ್​ ಇಂಡಿಯಾ ಎಕ್ಸ್​ಪ್ರೆಸ್​ನ ಸುಮಾರು 50ಕ್ಕೂ ಹೆಚ್ಚು ವಿಮಾನಗಳು ಸಂಚಾರ ಅಡಚಣೆ ಎದುರಿಸಿದ್ದು, ಕೆಲವರು ಟಿಕೆಟ್​ ರದ್ದು ಮಾಡಿರುವುದಾಗಿ ತಿಳಿಸಿವೆ.
ಈ ಒಂದು ಕ್ರಮವು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮವಾಗಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು ಏರ್​ಬಸ್​ ಕಂಪನಿ ಮನವಿ ಮಾಡಿದೆ, (ಏಜೆನ್ಸೀಸ್​).